ADVERTISEMENT

ಖಗೋಳದ ವಿಸ್ಮಯ ವಿದ್ಯಾರ್ಥಿಗಳಿಗೆ ತಲುಪಿಸಿ

ಖಗೋಳ ವಿಜ್ಞಾನ ಕಾರ್ಯಾಗಾರದಲ್ಲಿ ಹಿರಿಯ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2013, 9:07 IST
Last Updated 17 ಫೆಬ್ರುವರಿ 2013, 9:07 IST
ಚಿತ್ರದುರ್ಗದಲ್ಲಿ ಶನಿವಾರ ನಡೆದ ಖಗೋಳ ವಿಜ್ಞಾನ ಕಾರ್ಯಾಗಾರದಲ್ಲಿ ಹಿರಿಯ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಮಕ್ಕಳಿಗಾಗಿ ಪ್ರಕಟಿಸಿರುವ ಖಗೋಳ ವಿಜ್ಞಾನ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಎಸ್.ಕೆ.ಬಿ. ಪ್ರಸಾದ್, ಎನ್.ಎಂ. ರಮೇಶ್, ಡಿಡಿಪಿಐ ಮಂಜುನಾಥ್, ಶಿವಮೂರ್ತಿ ಮುರುಘಾ ಶರಣರು, ಡಿ. ಮಲ್ಲಾರೆಡ್ಡಿ, ಚಳ್ಳಕೆರೆ ಯರ‌್ರಿಸ್ವಾಮಿ, ಎಚ್.ಎಸ್.ಟಿ. ಸ್ವಾಮಿ ಹಾಜರಿದ್ದರು.
ಚಿತ್ರದುರ್ಗದಲ್ಲಿ ಶನಿವಾರ ನಡೆದ ಖಗೋಳ ವಿಜ್ಞಾನ ಕಾರ್ಯಾಗಾರದಲ್ಲಿ ಹಿರಿಯ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಮಕ್ಕಳಿಗಾಗಿ ಪ್ರಕಟಿಸಿರುವ ಖಗೋಳ ವಿಜ್ಞಾನ ಕುರಿತ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಎಸ್.ಕೆ.ಬಿ. ಪ್ರಸಾದ್, ಎನ್.ಎಂ. ರಮೇಶ್, ಡಿಡಿಪಿಐ ಮಂಜುನಾಥ್, ಶಿವಮೂರ್ತಿ ಮುರುಘಾ ಶರಣರು, ಡಿ. ಮಲ್ಲಾರೆಡ್ಡಿ, ಚಳ್ಳಕೆರೆ ಯರ‌್ರಿಸ್ವಾಮಿ, ಎಚ್.ಎಸ್.ಟಿ. ಸ್ವಾಮಿ ಹಾಜರಿದ್ದರು.   


ಚಿತ್ರದುರ್ಗ: ವಿಜ್ಞಾನ ಶಿಕ್ಷಣದಲ್ಲಿ ಖಗೋಳಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಕುತೂಹಲ ಮೂಡಿಸುವುದು ಮುಖ್ಯ ಎಂದು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ವಿಜ್ಞಾನ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ನಗರದ ಕೋಟೆ ಮುಂಭಾಗದಲ್ಲಿರುವ ಯಾತ್ರಿ ನಿವಾಸದಲ್ಲಿ ಶನಿವಾರ ತಾರಾ ಮಂಡಲ, ಕರ್ನಾಟಕ ರಾಜ್ಯ ವಿಜ್ಞಾನತಂತ್ರ ವಿದ್ಯಾ ಮಂಡಳಿ ಮತ್ತು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ `ಟ್ರಾನ್ಸಿಟ್ ಆಫ್ ವೀನಸ್: ಖಗೋಳ ವಿಜ್ಞಾನ ಕಾರ್ಯಾಗಾರ' ಉದ್ಘಾಟಿಸಿ ಅವರು ಮಾತನಾಡಿದರು.

ವಿಸ್ಮಯ ಮತ್ತು ವೈಜ್ಞಾನಿಕ ವಿಷಯಗಳ ಮೂಲಕ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಈ ಮೂಲಕ ವೈಜ್ಞಾನಿಕ ಮನೋಭಾವ ಮೂಡಿಸಬೇಕು. ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಅರಿವು ಮೂಡಿಸಬೇಕು ಎಂದರು.

ಸಮಾರಂಭದ ನೇತೃತ್ವ ವಹಿಸಿದ್ದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಖಗೋಳ ಲೋಕ ವಿಸ್ಮಯವಾದದ್ದು. ಖಗೋಳ ಲೋಕದಲ್ಲಿ ಅನೇಕ ಅದ್ಭುತಗಳನ್ನು ನೋಡಬಹುದು. ಆದರೆ, ಆಧುನಿಕ ಮಾನವನಿಗೆ ಅನ್ವೇಷಣೆಯ ವ್ಯವಧಾನ ಇಲ್ಲದಂತಾಗಿದೆ. ವಿಸ್ಮಯಗಳ ಬದಲು ಸಮಸ್ಯೆಗಳೇ ಕಾಣುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಬ್ಬ ವಿಜ್ಞಾನಿಯಲ್ಲಿ ತತ್ವಜ್ಞಾನ ಇರಬೇಕು. ತತ್ವಜ್ಞಾನಿ ವಿಜ್ಞಾನಿಯೂ ಆಗಿರಬೇಕು. ಇಂತಹ ವಿಜ್ಞಾನಿ ಮತ್ತು ತತ್ವಜ್ಞಾನಿ ಜಗತ್ತಿಗೆ ಮಾರ್ಗದರ್ಶನ ನೀಡಬಲ್ಲರು. ಒಬ್ಬ ಶಿಕ್ಷಕ ವಿಜ್ಞಾನಿ ಮತ್ತು ತತ್ವಜ್ಞಾನಿಯಾಗಿ ಆಲೋಚಿಸಿ ಬೋಧಿಸಬೇಕು ಎಂದು ಕಿವಿಮಾತು ಹೇಳಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಿ. ಮಲ್ಲಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎಚ್. ಮಂಜುನಾಥ್, ಶಿಕ್ಷಣಾಧಿಕಾರಿ ಎಸ್.ಕೆ.ಬಿ. ಪ್ರಸಾದ್, ಎನ್.ಎಂ. ರಮೇಶ್ ಉಪಸ್ಥಿತರಿದ್ದರು. ಲತೀಫ್ ಪ್ರಾರ್ಥಿಸಿದರು. ತಾರಾಮಂಡಲದ ಗೌರವ ನಿರ್ದೇಶಕ ಚಳ್ಳಕೆರೆ ಯರ್ರಿಸ್ವಾಮಿ ಸ್ವಾಗತಿಸಿದರು.

ಹುರುಳಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ. ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. 

ವಿವಿಧೆಡೆಗಳಿಂದ ಆಗಮಿಸಿದ್ದ ವಿಜ್ಞಾನ ಶಿಕ್ಷಕರಿಗೆ ಎರಡು ದಿನಗಳ ಕಾಲ ಅನುಭವಿ ತಜ್ಞರಿಂದ ಖಗೋಳ ವಿಜ್ಞಾನದ ಕುರಿತ ಉಪನ್ಯಾಸ, ಟೆಲಿಸ್ಕೋಪ್ ಬಳಕೆಯ ಬಗ್ಗೆ ತರಬೇತಿ ಚಟುವಟಿಕೆಗಳು ನಡೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.