ADVERTISEMENT

ಗ್ರಂಥಾಲಯ ವ್ಯಕ್ತಿತ್ವ ರೂಪಿಸುವ ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 5:25 IST
Last Updated 12 ಜುಲೈ 2012, 5:25 IST

ಚಿತ್ರದುರ್ಗ: ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಿಸುವ ಶಕ್ತಿ ಕೇಂದ್ರ ಗ್ರಂಥಾಲಯಕ್ಕಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎ. ಗೋಪಾಲ್ ಅಭಿಪ್ರಾಯಪಟ್ಟರು.   

ಮೂರು ದಿನಗಳಿಂದ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆದ ರಾಜಾರಾಮ್ ಮೋಹನ್‌ರಾಯ್ ಗ್ರಂಥಾಲಯ ಪ್ರತಿಷ್ಠಾನ ಕೊಲ್ಕತ್ತಾ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ಗ್ರಂಥಾಲಯದ ಇಲಾಖೆಯಲ್ಲಿನ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಚರಿತ್ರೆ ಮತ್ತು ಇತಿಹಾಸವನ್ನು ಕಲೆ ಹಾಕುವ ಸಂಸ್ಥೆ ಗ್ರಂಥಾಲಯವಾಗಿದ್ದು, ಇದರ ಬಗ್ಗೆ ತಾತ್ಸಾರ ಮನೋಭಾವ ಬೇಡ. ಮನುಷ್ಯನ ಹುಟ್ಟು ಸಾವಿನ ನಡುವೆ ಕಲಿಕೆಯಿದೆ. ಗ್ರಂಥಾಲಯಗಳು ಸಂಶೋಧನಾ ಕೇಂದ್ರಗಳಾಗಿವೆ. ಜನತೆಗೆ ಸರಿಯಾದ ರೀತಿಯಲ್ಲಿ ಗ್ರಂಥಾಲಯ ಮಾಹಿತಿ ಒದಗಿಸಬೇಕು. ಹಾಗೆಯೇ ಗ್ರಂಥಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವ ಕಾರ್ಯ ಗ್ರಂಥಾಲಯ ಸಿಬ್ಬಂದಿ ಮಾಡಬೇಕು ಎಂದು ಹೇಳಿದರು.

ಅಭಿವೃದ್ದಿ ಎಂದರೆ ಕೇವಲ ರಸ್ತೆ, ಮನೆ, ಚರಂಡಿಗಳ ನಿರ್ಮಾಣ ಮಾತ್ರವಲ್ಲ. ಗ್ರಂಥಾಲಯ ಸಹ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಆದರೆ, ಅದು ಕಣ್ಣಿಗೆ ಕಾಣುತ್ತಿಲ್ಲ. ಗ್ರಂಥಾಲಯಗಳು ನಿರ್ಲಕ್ಷಕ್ಕೆ ಒಳಗಾಗಿದೆ. ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ನಿರ್ಮಾಣ ಮಾಡುವಲ್ಲಿ ಗ್ರಂಥಾಲಯಗಳು ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಗೋಪಾಲ್ ಹೇಳಿದರು.

ಗ್ರಾಮಾಂತರ ಪ್ರದೇಶದಲ್ಲಿ ಜನತೆಯ ಮನವೊಲಿಸುವ ಮೂಲಕ ಗ್ರಂಥಾಲಯಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕಿದೆ. ಇದರ ಜೊತೆಯಲ್ಲಿ ಓದುಗರನ್ನು ಸೇರಿಸಿಕೊಂಡು ಸ್ವಸಹಾಯ ಸಂಘದ ಮಾದರಿಯಲ್ಲಿ ಸಂಘ ರಚಿಸುವಂತೆ ಗ್ರಂಥಪಾಲಕರಿಗೆ ಕರೆ ನೀಡಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಅಧಿಕಾರಿ ಬಿ.ಆರ್. ಹಿರೇಮಠ್ ಮಾತನಾಡಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಈ ರೀತಿಯ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ಪಡೆದಿರುವ ತರಬೇತಿಯನ್ನು ಮುಂದಿನಗಳಲ್ಲಿ ತಮ್ಮ ಕೆಲಸದಲ್ಲಿ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ. ಪರಿಸ್ಥಿತಿಗೆ ತಕ್ಕಂತೆ ಗ್ರಂಥಾಲಯಗಳು ಸಹ ಬದಲಾವಣೆಯಾಗಿ ಜನತೆ ಬೇಕಾದ ಮಾಹಿತಿಯನ್ನು ನೀಡಬೇಕಿದೆ ಎಂದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಷರೀಫಾಬಿ ಮಾತನಾಡಿ ಒಂದು ಕಾಲದಲ್ಲಿ ಗ್ರಂಥಾಲಯಗಳು ಮಹತ್ತರವಾದ ಪಾತ್ರವನ್ನು ಹೊಂದಿದ್ದವು. ಎಲ್ಲೂ ಸಿಗದ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗುತ್ತವೆ ಎನ್ನುವ ನಂಬಿಕೆಯಿತ್ತು. ತಾವು ಸಹ ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳನ್ನು ಓದಿಯೇ ಪದವಿ ಪಡೆದಿದ್ದೇನೆ ಎಂದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಜಿ.ಸಿ. ಮಲ್ಲಿಕಾರ್ಜನಪ್ಪ, ಗ್ರಂಥಾಲಯ ಪ್ರಾಧಿಕಾರ ಸದಸ್ಯ ವೆಂಕಣ್ನಾಚಾರ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ತಿಪ್ಪಮ್ಮ ಪ್ರಾರ್ಥಿಸಿದರು. ಗ್ರಂಥಪಾಲಕ ಉಮೇಶ್ ಸ್ವಾಗತಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ವಂದಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.