ಚಿತ್ರದುರ್ಗ: ಪುರಾತತ್ವ ಇಲಾಖೆಯೊಂದೇ ಸ್ಮಾರಕಗಳನ್ನು ಸಂರಕ್ಷಿಸುವುದು ಕಷ್ಟಸಾಧ್ಯ. ಆದ್ದರಿಂದ ಖಾಸಗಿ ಸಹಭಾಗಿತ್ವದಲ್ಲಿ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ಇದರೊಂದಿಗೆ ಇಲಾಖೆ ಕಾಲೇಜುಗಳ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಸ್ಮಾರಕ ರಕ್ಷಣೆ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಒಂದೊಂದು ಘಟಕಕ್ಕೆ ರೂ 5 ಸಾವಿರ ನೀಡಲಾಗುವುದು ಎಂದು ಪುರಾತತ್ವ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್ ತಿಳಿಸಿದರು.
ನಗರದ ಚಂದ್ರವಳ್ಳಿ ರಸ್ತೆಯಲ್ಲಿರುವ ಎಸ್‌ಜೆಎಂ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಜಯದೇವ ಸಭಾಂಗಣದಲ್ಲಿ ಮಂಗಳವಾರ ಇತಿಹಾಸ ವಿಭಾಗ, ಪರಂಪರೆ ಕೂಟ, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ ಸಾಂಸ್ಕೃತಿಕ ಪರಂಪರೆ ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಮತ್ತು ಪುನಾರಚನೆ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ಮಾರಕಗಳನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಹೊಸ ದೇವಾಲಯಗಳನ್ನು ನಿರ್ಮಿಸುವ ಬದಲಿಗೆ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುವಜನತೆ ಚಿಂತನೆ ನಡೆಸಬೇಕು. ದೇವಾಲಯ ಕಟ್ಟುವುದು ಕಷ್ಟವೇನಿಲ್ಲ. ಆದರೆ ಪ್ರಾಚೀನ ದೇವಾಲಯ, ಸ್ಮಾರಕ ರಕ್ಷಿಸುವುದು ಮುಖ್ಯ. ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಸಾರ್ವಜನಿಕರು ಇಲಾಖೆ ಕೈಗೊಳ್ಳುವ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರ ಸ್ಮಾರಕಗಳ ರಕ್ಷಣೆಗಾಗಿ ರೂ 100 ಕೋಟಿ ಮೀಸಲಿಟ್ಟಿದೆ. ಈ ಹಣದಲ್ಲಿ ಸ್ಮಾರಕಗಳ ರಕ್ಷಣೆ ಮತ್ತು ಪ್ರಾಚೀನ ದೇವಾಯಲಗಳ ಜೀರ್ಣೋದ್ಧಾರ ಮಾಡಲು ಅವಕಾಶ ಇದೆ. ಚಿತ್ರದುರ್ಗದ ಉಚ್ಚಂಗಿ ಯಲ್ಲಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡಲಾಗುವುದು ಎಂದರು.
ಚಿತ್ರದುರ್ಗದ ಐತಿಹಾಸಿಕ ಕೋಟೆ ಸೊಬಗನ್ನು ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಪ್ರಚಾರದ ಕೊರತೆ ಕಾರಣ ಇರಬಹುದು. ಕೋಟೆಯನ್ನು ನೋಡುವರ ಸಂಖ್ಯೆ ಹೆಚ್ಚಾಗುವಂತೆ ಆಕರ್ಷಣೀಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಪೂರ್ವಕಾಲದ ಇತಿಹಾಸ ಅರಿಯಲು ಸ್ಮಾರಕಗಳು ಸಹಕಾರಿಯಾಗಿವೆ. ಪ್ರಸ್ತುತ ಸ್ಥಾವರಗಳನ್ನು ರಕ್ಷಣೆ ಮಾಡುವಷ್ಟು ಸ್ಮಾರಕಗಳನ್ನು ಮಾಡುತ್ತಿಲ್ಲ. ಸ್ಥಾವರಗಳು ಇತಿಹಾಸ ಸಾರುವುದಿಲ್ಲ. ಸ್ಥಾವರ ರಕ್ಷಿಸುವ ಕಾರ್ಯ ಹೆಚ್ಚಾಗುತ್ತಿದ್ದು ಇದರಿಂದ ಭೌತಿಕವಾಗಿ ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜದಲ್ಲಿ ವಿಜ್ಞಾನ ವ್ಯಾಸಂಗ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಇತಿಹಾಸ ಪದವಿ ಪಡೆದ ಪದವೀಧರರು ಇತಿಹಾಸ ವಿಷಯದಿಂದ ದೂರ ಸರಿಯುತ್ತಿದ್ದಾರೆ. ಇತಿಹಾಸ ಅರಿವು ಎಲ್ಲರಿಗೂ ಇರಬೇಕು. ಇದಕ್ಕಾಗಿ ಹೆಚ್ಚಿನ ಅಧ್ಯಯನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ಬಿ.ಎಸ್. ಉಮಾ ಮಹೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಎಂ.ಜಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಲಕ್ಷ್ಮಣ್ ತೆಲಗಾವಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ಸಿ.ಬಿ. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ರಾಜೇಶ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಚ್. ಶ್ರೀನಿವಾಸರೆಡ್ಡಿ ಸ್ವಾಗತಿಸಿದರು. ಪ್ರೊ.ಸಿ. ಬಸವರಾಜಪ್ಪ ವಂದಿಸಿದರು. ಡಾ.ಬಿ.ಸಿ. ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.