ADVERTISEMENT

ನಿಷ್ಠಾವಂತ, ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್

ಚಿತ್ರದುರ್ಗದಲ್ಲಿ ಕೆಪಿಸಿಸಿ ವೀಕ್ಷಕ ಸಿದ್ದು ನ್ಯಾಮಗೌಡ ಘೋಷಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:29 IST
Last Updated 2 ಆಗಸ್ಟ್ 2013, 10:29 IST

ಚಿತ್ರದುರ್ಗ: ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಿರುವ ವಿಧಾನ ಪರಿಷತ್ ಚುನಾವಣೆಗೆ ನಿಷ್ಠಾವಂತ ಹಾಗೂ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ಮಾಜಿ ಸಚಿವ ಸಿದ್ದು ನ್ಯಾಮಗೌಡ ಹೇಳಿದರು.

ಮೇಲ್ಮನೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ, ಕೆಪಿಸಿಸಿ ವತಿಯಿಂದ ಚುನಾವಣಾ ವೀಕ್ಷಕರಾಗಿ ನಗರಕ್ಕೆ ಆಗಮಿಸಿದ್ದ ಅವರು, ಅಮೋಘ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ 11 ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿ ಅರ್ಜಿ ನೀಡಿದ್ದಾರೆ. ಇದರಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಿ, ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಶುಕ್ರವಾರ ಈ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿ, ಅವರಿಂದ ಒಪ್ಪಿಗೆ ಪಡೆದು, 3ರಂದು ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ ಎಂದು ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿದರು.

ಮತ್ತೊಬ್ಬ ವೀಕ್ಷಕ ಹಾಗೂ ಮಾಜಿ ಶಾಸಕ  ಎನ್.ಸಂಪಗಿ ಮಾತನಾಡಿ, ವಿಧಾನ ಪರಿಷತ್ ಚುನಾವಣಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯಿಂದ 6 ವಿಧಾನಸಭಾ ಕ್ಷೇತ್ರಗಳು, ದಾವಣಗೆರೆ ಜಿಲ್ಲೆಯಿಂದ 3 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಇಬ್ಬರು ಸಂಪುಟ ದರ್ಜೆ ಸಚಿವರು, 6 ಶಾಸಕರು ಗೆದ್ದಿದ್ದಾರೆ.

ಅಲ್ಲದೆ ಚಿತ್ರದುರ್ಗ ಮತ್ತು ದಾವಣೆಗೆರೆ ಎರಡು ಜಿಲ್ಲೆಗಳ ಜಿಲ್ಲಾ ಪಂಚಾಯ್ತಿ ಆಡಳಿತ ಕಾಂಗ್ರೆಸ್ ಪಕ್ಷದ ವಶದಲ್ಲಿದೆ. ದಾವಣಗೆರೆ ಮಹಾನಗರ ಪಾಲಿಕೆ ಕೂಡ ಕಾಂಗ್ರೆಸ್ ಕೈಯಲ್ಲಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಅಡೆತಡೆಯಿಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ಸೇತುರಾಮ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಲ್ಲ.  ಆಕಾಂಕ್ಷಿಗಳಾಗಿರುವ 11 ಮಂದಿಯಲ್ಲಿ ಯಾರಿಗೆ ಟಿಕೆಟ್ ಲಭ್ಯವಾದರೂ ಎಲ್ಲರೂ ಅವರ ಪರವಾಗಿ ಕೆಲಸ ಮಾಡುತ್ತೇವೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ಮೂಲ ಕಾಂಗ್ರೆಸ್ಸಿಗರಿಗೆ ಮತ್ತು ಪಕ್ಷಕ್ಕಾಗಿ ದುಡಿದಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಜಾತಿ ಭೇದವಿಲ್ಲದೆ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಸೇತುರಾಮ್ ಹೇಳಿದರು.

`ಗ್ರಾಮ ಸಭೆಗೆ ಗೈರಾದ ಗ್ರಾ.ಪಂ ಸದಸ್ಯರ ಸದಸ್ಯತ್ವ ರದ್ದತಿಯ ಆದೇಶದಿಂದ ಈ ಚುನಾವಣೆಯಲ್ಲಿ ಹಿನ್ನಡೆ ಉಂಟಾಗುವುದಿಲ್ಲವೇ' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದು ನ್ಯಾಮಗೌಡ, `ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ  ಜಾರಿಯಾಗಬೇಕೆನ್ನುವ ಉದ್ದೇಶದಿಂದ ಗ್ರಾಮ ಸಭೆ ಕಡ್ಡಾಯವಾಗಿ ನಡೆಯಬೇಕು.

ಗ್ರಾಮ ಸಭೆಗಳಿಗೆ ಕನಿಷ್ಠ ಮೂರು ಸಲ ಗೈರಾಗುವ ಸದಸ್ಯರನ್ನು ಅನರ್ಹಗೊಳಿಸಲು ಪಿಡಿಒಗಳಿಗೆ ಅಧಿಕಾರ ನೀಡಲಾಗಿದೆ. ಇದರಿಂದ ಪಕ್ಷಕ್ಕಾಗಲಿ, ಸರ್ಕಾರಕ್ಕಾಗಲಿ ಲಾಭವಿಲ್ಲ. ಆದರೆ ಮತ ನೀಡಿದ ಜನರಿಗೆ ಉತ್ತಮ ಸೇವೆ ಮಾಡುವ ಅವಕಾಶ ಗ್ರಾಪಂ ಸದಸ್ಯರಿಗೆ ದೊರೆಯಲಿದೆ' ಎಂದು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.