ADVERTISEMENT

ದುಸ್ಥಿತಿಯಲ್ಲಿ ನುಂಕಿಮಲೆ ಪುಣ್ಯಕ್ಷೇತ್ರ

ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ, ಅವಸಾನದತ್ತ ಶಾಸನಗಳು

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 5:16 IST
Last Updated 27 ಜುಲೈ 2013, 5:16 IST
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿರುವ ಐತಿಹಾಸಿಕ ಹೊಂಡ
ಮೊಳಕಾಲ್ಮುರು ತಾಲ್ಲೂಕಿನ ಐತಿಹಾಸಿಕ ನುಂಕಿಮಲೆ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿರುವ ಐತಿಹಾಸಿಕ ಹೊಂಡ   

ಮೊಳಕಾಲ್ಮುರು: ಜಿಲ್ಲೆಯ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಪುಣ್ಯಕ್ಷೇತ್ರಗಳಲ್ಲಿ ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಕ್ಷೇತ್ರ  ಕೂಡ ಒಂದು.
ಜಿಲ್ಲೆ ಮತ್ತು ಅಕ್ಕ ಪಕ್ಕದ ಜಿಲ್ಲೆಗಳ ಸಾವಿರಾರು ಕುಟುಂಬಗಳ ಆರಾಧ್ಯ ದೈವವಾಗಿರುವ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಬೆಟ್ಟದ ಮೇಲಿದ್ದು, ಸುತ್ತಲೂ ಬೃಹತ್ ಕಲ್ಲುಬಂಡೆಗಳನ್ನು ಹೊಂದಿದ್ದು ಮಧ್ಯ ಸಮತಟ್ಟಾದ ಪ್ರದೇಶದಲ್ಲಿ ಪುಣ್ಯಕ್ಷೇತ್ರ ಇದೆ. ಮೇಗಲಹಟ್ಟಿ ಮೂಲಕ ಬೆಟ್ಟಕ್ಕೆ ಬರಲು ಮಾರ್ಗವಿದ್ದು, ಅನೇಕರು ಬೆಟ್ಟದ ಮಧ್ಯೆ ಕಾಲು ದಾರಿಯಲ್ಲಿಯೂ ಬರುತ್ತಾರೆ.

ಇತಿಹಾಸ: 10ನೇ ಶತಮಾನದಲ್ಲಿ ಕದಂಬರ ಆಳ್ವಿಕೆಯಲ್ಲಿ ಸಮೀಪದ ಉಚ್ಚಂಗಿದುರ್ಗ ರಾಜಧಾನಿ ಯಾಗಿತ್ತು. ನಂತರ ಬಂದ ಅಜವರ್ಮ ರಾಜನ ಅವಧಿಯಲ್ಲಿ ಮಂತ್ರಿ ಬೈಚಪ್ಪ ನುಂಕಿಮಲೆ ಬೆಟ್ಟದ ಮೇಲೆ ಸಿದ್ದೇಶ್ವರ, ನುಂಕಪ್ಪ, ಮಲ್ಲಿಕಾರ್ಜುನ ಮತ್ತು ಹರಳಯ್ಯ ದೇವಸ್ಥಾನಗಳನ್ನು ನಿರ್ಮಿಸಿದ. ಇದನ್ನು ಅಲ್ಲಿರುವ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಈ ಶಾಸನಗಳನ್ನು ಸಂರಕ್ಷಣೆ ಮಾಡದ ಕಾರಣ ಶಾಸನಗಳು ನಾಶವಾಗುತ್ತಿವೆ ಎಂದು ಬಂಡಾಯ ಸಾಹಿತ್ಯ ಪರಿಷತ್‌ನ ಕೆ.ಜಿ.ವೆಂಕಟೇಶ್ ಹೇಳುತ್ತಾರೆ.

ಕ್ರಿಸ್ತಪೂರ್ವದಲ್ಲಿ ಈ ಭಾಗದಲ್ಲಿ ನೆಲೆಸಿದ್ದ ರಾಕ್ಷಸಿಯರನ್ನು ಸಿದ್ದೇಶ್ವರ ಸ್ವಾಮಿ ಬಂದು ಸಂಹರಿಸಿದ ಎಂದೂ ಇದಕ್ಕೆ ಪರಿಶಿಷ್ಟ ಜಾತಿಯ ಹರಳಯ್ಯ ತನ್ನ ಕಾಲಿನ ನರವನ್ನು ಲಗಾಮಾಗಿ ನೀಡಿದ ಎಂದೂ, ಇದಕ್ಕಾಗಿ ಇಂದಿಗೂ ಸಿದ್ದೇಶ್ವರ ಸ್ವಾಮಿಗೂ ಮುನ್ನ ಹರಳಯ್ಯಗೆ ಮೊದಲು ಪೂಜೆ ಮಾಡಲಾಗುತ್ತಿದೆ ಎಂಬ ಐತಿಹ್ಯ ವಿದೆ.

ನಿರ್ಲಕ್ಷ್ಯ: ಉತ್ತಮ ಪ್ರವಾಸಿ ತಾಣವನ್ನಾಗಿಸುವ ಎಲ್ಲಾ ಅರ್ಹತೆಗಳನ್ನು ಈ ಕ್ಷೇತ್ರ ಹೊಂದಿದ್ದು, ಪ್ರವಾಸೋದ್ಯಮ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಟ್ಟದಲ್ಲಿ ಇಲಾಖೆಯ ಒಂದು ದೊಡ್ಡ ಬೋರ್ಡ್ ಮಾತ್ರ ಹಾಕಲಾಗಿದೆ. ಇಲ್ಲಿ ವಾರ್ಷಿಕ 100 ಮದುವೆಗಳು, ಶುಭ ಕಾರ್ಯಗಳು, ಪ್ರತಿ ಭಾನುವಾರ ವಿಶೇಷ ಪೂಜೆ ನಡೆಯುತ್ತಿದೆ. ವರ್ಷಕ್ಕೆ ಒಂದು ವಾರ ಕಾಲ ಜಾತ್ರೆ ಜರುಗುತ್ತದೆ. ಬರುವ ಅಪಾರ ಭಕ್ತರು ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಸಹ ಆಸನ ವ್ಯವಸ್ಥೆ ಮಾಡಿಲ್ಲ ಎಂದು ಜನರು ದೂರುತ್ತಾರೆ.

ಸಾವಿರಾರು ಜನರು ಇಲ್ಲಿಗೆ ಬಂದು ಹೋಗುವ ಕಾರಣ ಇಲ್ಲಿ ಸಮುದಾಯ ಭವನ, ಶೌಚಾಲಯ, ಸ್ನಾನಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಬೆಟ್ಟ ಸಂಪರ್ಕದ ರಸ್ತೆ ವಿಸ್ತರಣೆ, ಊಟದ ಕೋಣೆ, ಅಡುಗೆ ಕೋಣೆ, ಹೊಂಡ ದುರಸ್ತಿ, ಹಾಳಾಗುತ್ತಿರುವ ಶಾಸನಗಳ ಸಂರಕ್ಷಣೆ ಹಾಗೂ ಪುಣ್ಯಕ್ಷೇತ್ರದ ಹಿನ್ನೆಲೆ ಬಗ್ಗೆ ಅರಿವು ಮೂಡಿಸಲು ಫಲಕಗಳನ್ನು ಹಾಕಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಉಸ್ತುವಾರಿ ಕೆಳಗಳಹಟ್ಟಿ ತಿಪ್ಪೇಸ್ವಾಮಿ ಮನವಿ ಮಾಡುತ್ತಾರೆ.

ಜನಪ್ರತಿನಿಧಿಗಳು ಹಾಗೂ  ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.