ADVERTISEMENT

ತುರುವನೂರಿನಲ್ಲಿ ನಿತ್ಯ ಗಾಂಧೀಜಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:45 IST
Last Updated 1 ಅಕ್ಟೋಬರ್ 2012, 4:45 IST

ಚಿತ್ರದುರ್ಗ: ಬಯಲುಸೀಮೆಯ ತುರುವನೂರು ಗ್ರಾಮ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಹೋರಾಟದ ನೆಲ ಎಂದೇ ಹೆಸರಾದ ಈ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿಯ ಆಳೆತ್ತರದ ಕಂಚಿನ ಪ್ರತಿಮೆ ಇದೆ. ಗಾಂಧೀಜಿ ರಕ್ಷಣೆಗೆ ಇ್ಲ್ಲಲೊಂದು ಕೋಟೆ ಇದೆ. ಬತೇರಿ ಮೇಲೆ ಮಹಾತ್ಮಾ ಗಾಂಧೀಜಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರತಿನಿತ್ಯ ಗಾಂಧೀಜಿ ಪ್ರತಿಮೆ ಪೂಜೆ ಸಲ್ಲಿಸುವುದು ಇಲ್ಲಿನ ಹಿರಿಮೆ. ಈ ಬತೇರಿ ಸಮೀಪದಲ್ಲಿರುವ ಪುರೋಹಿತ ರಾಮಮೂರ್ತಿ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾರೆ. ಗಾಂಧಿ ಜಯಂತಿ ಹಾಗೂ ರಾಷ್ಟ್ರೀಯ ದಿನಾಚರಣೆಗಳಂದು ಇಲ್ಲಿ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳು ನಡೆಯುತ್ತವೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುರುವನೂರಿನದ್ದು ಮಹತ್ವದ ಪಾಲು. ಚಲೇಜಾವ್ ಚಳವಳಿ ಅಂಗವಾಗಿ `ಅರಣ್ಯ ಸತ್ಯಾಗ್ರಹ~ದ ಮೂಲಕ ಸ್ವಾತಂತ್ರ ಹೋರಾಟಕ್ಕೆ ಕಿಡಿ ಹಚ್ಚಿದ ಹೆಮ್ಮೆ ಈ ಊರಿಗಿದೆ. ಊರಿನ 250ಕ್ಕೂ ಹೆಚ್ಚು ಜನ `ಅರಣ್ಯ ಸತ್ಯಾಗ್ರಹ~ದಲ್ಲಿ ಭಾಗವಹಿಸಿದ್ದರು. ಈ ಸತ್ಯಾಗ್ರಹಕ್ಕೆ ಮುನ್ನುಡಿ ಬರೆದವರು ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ. ಅವರೇ ಸ್ವತಃ ಹೋರಾಟಕ್ಕೆ ಕುಳಿತು ಎಲ್ಲರಿಗೂ ಹುರುಪು ನೀಡಿದ್ದರು.

1939ರಲ್ಲಿ ದೇಶಾದ್ಯಂತ ನಡೆದ ಅರಣ್ಯ ಚಳವಳಿಯ ಭಾಗವಾಗಿ ಈ ಚಳವಳಿ ನಡೆಯಿತು. ಭಾಗವಹಿಸಿದ್ದ ಹತ್ತಾರು ಮಂದಿ ಜೈಲು ಪಾಲಾದರು. ಬ್ರಿಟಿಷ್ ಸರ್ಕಾರ ಹೆಂಡ ಮಾರಾಟಕ್ಕೆ ನೀಡುತ್ತಿದ್ದ ಪ್ರೋತ್ಸಾಹ ವಿರೋಧಿಸಿ ರಾಜ್ಯದಲ್ಲಿ ಪ್ರಥಮವಾಗಿ ಜಿಲ್ಲೆಯ ತುರುವನೂರಿನಲ್ಲಿ ಗ್ರಾಮದ ಹನುಮಂತಪ್ಪ, ರಾಮ ರೆಡ್ಡಿ ಮುಂತಾದವರು ಚಳವಳಿ ಆರಂಭಿಸಿದರು. ಆಗ ಎಸ್. ನಿಜಲಿಂಗಪ್ಪ ಕೂಡ ಹೋರಾಟಕ್ಕೆ ಧುಮುಕಿದರು. ನೆರೆಯ ಬಳ್ಳಾರಿ, ರಾಯಚೂರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಕೈಜೋಡಿಸಿದರು. ಎಸ್. ನಿಜಲಿಂಗಪ್ಪ, ಬಳ್ಳಾರಿ ಸಿದ್ದಮ್ಮ, ಶಾಂತಮ್ಮ ಸೇರಿದಂತೆ ಇಲ್ಲಿ ಭಾಷಣ ಮಾಡಿದ ಅನೇಕರನ್ನು ಬ್ರಿಟಿಷರು ಬಂಧಿಸಿದರು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗ್ರಾಮ ನೀಡಿದ ಕೊಡುಗೆಯ ನೆನಪಿಗಾಗಿ ಇಲ್ಲಿ ಗಾಂಧೀಜಿಯ ಕಂಚಿನ ಪ್ರತಿಮೆ ಸ್ಥಾಪಿಸಲಾಯಿತು.

ಗಾಂಧಿ ಶಿಷ್ಯರು ಈ ಊರಿನಲ್ಲಿ ಬಹಳಷ್ಟು ಸಂಖ್ಯೆಯಲ್ಲಿರುವುದರಿಂದ ಊರಿನ ಮುಖ್ಯಸ್ಥರು ಹಾಗೂ ಹೋರಾಟಗಾರರು ಆದ ದಿವಂಗತ ಎಂ. ಹನುಮಂತಪ್ಪ ಮತ್ತು ಕಲ್ಲಪ್ಪನವರ ನೇತೃತ್ವದಲ್ಲಿ ಪ್ರತಿಮೆ ಸ್ಥಾಪನೆ ಬಗ್ಗೆ ಚಿಂತನೆ ನಡೆಯಿತು. ತಕ್ಷಣಕ್ಕೆ ಚನ್ನಗಿರಿಯ ಶಿಲ್ಪಿ ನಾಗೇಂದ್ರಪ್ಪ ಅವರಿಗೆ ಹೇಳಿ ಕಂಚಿನ ಪ್ರತಿಮೆಯನ್ನು ಸಿದ್ಧಪಡಿಸಲಾಯಿತು. 1948ರಲ್ಲಿ ಇಲ್ಲಿ ಪ್ರತಿಮೆ ಸ್ಥಾಪನೆಯಾಯಿತು. ಇದೇ ಪ್ರತಿಮೆಗೆ 1968ರಲ್ಲಿ ಕಲ್ಲಿನ ಕೋಟೆ ಕಟ್ಟಿಸಿದ್ದು ನಿಜಲಿಂಗಪ್ಪ ಅವರು. ಮುಖ್ಯಮಂತ್ರಿಯಾಗಿದ್ದಾಗ ಅವರೇ ಇಲ್ಲಿಗೆ ಬಂದು ಈ ಗಾಂಧಿ ಕೋಟೆಯನ್ನು ಉದ್ಘಾಟಿಸಿದ್ದರು.

ಆದರೆ, ಗಾಂಧೀಜಿಯ ದೇವಾಲಯಕ್ಕೆ ನಿರಂತರ ನಿರ್ವಹಣೆ ಬಗ್ಗೆ ಗ್ರಾ.ಪಂ. ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದೆ. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಗ್ರಾಮದ ಮಂಜುನಾಥ್, ನಾಗರಾಜ್, ರಾಘವೇಂದ್ರ ರೆಡ್ಡಿ ಮತ್ತು ಸ್ನೇಹಿತರು ಜತೆಗೂಡಿ ರೂ. 40 ಸಾವಿರ ರೂಪಾಯಿ ಸಂಗ್ರಹಿಸಿದರು. ಇದರಲ್ಲಿ  ರೂ. 20 ಸಾವಿರದಲ್ಲಿ ಬಣ್ಣಕ್ಕೆ ವೆಚ್ಚ ಮಾಡಿದರು. ಗಾಂಧೀಜಿ ತತ್ವಗಳ ಪ್ರಸಾರದಲ್ಲಿ ಈ ಯುವಕರ ಕೈಗೊಂಡ ಕೈಂಕರ್ಯ ಗ್ರಾಮಸ್ಥರ ಮೆಚ್ಚುಗೆಗೂ ಪಾತ್ರವಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.