ADVERTISEMENT

ನಗರದಲ್ಲಿ ಮಡಿಲು ಮಕ್ಕಳ ಆಸ್ಪತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:25 IST
Last Updated 6 ಡಿಸೆಂಬರ್ 2012, 6:25 IST

ಚಿತ್ರದುರ್ಗ: ಬರಪೀಡಿತ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಬೇಕೆಂಬ ವಿಶೇಷ ಹಂಬಲ ಕೈಗೂಡಿದೆ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ಆವರಣದಲ್ಲಿ ನೂತನವಾಗಿ ಆರಂಭವಾದ ಡಾ. ಶಿಮುಶ ಮಕ್ಕಳ ಆಸ್ಪತ್ರೆ `ಮಡಿಲು' ಉದ್ಘಾಟಿಸಿ ಅವರು ಮಾತನಾಡಿದರು.

ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯಲ್ಲಿ ಒಳ ಹಾಗೂ ಹೊರರೋಗಿ (ಓಪಿಡಿ) ವ್ಯವಸ್ಥೆ ಇದ್ದು ಒಳರೋಗಿ ವಿಭಾಗದಲ್ಲಿ ಜನರಲ್ ವಾರ್ಡ್ 60 ಹಾಸಿಗೆ, ನವಜಾತ ಶಿಶು ತೀವ್ರಘಟಕ 25 ಹಾಸಿಗೆ ಹಾಗೂ ಮಕ್ಕಳ ತೀವ್ರ ನಿಘಾ ಘಟಕ 20 ಹಾಸಿಗೆಗಳು ಒಟ್ಟು 105 ಹಾಸಿಗೆಗಳುಳ್ಳ ಆಸ್ಪತ್ರೆ ಇದಾಗಿದೆ ಎಂದು ತಿಳಿಸಿದರು.

ತುರ್ತು ಚಿಕಿತ್ಸಾ ವಿಭಾಗ ಒಳಗೊಂಡಂತೆ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸುವುದರೊಂದಿಗೆ ಯಶಸ್ವಿನಿ, ಬಾಲಸಂಜೀವಿನಿ, ವಾಜಪೇಯಿ ಆರೋಗ್ಯ ಮುಂತಾದ ಸೌಲಭ್ಯಗಳಿವೆ. ಹೊರರೋಗಿ ಚಿಕಿತ್ಸಾ ವಿಭಾಗ ಹಾಗೂ ಒಳರೋಗಿ ಜನರಲ್ ಇವರಿಗೆ ಸೇವೆ ಉಚಿತವಾಗಿರುತ್ತದೆ. ಐಸಿಯು ಕೂಡ ಅತ್ಯಂತ ಕಡಿಮೆ ಶುಲ್ಕ ಸೇವೆ ನೀಡುತ್ತದೆ ಎಂದರು.

ಡಾ.ಶಿಮುಶ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕರ್ನಾಟಕ ರಾಜ್ಯದಲ್ಲಿ ಮೂರನೆಯದು. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಮೊದಲನೆಯದು, ಬಾಪೂಜಿ ಮಕ್ಕಳ ಆಸ್ಪತ್ರೆ ದಾವಣಗೆರೆ ಎರಡನೆಯದು ಮತ್ತು ಮೂರನೆಯದು ನಮ್ಮ ಆಸ್ಪತ್ರೆ ಎಂದು ನುಡಿದರು.

ರೋಗಿಗಳಿಗೆ ಹಾಗೂ ಅವರ ಜೊತೆಗಿರುವ ಇಬ್ಬರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು. ಮಕ್ಕಳ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸುರೇಶ್‌ಬಾಬು ಇನ್ನೂ ಹಲವು ಮಾಹಿತಿಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ (ಒಬಿಸಿ) ಆಸ್ಪತ್ರೆ ನಿರ್ಮಿಸಲು ಶಿವಮೂರ್ತಿ ಮುರುಘಾ ಶರಣರು ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಅಡಿಗಲ್ಲು ಹಾಕಿದರು. ಹಾಗೆಯೇ ಫಲಾಹಾರ ಮಂದಿರದ ಉದ್ಘಾಟನೆಯನ್ನು ಇದೇ ಸಂದರ್ಭದಲ್ಲಿ ಮಾಡಲಾಯಿತು.

ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ವೀರಶೈವ ಸಮಾಜದ ಅಧ್ಯಕ್ಷ ಶಿವಪ್ರಕಾಶ್, ಷಣ್ಮುಖಪ್ಪ,  ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ,ಪ್ರೊ.ಈ. ಚಿತ್ರಶೇಖರ್, ಬಸವೇಶ್ವರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್, ವೈದ್ಯಾಧಿಕಾರಿ ಡಾ.ಫಾಲಾಕ್ಷಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.