ADVERTISEMENT

ದಾನ ನೀಡಿ ಮಠ ಬೆಳೆಸಿ: ಕಾಗಿನೆಲೆ ಶ್ರೀ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 10:00 IST
Last Updated 4 ಸೆಪ್ಟೆಂಬರ್ 2011, 10:00 IST

ಚಿತ್ರದುರ್ಗ: ಸಿರಿಗೆರೆ ಮಠದ ಭಕ್ತರು ದಾನ ನೀಡಿ ಮಠವನ್ನು ಬೆಳೆಸಿದ ರೀತಿಯಲ್ಲಿಯೇ ಕುರುಬ ಸಮುದಾಯದವೂ ಸಹ ದಾನ ಕೊಡುವ ಮೂಲಕ ಮಠವನ್ನು ಬೆಳೆಸಬೇಕು ಎಂದು ಕಾಗಿನೆಲೆ ಮಹಾ ಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕುರುಬ ಸಮುದಾಯದ ಮುಖಂಡರು ತಮ್ಮಳಗಿನ ಭಿನ್ನಾಭಿಪ್ರಾಯ ಬದಿಗೊತ್ತಿ ಉತ್ತಮ ಕಾರ್ಯಕ್ಕೆ ಮುಂದಾಗುವ ಮೂಲಕ ಮಠವನ್ನು ಬೆಳೆಸಬೇಕು. ಮಠ ಬೆಳೆಯುವುದರಿಂದ ಸಮುದಾಯವು ಬೆಳೆಯಲು ಸಹಕಾರಿಯಾಗಲಿದೆ ಎಂದರು.

ಜಿ.ಪಂ. ಉಪ ಕಾರ್ಯದರ್ಶಿ ರುದ್ರಪ್ಪ ಮಾತನಾಡಿ, ಜಿಲ್ಲಾ ಪಂಚಾಯ್ತಿ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಹಿಂದುಳಿದ ಪ್ರತಿಭಾನ್ವಿತ ಕೆಎಎಸ್, ಐಎಎಸ್, ಐಪಿಎಸ್ ಅಭ್ಯರ್ಥಿಗಳಿಗೆ ತರಬೇತಿ ಅವಕಾಶವಿದೆ. ಎಂದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಹಿಂದುಳಿದ ಅನಕ್ಷರಸ್ಥರಿಂದ ಕೂಡಿದ ಕುರುಬ ಸಮಾಜ ಬಲಿಷ್ಠವಾಗಬೇಕಾದರೇ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೇಘನಾ ಭರತನಾಟ್ಯ ನಡೆಸಿಕೊಟ್ಟರು. 

ಹೊಸದುರ್ಗ ಶಾಖಾ ಮಠದ ಈಶ್ವಾನಂದಪುರಿ ಸ್ವಾಮೀಜಿ, ಸಿಂಧನೂರು ಶಾಖಾಮಠದ ಸಿದ್ಧರಾಮನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಲ್ಲೂಕು ಕನಕ ನೌಕರರ ಸಂಘದ ಅಧ್ಯಕ್ಷ ರಮೇಶ್ ಮದುರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಬಸವರಾಜ್, ಸದಸ್ಯ ಕೆ. ಕವಿತಾ ಮಹೇಶ್, ಮಾಜಿ ಸದಸ್ಯರಾದ ಕೃಷ್ಣಮೂರ್ತಿ, ಬಿ. ಗಂಗಾಧರ್, ತಾ.ಪಂ. ಸದಸ್ಯರಾದ ಜಿ.ಎಂ. ಮಹಾಲಿಂಗಪ್ಪ, ಹಂಪೇಶ್, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಮಾಜಿ ಸದಸ್ಯ ಶ್ರೀರಾಮ್, ಕುರುಬರ ಸಮಾಜದ ಅಧ್ಯಕ್ಷ ನಿಶಾನಿ ಜಯಣ್ಣ, ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಎಂ. ಮಲ್ಲಿಕಾರ್ಜುನ್, ಮುಖಂಡರಾದ ಮಹಬೂಬ್ ಬಾಷಾ, ಮಲ್ಲಿಕಾರ್ಜುನ್ ಹಾಜರಿದ್ದರು.

ಸತೀಶ್ ಕುಮಾರ್ ಜಟ್ಟಿ ಪ್ರಾರ್ಥಿಸಿದರು. ಬಿ. ಕೃಷ್ಣಪ್ಪ ಸ್ವಾಗತಿಸಿದರು. ಎನ್.ಆರ್. ಶೇಖರ್ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಏಕನಾಥ್ ಕಾರ್ಯಕ್ರಮ ನಿರೂಪಿಸಿದರು.
 

`ಭಾಷಣ ಓದಲು ಬಾರದ ವರ್ತೂರ್~
ಸಿದ್ಧ ಭಾಷಣವನ್ನೇ ಓದಲು ಬಾರದ ಸಚಿವ ವರ್ತೂರ್ ಪ್ರಕಾಶ್ ಕುರುಬ ಸಮಾಜದ ವ್ಯಕ್ತಿಯಾಗಿರುವುದು ದುರ್ದೈವದ ಸಂಗತಿ ಯಾಗಿದೆ ಎಂದು ಕಾಗಿನೆಲೆ ಮಹಾ ಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಸಾಮಾನ್ಯ ಜ್ಞಾನವಿರದ ಜನಪ್ರತಿನಿಧಿ ಸಮಾಜವನ್ನು ಹೇಗೆ ಬೆಳೆಸಲು ಸಾಧ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT