ADVERTISEMENT

ಗುಣಮಟ್ಟದ ಜತೆ ಪೈಪೋಟಿ ಎದುರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:30 IST
Last Updated 5 ಫೆಬ್ರುವರಿ 2011, 7:30 IST


ಚಿತ್ರದುರ್ಗ: ಸ್ತ್ರೀಶಕ್ತಿ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅಗತ್ಯ ಎಂದು ಶಾಸಕ ಎಸ್.ಕೆ. ಬಸವರಾಜನ್ ಅಭಿಪ್ರಾಯಪಟ್ಟರು.
ಗುರುಭವನದಲ್ಲಿ ಶುಕ್ರವಾರ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳೆಯರು ತಯಾರಿಸಿದ ಜಿಲ್ಲಾಮಟ್ಟದ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹೆಚ್ಚು ಒತ್ತು ನೀಡಬೇಕು. ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ವಸ್ತುಗಳ ಗುಣಮಟ್ಟ ಕಾಯ್ದುಕೊಂಡು ಆಕರ್ಷಕ ರೀತಿಯಲ್ಲಿ ಮಾರಾಟಕ್ಕೆ ಸಿದ್ಧಪಡಿಸಿಕೊಳ್ಳುವಂತೆ ಅವರು ಮಹಿಳೆಯರಿಗೆ ಸಲಹೆ ನೀಡಿದರು.ಬ್ಯಾಂಕ್‌ಗಳು ಸಹ ಈ ಸಂಘಗಳಿಗೆ ಹೆಚ್ಚಿನ ಸಹಾಯ ನೀಡಿ  ಪ್ರೋತ್ಸಾಹಿಸಬೇಕು ಎಂದು ನುಡಿದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಸ್ವಸಹಾಯ ಸಂಘಗಳು ಉತ್ಪಾದಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆಯನ್ನು ಸರ್ಕಾರ ಕಲ್ಪಿಸಬೇಕು. ಉತ್ಪಾದಿಸುವ ವಸ್ತುಗಳ ಬೆಲೆಯಲ್ಲಿ ಶೇ. 50ರಷ್ಟು ಸಹಾಯಧನವನ್ನು ಸರ್ಕಾರ ನೀಡಬೇಕು. ದೊರೆತಲ್ಲಿ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಲು ಶಕ್ತಿಯನ್ನು ನೀಡಿದಂತಾಗುವುದು ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ, ಉಪಾಧ್ಯಕ್ಷ ಅಲ್ಲಾಭಕ್ಷ, ಅಂಗವಿಕಲ ಕಲ್ಯಾಣಾಧಿಕಾರಿ ಗಿರಿಜಾಂಬಾ, ಲೀಡ್ ಬ್ಯಾಂಕ್ ಪ್ರಬಂಧಕ ಆರ್.ಸಿ. ಪಾಟೀಲ್ ಹಾಜರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಎಂ.ಎಸ್. ಜಯಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ರಾಮೇಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.