ADVERTISEMENT

ನೀರಸ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 9:05 IST
Last Updated 6 ನವೆಂಬರ್ 2012, 9:05 IST

ಚಳ್ಳಕೆರೆ: ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮೀಣಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಇಒ ಡಾ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆ ಹಾಗೂ ಅನುಷ್ಠಾನ ಮಾಡಲು ಅರಣ್ಯ, ಕೃಷಿ, ಜಲಾನಯನ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ನೀಡಿ ಕಾಮಗಾರಿಗಳು ತುರ್ತಾಗಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೃಷಿ ಅಧಿಕಾರಿ ಡಾ.ರವಿ ಇಲಾಖೆ ವತಿಯಿಂದ ಸುವರ್ಣ ಭೂಮಿ ಯೋಜನೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯೇ ನೀಡಿಲ್ಲ. ಅದ್ದರಿಂದ, ಈ ಬಗ್ಗೆ ಸಾರ್ವಜನಿಕರು ನಮ್ಮನ್ನು ಪದೇ ಪದೇ ಸಂಪರ್ಕಿಸುತ್ತಿದ್ದಾರೆ. ಈ ಕೂಡಲೇ ಪ್ರತಿಯೊಬ್ಬರಿಗೂ ಸುವರ್ಣ ಗ್ರಾಮ ಯೋಜನೆಯ ಮಾಹಿತಿ ತಿಳಿಸುವಂತೆ ಸೂಚಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಾದೇಶಿಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಯ್ಧ ರೈತರಿಗೆ ತೆಂಗಿನ ಸಸಿ ಮತ್ತು ಗುಚ್ಛ ಗ್ರಾಮದಿಂದ ಆಯ್ಕೆಯಾದ ರೈತರಿಗೆ ಸ್ಪಿಂಕ್ಲರ್ ಸೆಟ್ ಪೈಪ್ ನೀಡಲಾಗುವುದು ಎಂದರು.

ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಸಭೆ: ತಾಲ್ಲೂಕು ಪಂಚಾಯ್ತಿಯ ಎರಡನೇ ಅವಧಿಗೆ ಆಯ್ಕೆಯಾಗಿರುವ ನೂತನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ ಹಾಗೂ ಉಪಾಧ್ಯಕ್ಷೆ ವಿನೋದಾಬಾಯಿ ಮೊದಲ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹುತೇಕ ಮೌನಕ್ಕೆ ಶರಣಾಗಿದ್ದರು. ಎಲ್ಲಾ ಅಧಿಕಾರಿಗಳು ಓದುವ ಪ್ರಗತಿ ವರದಿಯನ್ನು ಮುಗುಮ್ಮಾಗಿಯೇ ಕುಳಿತು ಕೇಳುತ್ತಿದ್ದರು. ಎಲ್ಲದಕ್ಕೂ ಇಒ ಡಾ.ತಿಪ್ಪೇಸ್ವಾಮಿ ಮಾತನಾಡುತ್ತಿದ್ದರು.

ಮುಂದುವರಿದ ಅಧಿಕಾರಿಗಳ ಗೈರು: ಕೆಡಿಪಿ ಸಭೆಗಳಿಗೆ ತಾಲ್ಲೂಕುಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ಈ ಬಾರಿಯೂ ಮುಂದುವರಿದಿತ್ತು. ಹಿಂದಿನ ಸಭೆಗಳಲ್ಲಿ ಗೈರು ಹಾಜರಿ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿದರೂ ಸಹ ಇಂದಿನ ಸಭೆಗೆ ಪ್ರಮುಖ ಇಲಾಖೆಗಳಾದ ಎಸ್ಸಿ, ಎಸ್ಟಿ ನಿಗಮ, ಕಾರ್ಮಿಕ , ಮೀನುಗಾರಿಕೆ, ಭೂಸೇನಾ ನಿಗಮ, ಲೋಕೋಪಯೋಗಿ, ಸಾಮಾಜಿಕ ಅರಣ್ಯ, ವಲಯ ಅರಣ್ಯ, ಎಪಿಎಂಸಿ ಸೇರಿದಂತೆ ಅನೇಕ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು.
ಅಧ್ಯಕ್ಷ ಚಿದಾನಂದಪ್ಪ, ವ್ಯವಸ್ಥಾಪಕ ಮೈಲಾರಪ್ಪ, ನಾಗಪ್ಪ ಇದ್ದರು.

ಒಕ್ಕೂಟಕ್ಕೆ ನೇಮಕ
ಅತಿಥಿ ಉಪನ್ಯಾಸಕರ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಈಚೆಗೆ ನೇಮಕ ಮಾಡಲಾಗಿದೆ.
ಬಿ. ಪರಮೇಶ್ (ಅಧ್ಯಕ್ಷ), ಟಿ. ಲೋಕೇಶ (ಗೌರವ ಅಧ್ಯಕ್ಷ), ವಿ.ಆರ್. ಆಶಾ (ಉಪಾಧ್ಯಕ್ಷೆ), ಯರ‌್ರಿಸ್ವಾಮಿ (ಕಾರ್ಯದರ್ಶಿ), ವಹಾಬ್ (ಸಹಕಾರ್ಯದರ್ಶಿ), ಆರ್. ನಾಗೇಶ್ (ಖಜಾಂಚಿ), ಪರಶುರಾಮನಾಯಕ, ಕೆ.ವಿ. ಶಿವಕುಮಾರ್, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ರಮೇಶ್, ಲೋಹಿತ (ನಿರ್ದೇಶಕರು) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.