ಚಿತ್ರದುರ್ಗ: ಗ್ರಾಮೀಣರ ಕಸುಬು ಮತ್ತು ವೈವಿಧ್ಯಮವಾಗಿರುವ ಭಾಷೆ ಕಾ.ತ. ಚಿಕ್ಕಣ್ಣ ಅವರ ಕಥೆಗಳಲ್ಲಿ ಅಭಿವ್ಯಕ್ತವಾಗಿದೆ ಎಂದು ಹಿರಿಯ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ರಂಗ ಪರಿಷತ್ ಹಾಗೂ ರಂಗ ಸೌರಭ ಕಲಾ ಸಂಘದ ಸಂಯುಕ್ತವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಕತಾಚಿ ಕಥನ: ಒಂದು ಹೊತ್ತು~ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾತಚಿ ಗ್ರಾಮೀಣ ಮೂಲದ ಪ್ರತಿಭೆ. ವಿಚಿತ್ರ ಕಸುವು, ಉತ್ಸಾಹ, ಜೀವನ ದರ್ಶನ ಇವರ ಕಥೆಗಳಲ್ಲಿದೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಶಕ್ತವಾದ ಕಥೆಗಳಿವೆ. ಇವರ ಕಥೆಗಳು ರಂಗಭೂಮಿಯಲ್ಲಿ ಪ್ರದರ್ಶನವಾಗಿರುವುದು ಸಹ ಉತ್ತಮ ಬೆಳವಣಿಗೆ. ಸಾಹಿತ್ಯ ದೃಶ್ಯಮಾಧ್ಯಮ ರೂಪದಲ್ಲಿ ಜನರ ಮುಂದೆ ಬರುವುದರಿಂದ ಪುಸ್ತಕ ಓದದವರಿಗೂ ಅನುಕೂಲ ಆಗುತ್ತದೆ ಎಂದರು.
ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿ, ಬದುಕಿಗೆ ಬೇಕಾದ ವೈಚಾರಿಕತೆ, ಆಲೋಚನಾ ಕ್ರಮ ಕಾ.ತ. ಚಿಕ್ಕಣ್ಣ ಅವರ ಕಥೆಗಳಲ್ಲಿದ್ದು, ಇವು ಬಾಳುವ, ಬಾಳಿಸುವ ಕಥೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಕಥೆಗಾರ ಎಲ್ಲ ಕಾಲ, ದೇಶಗಳಿಗೆ ಸೇರಿದವನು. ಮನುಷ್ಯ ಲೋಕದ ಕ್ರೌರ್ಯ, ತಲ್ಲಣಗಳನ್ನು ಸೂಕ್ಷ್ಮ ಮನಸ್ಸುಗಳಿಂದ ಸ್ಪಂದಿಸಿ ಕಥೆಯಾಗಿಸುತ್ತಾನೆ. ಬದುಕನ್ನು ಯಾವ ರೀತಿ ಕಟ್ಟಿಕೊಡಬೇಕು ಮತ್ತು ಕ್ಷಿಪ್ರವಾಗಿ ಬದಲಾಗುತ್ತಿರುವ ಭಾರತೀಯ ಸಮಾಜದ ವೈವಿಧ್ಯಮಯವನ್ನು ಚಿಕ್ಕಣ್ಣ ಕಟ್ಟಿಕೊಡುತ್ತಾರೆ ಎಂದರು.
ಮನುಷ್ಯನ ಕ್ರೌರ್ಯದಿಂದ ಸೃಷ್ಟಿಯಾದ ತಲ್ಲಣ, ಬಿಕ್ಕಟ್ಟುಗಳನ್ನು ಕುರಿತು ಸೂಕ್ಷ್ಮ ಮನಸ್ಸು ಧ್ಯಾನಿಸುತ್ತದೆ. ಇದಕ್ಕೆ ಪರಿಹಾರವಾಗಿ ಶೋಧನೆಗಿಳಿದು ಸೃಜನಶೀಲ ಬರವಣಿಗೆಯಲ್ಲಿ ತೊಡಗುತ್ತಾನೆ. ಎಲ್ಲ ಬರಹಗಾರರ ಹಿಂದಿನ ತಲ್ಲಣ, ವಿಸ್ಮಯ, ಬೆರಗು ಇಲ್ಲಿಯೂ ಕಂಡು ಬರುತ್ತದೆ ಎಂದು ಹೇಳಿದರು.
ಇವರ ಕಥೆಗಳು ಸಾಮರಸ್ಯ ಸ್ಥಾಪಿಸುವ ಪ್ರಮೇಯವನ್ನು ಮುಂದಿಡುತ್ತವೆ. ಮಾನವೀಯತೆ, ಮನುಷ್ಯತ್ವ ಪರವಾಗಿ ಮಾತನಾಡುತ್ತಲೇ ಅನ್ಯಾಯಕ್ಕೆ, ಶೋಷಣೆ, ಅನ್ನಕ್ಕಾಗಿ ಅವಮಾನ ಸಹಿಸಿಕೊಳ್ಳುವ ಸಮುದಾಯಗಳಲ್ಲಿ ಆತ್ಮಪ್ರತ್ಯಯ ತನ್ನಿಂತಾನೇ ಬರುತ್ತದೆ ಹಾಗೂ ನಿರ್ಲಕ್ಷಿತ ಸಮುದಾಯಗಳಲ್ಲೂ ಸೃಜನಾಶಕ್ತಿಯೊಟ್ಟಿಗೆ ಸಮಾಜ ಮುನ್ನಡೆಸಬಲ್ಲ ಛಾತಿಯೂ ಇದೆ ಎಂಬುದನ್ನು ಅನೇಕ ಕಥೆಗಳು ನಿರೂಪಿಸುತ್ತವೆ ಎಂದು ಹೇಳಿದರು.
ಕತಾಚಿ ಭಾಷಾ ವಿಶೇಷ ಕುರಿತು ಮಾತನಾಡಿದ ಕವಯತ್ರಿ ತಾರಿಣಿ ಶುಭದಾಯಿನಿ, ಲಂಕೇಶ್ ಸೇರಿದಂತೆ ಗ್ರಾಮೀಣ ಸಮುದಾಯದಿಂದ ಬಂದ ಬಹುತೇಕರು ಅದಕ್ಕೆ ಹೊರತಾದ ಭಾಷೆಯನ್ನು ಬಳಸಿದ್ದಾರೆ.
ದೇವನೂರ ಮಹಾದೇವ ಅವರ `ಕುಸುಮಬಾಲೆ~ ನಂತರ ಹೊಸ ಭಾಷಾ ಪ್ರವಾಹ ಕಥೆಗಳಲ್ಲಿ ಆರಂಭವಾಯಿತು. ಸಮಾಜಶಾಸ್ತ್ರೀಯ ವಿವರಗಳನ್ನು ಹೇಳುವ ಒತ್ತಡಕ್ಕೆ ಸಿಲುಕಿದ ಅನೇಕರು ಗ್ರಾಮೀಣ ಭಾಷೆ ಬಳಸಿದರು. ಆದರೆ ಇಂತಹ ಬಹುತ್ವ ಕಾವ್ಯದಲ್ಲಿ ಆಗಲಿಲ್ಲ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತ ಸಾಹಿತಿ ಡಾ.ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಂತರ ಸಂವಾದ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.