ADVERTISEMENT

ತಾಕತ್ತಿದ್ದರೆ ಬಿಜೆಪಿ ಕ್ರಮ ಕೈಗೊಳ್ಳಲಿ: ಶಾಂತಾ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 7:50 IST
Last Updated 15 ಆಗಸ್ಟ್ 2012, 7:50 IST

ಚಿತ್ರದುರ್ಗ:  ಮಾಜಿ ಸಚಿವ ಜನಾರ್ದನರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಬಿಎಸ್‌ಆರ್ ಪಕ್ಷ ಸೇರಿ ರಾಜಕಾರಣ ಪ್ರವೇಶಿಸುವುದಾದರೆ ಅವರಿಗೆ ಪೂರ್ಣ ಸ್ವಾಗತವಿದೆ ಎಂದು ಸಂಸತ್ ಸದಸ್ಯೆ ಜೆ. ಶಾಂತಾ ತಿಳಿಸಿದರು.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಸ್ಲಿಮರು ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಲು ಮಂಗಳವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜನಾರ್ದನ ರೆಡ್ಡಿ ಅವರ ಬಂಧನವಾದ ನಂತರವೂ ಜನರು ಅವರ ಮನೆಗೆ ಆಗಮಿಸಿ ಬಂಧುಗಳಂತೆ ಮಾತನಾಡಿಸಿ ಹೋಗುತ್ತಿದ್ದಾರೆ. ಈ ಕುಟುಂಬ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದೆ. ಬಿಎಸ್‌ಆರ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ  ತಾಕತ್ತಿದ್ದರೆ ಬಿಜೆಪಿ ಕ್ರಮ ಕೈಗೊಳ್ಳಲಿ ಎಂದು ಸವಾಲು ಎಸೆದ ಅವರು ಆ ಕಾರಣಕ್ಕಾಗಿ ಕಚ್ಚಾಡುವುದನ್ನು ಬಿಟ್ಟು ಜನರ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ADVERTISEMENT

ಬಿಜೆಪಿಯಲ್ಲಿ ಅನ್ಯಾಯ ಆಗಿದ್ದರಿಂದ ಶ್ರೀರಾಮುಲು ನೇತೃತ್ವದ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಬಿಜೆಪಿ ವಿವರಣೆ ಕೇಳಿದರೆ ನೀಡುತ್ತೇನೆ. ಬಿಜೆಪಿ ಅಭ್ಯರ್ಥಿ ಎಂದು ಜನರು ತಮಗೆ ಮತ ನೀಡಿಲ್ಲ. ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಜನತೆ ತಮ್ಮನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ, ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಸಮರ್ಥಿಸಿಕೊಂಡರು.

ಬಳ್ಳಾರಿ ಜಿಲ್ಲಾಧಿಕಾರಿ  ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಕೂಡಲೇ ಅವರನ್ನು ಅಮಾನತ್ತು ಮಾಡಬೇಕು. ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಾಸಕರಾದ ಸೋಮಶೇಖರರೆಡ್ಡಿ ಹಾಗೂ ಸುರೇಶ್‌ಬಾಬು ಹೆಸರು ಹಾಕದೆ ಜಿಲ್ಲಾಧಿಕಾರಿ ಶಿಷ್ಟಾಚಾರ ಉಲ್ಲಂಸಿದ್ದಾರೆ. ಇದನ್ನು ಖಂಡಿಸಿ ಬಳ್ಳಾರಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಇವರು ಆರೋಪಿಗಳೇ ಹೊರತು ಅಪರಾಧಿಗಳಲ್ಲ. ಜನಪ್ರತಿನಿಧಿಗಳನ್ನು ಕಡೆಗಣಿಸುವುದನ್ನು ಲೋಕಸಭೆ ಸದಸ್ಯೆಯಾಗಿ ಖಂಡಿಸುತ್ತೇನೆ ಎಂದು ದೂರಿದರು.

ಮಾಜಿ ಶಾಸಕ ಎ.ವಿ. ಉಮಾಪತಿ, ಮುಖಂಡರಾದ ಕರಿಯಣ್ಣ, ನಾಗರಾಜ್, ಕಲ್ಪನಾ, ಎಚ್.ಎಂ.ಎಸ್. ನಾಯಕ, ನಲಜರಪ್ಪ, ಲಕ್ಷ್ಮೀಕಾಂತರೆಡ್ಡಿ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.