ADVERTISEMENT

ಜಿಲ್ಲೆಗೆ ಮಹಿಳಾ ಸರ್ಕಾರಿ ಪದವಿ ಕಾಲೇಜು

ಚಿತ್ರದುರ್ಗ, ಚಿತ್ರಹಳ್ಳಿಯಲ್ಲಿ ಆರಂಭ: ಸಚಿವ ಎಚ್‌.ಆಂಜನೇಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 5:04 IST
Last Updated 11 ಸೆಪ್ಟೆಂಬರ್ 2013, 5:04 IST

ಚಿತ್ರದುರ್ಗ: ಜಿಲ್ಲೆಗೆ  ಎರಡು ಮಹಿಳಾ ಸರ್ಕಾರಿ ಪದವಿ ಕಾಲೇಜುಗಳು ಮಂಜೂರಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನಗರ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಮಹಿಳಾ ಸರ್ಕಾರಿ ಪದವಿ ಕಾಲೇಜುಗಳನ್ನು ಆರಂಭಿಸಲಾಗುತ್ತದೆ.  ಜಿಲ್ಲೆಯಲ್ಲಿ ಹಾಲಿ ಇರುವ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿ ಕೊರತೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳ ಸಮಸ್ಯೆ ಉಂಟಾಗಿದೆ. ಇದನ್ನು ಪರಿಗಣಿಸಿ ಜಿಲ್ಲೆಗೆ ಎರಡು ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ಶೈಕ್ಷಣಿಕ ವರ್ಷದಿಂದಲೇ ಕಾಲೇಜುಗಳು  ಆರಂಭವಾಗುತ್ತದೆ.  ಸದ್ಯ ಬಾಡಿಗೆ ಕಟ್ಟಡಗಳಲ್ಲಿ ಕಾಲೇಜುಗಳು ನಡೆಯು ತ್ತವೆ. ಅದಕ್ಕಾಗಿ ಎರಡು ಕಡೆ ಕಾಲಿ ಕಟ್ಟಡಗಳನ್ನು ಗುರುತಿಸುವಂತೆ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಮೂರು ವಿಭಾಗದಲ್ಲೂ ಕೋರ್ಸ್: ಹಾಲಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹೆಚ್ಚುವರಿಯಾಗಿರುವ ಹಾಗೂ ಮಹಿಳಾ ಕಾಲೇಜಿಗೆ ಸೇರಲು ಆಸಕ್ತಿ ತೋರುವ ವಿದ್ಯಾರ್ಥಿನಿಯರನ್ನು ಹೊಸ ಕಾಲೇಜಿಗೆ ವರ್ಗಾಯಿಸಲಾಗುತ್ತದೆ.  ಈ ಬಗ್ಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಸದ್ಯ ಚಿತ್ರದುರ್ಗದಲ್ಲಿ ಆರಂಭವಾಗಲಿರುವ ಕಾಲೇಜಿನಲ್ಲಿ ಆರ್ಟ್ಸ್, ಕಾಮರ್ಸ್ ಆರಂಭಿಸಲಾಗುತ್ತದೆ.  ವಿಜ್ಞಾನ ವಿಭಾಗ ಆರಂಭಿಸುವ ಬಗ್ಗೆ ಸ್ವತಃ ಶಿಕ್ಷಣ ಇಲಾಖೆ ಹಾಗೂ ಉಪನ್ಯಾಸಕರೇ ಆಸಕ್ತಿ ತೋರಿದ್ದು, ಆ ಪ್ರಕಾರ ಮೂರು ವಿಭಾಗದಲ್ಲೂ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ.   ಚಿತ್ರಹಳ್ಳಿಯಲ್ಲಿ ಕಲಾ ಮತ್ತು ಕಾಮರ್ಸ್ ವಿಭಾಗದಲ್ಲಿ ಕೋರ್ಸ್ ಶುರುವಾಗುತ್ತವೆ ಎಂದು ಸಚಿವರು ವಿವರಿಸಿದರು.

ಹೊಸ ಕಾಲೇಜುಗಳಿಗೆ ಆರಂಭದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತದೆ. ಇದರ ಜತೆಗೆ ಅನುಭವೀ ನಿವೃತ್ತ ಉಪನ್ಯಾಸಕರನ್ನೂ ಬಳಸಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗದಂತೆ
ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅಗತ್ಯಕ್ಕೆ ತಕ್ಕಂತೆ ಸೌಲಭ್ಯ: 'ಜಿಲ್ಲೆಯಲ್ಲಿ ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಹೊಸ ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ. ಈ ವರ್ಷ ಬಾಡಿಗೆ ಕಟ್ಟಡದಲ್ಲಿ ತರಗತಿಗಳು ನಡೆಯುತ್ತವೆ. ಮುಂದಿನ ವರ್ಷದಲ್ಲಿ ಈ ಕಾಲೇಜಿಗೆ ಸ್ವಂತ ಕಟ್ಟಡಗಳಾಗಬೇಕು. ಆದ್ದರಿಂದ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳು, ಕಟ್ಟಡಗಳನ್ನು ಗುರುತಿಸಿ.  ಕಾಲೇಜಿಗೆ ಬೇಕಾದ  ಕಟ್ಟಡ, ಆಟದ ಮೈದಾನ, ಶೌಚಾಲಯ, ಗ್ರಂಥಾಲಯ.. ಹೀಗೆ ಅಗತ್ಯ ಸೌಲಭ್ಯಗಳಿಗೆ ಬೇಕಾಗುವ ಹಣಕಾಸಿನ ಬಗ್ಗೆ ಯೋಜನೆ ಸಿದ್ಧಪಡಿಸಿ. ಕಟ್ಟಡಗಳ ನೀಲ ನಕ್ಷೆ ತಯಾರಿಸಿ' ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಡಿಡಿಪಿಐ ಎಚ್.ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಸ್ತಾವ ಸಲ್ಲಿಕೆ
ಜಿಲ್ಲೆಯಲ್ಲಿ 133 ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಇವುಗಳನ್ನು ಸರಿಪಡಿಸಲು ಹಣಕಾಸಿನ ಅವಶ್ಯಕತೆ ಇದೆ. ಈ ಕುರಿತು ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವ ಸಲ್ಲಿಸಿದ್ದೇವೆ.
–-ಎಚ್.ಮಂಜುನಾಥ್, ಡಿಡಿಪಿಐ

ಕ್ರಮ ಕೈಗೊಳ್ಳಿ

ಹೊಸ ಕಟ್ಟಡಗಳನ್ನು ಕಟ್ಟುವುದಕ್ಕೆ ಮುನ್ನ, ಹಾಲಿ ಜಿಲ್ಲೆಯಲ್ಲಿರುವ ಸರ್ಕಾರಿ ಕಟ್ಟಡಗಳನ್ನು ಪರಿಶೀಲಿಸಿ. ಒಂದು ಪಕ್ಷ ರಿಪೇರಿ ಮಾಡಲು ಸಾಧ್ಯವಾದರೆ, ಅದನ್ನೇ ಹೊಸ ಕಾಲೇಜುಗಳಿಗೂ ಬಳಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಡಿಡಿಪಿಐ ಕ್ರಮ ಕೈಗೊಳ್ಳಬೇಕು.
- –ಎಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.