ADVERTISEMENT

ನಾಡು-ನುಡಿ ರಕ್ಷಣೆಗೆ ಹೋರಾಟ ನಡೆಸಲು ಕರೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 5:45 IST
Last Updated 9 ನವೆಂಬರ್ 2012, 5:45 IST

ಹಿರಿಯೂರು: ನಾಡು-ನುಡಿ- ನೆಲ-ಜಲ ಸಂರಕ್ಷಣೆ ವಿಚಾರದಲ್ಲಿ ಸಮಸ್ಯೆಗಳು ಉಂಟಾದಲ್ಲಿ ಯುವಕರು ಹೋರಾಟಕ್ಕೆ ಸದಾ ಸಿದ್ಧರಿರಬೇಕು ಎಂದು ಹಿರಿಯ ಶಿಕ್ಷಣ ತಜ್ಞ ಎಚ್.ಎನ್. ನರಸಿಂಹಯ್ಯ ಕರೆ ನೀಡಿದರು.

ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಗುರುವಾರ ನಗರದಎ.ಕೆ. ಕಾಲೊನಿಯ ಅಪೂರ್ವ ಯುವಕ ಕಲಾ ಸಂಘದಿಂದ ಏರ್ಪಡಿಸಿದ್ದ 57ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾಗಿ, ಕರ್ನಾಟಕ ಏಕೀಕರಣಗೊಂಡಿದ್ದರೂ, ನಾಡಿನ ಗಡಿಯನ್ನು ಅತಿಕ್ರಮಿಸುವ ಪ್ರಯತ್ನ ನೆರೆಯ ರಾಜ್ಯಗಳಿಂದ ನಡೆಯುತ್ತಲೇ ಇದೆ.

ಅಭಿವೃದ್ಧಿ ಕುಂಠಿತವಾಗಿದೆ ಎಂಬ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಆಗಾಗ ಕೇಳಿ ಬರುತ್ತಿದೆ. ಆಡಳಿತ ಚುಕ್ಕಾಣಿ ಹಿಡಿದವರು ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಭವಿಷ್ಯದಲ್ಲಿ ಅಪಸ್ವರಗಳಿಗೆ ಅವಕಾಶ ಕೊಡದಂತೆ ಸಮಗ್ರ ಕರ್ನಾಟಕ ಅಭಿವೃದ್ಧಿ ಆಗಲಿ. ಕರ್ನಾಟಕದಲ್ಲಿ ಪ್ರತ್ಯೇಕದ ಕೂಗು ಕೇಳಿ ಬರದಿರಲಿ ಎಂದು ಅವರು ಆಶಿಸಿದರು.

ಪುರಸಭಾ ಸದಸ್ಯ ಜಿ. ಧನಂಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಟಿ. ಚಂದ್ರಶೇಖರಯ್ಯ, ಟಿ. ಓಂಕಾರಪ್ಪ, ಡಿ. ಮಹಲಿಂಗಪ್ಪ, ಎಸ್. ಕುಮಾರ್, ಎಸ್.ಎಲ್. ಮಂಜುನಾಥ್, ಎಸ್.ಆರ್. ರವೀಂದ್ರನಾಥ್, ಸುನೀಲ್, ಮಂಜು, ಆರ್. ದ್ಯಾಮರಾಜ್, ಕೆ. ಮಂಜು, ಮಂಜುಭಾರ್ಗವ, ಶ್ರೀಧರ, ವಿಘ್ನೇಶ್, ಟೈಲರ್‌ಧರ್ಮರಾಜು, ಎಂ.ಎಸ್. ಟೈಲರ್‌ರಾಜು, ವಲಸೆ ಮೂರ್ತಣ್ಣ, ಪಾಂಡು, ಎಸ್.ಡಿ. ಕಣುಮಯ್ಯ ಉಪಸ್ಥಿತರಿದ್ದರು. ನಂತರ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು- ಹಣ್ಣು-ಬ್ರೆಡ್ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT