ADVERTISEMENT

ನೀರು ಸಂರಕ್ಷಿಸಿ ಅಂತರ್ಜಲ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 6:00 IST
Last Updated 19 ಫೆಬ್ರುವರಿ 2012, 6:00 IST

ಚಿತ್ರದುರ್ಗ: ರೈತರು ನೀರಿನ ಸಂರಕ್ಷಣೆ ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಜಲಾನಯನ ಯೋಜನೆಗಳು ಪೂರಕವಾಗಿವೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ವಸಂತ್ ಅಸ್ನೋಟಿಕರ್ ಅಭಿಪ್ರಾಯಪಟ್ಟರು.

ಹೊಳಲ್ಕೆರೆ ತಾಲ್ಲೂಕು ಉಪ್ಪರಿಗೇನಹಳ್ಳಿಯಲ್ಲಿ ಶುಕ್ರವಾರ ಜಲಾನಯನ ಇಲಾಖೆಯ ಸಮಗ್ರ  ಜಲಾನಯನ ನಿರ್ವಹಣಾ ಕಾರ್ಯಕ್ರಮ ಅಡಿ ಆಯೋಜಿಸಿದ್ದ ಹಾಲೇನಹಳ್ಳಿ ನಾಲಾ ಉಪ ಜಲಾನಯನ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ನೀರಿಗಾಗಿ ಪರಿತಪಿಸುತ್ತಿರುವ ಕಾಲದಲ್ಲಿ ಜಲಾನಯನ ಯೋಜನೆಗಳಲ್ಲಿ ನಾಲಾ ಬದು ನಿರ್ಮಾಣ,  ಚೆಕ್‌ಡ್ಯಾಂ ನಿರ್ಮಾಣ ಇತರೆ ಯೋಜನೆಗಳನ್ನು ರೈತರು ಜಮೀನಿನಲ್ಲಿ ಅಳವಡಿಸಿಕೊಳ್ಳಬೇಕು. ಈಗಾಗಲೇ ಅನೇಕ ರೈತರು ಇದರ ಲಾಭ ಪಡೆದಿದ್ದಾರೆ. ಜಲಾನಯನ ಮೇಳದ ಮೂಲಕ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ರೈತರಿಗಾಗಿ ಬಿಜೆಪಿ ಸರ್ಕಾರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಶೇ. 1ರ ಬಡ್ಡಿಯಲ್ಲಿ ಸಾಲ, ಬೀಜ ವಿತರಣೆ, ಕೃಷಿ ಪರಿಕರ ಹಾಗೂ ಸುವರ್ಣ ಭೂಮಿ ಯೋಜನೆಯನ್ನು ಜಾರಿಗೊಳಿಸಿದೆ. ಕೃಷಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಾರಿ ಮಂಡಿಸಲಿರುವ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚಿನ ರಿಯಾಯಿತಿ ದೊರೆಯುವ ವಿಶ್ವಾಸವಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಎಂ. ಚಂದ್ರಪ್ಪ, ಉಪ್ಪರಿಗೇನಹಳ್ಳಿ ಭಾಗದ ಹಾಲೇನಹಳ್ಳಿ ನಾಲಾ ಉಪ ಯೋಜನೆ ಅಡಿ ಸುಮಾರು ್ಙ 5.30 ಕೋಟಿ ವೆಚ್ಚ ಮಾಡಲಾಗಿದೆ. ಈ ಭಾಗದ ರೈತರ ಜಮೀನುಗಳಲ್ಲಿ ನೀರಿನ ಸಂರಕ್ಷಣೆ, ನಾಲಾ ಬದು ನಿರ್ಮಾಣ, ಚೆಕ್‌ಡ್ಯಾಂ ನಿರ್ಮಾಣ ಹಾಗೂ 50 ಸ್ವ ಸಹಾಯ ಸಂಘಗಳನ್ನು ಸ್ಥಾಪಿಸಿ, ಉದ್ಯೋಗ ತರಬೇತಿ ನೀಡಿ ವಿವಿಧ ಚಟುವಟಿಕೆ ಕೈಗೊಳ್ಳಲು ಪ್ರತಿ ಸಂಘಕ್ಕೆ ್ಙ 50 ಸಾವಿರ ಸುತ್ತುನಿಧಿ ನೀಡಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಜಲಾನಯನ ವಿವಿಧ ಯೋಜನೆಗಳಿಂದ ಅಂತರ್ಜಲ ಮಟ್ಟದಲ್ಲಿ ಸ್ವಲ್ಪ ಹೆಚ್ಚಳವನ್ನು ಕಾಣಲಾಗಿದೆ ಎಂದರು.

ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಬಸವರಾಜ್, ಸದಸ್ಯರಾದ ಇಂದಿರಾ ಕಿರಣ್, ಶಿವಕುಮಾರ್, ಅನಿಲ್ ಕುಮಾರ್, ಡಿ. ರಮೇಶ್, ತಾ.ಪಂ. ಅಧ್ಯಕ್ಷೆ ಜಿ.ಕೆ. ಲಕ್ಷ್ಮೀ ರುದ್ರಪ್ಪ, ಉಪಾಧ್ಯಕ್ಷೆ ಪಾರ್ವತಮ್ಮ ಕರಿಯಪ್ಪ, ಗ್ರಾ.ಪಂ. ಅಧ್ಯಕ್ಷರಾದ ಎಂ.ಪಿ. ಪ್ರವೀಣ್, ಗ್ರಾ.ಪಂ. ಅಧ್ಯಕ್ಷೆ ತಿಮ್ಮಕ್ಕ ರೇವಣ್ಣ, ಉಪಾಧ್ಯಕ್ಷರಾದ ಕೆ. ರಾಜಪ್ಪ, ಕೆ. ಪರಮೇಶ್ವರಪ್ಪ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಮ್, ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಡಾ.ಆರ್. ಕೃಷ್ಣಮೂರ್ತಿ, ತೋಟಗಾರಿಕೆ ನಿರ್ದೇಶಕ ಶಿವಾನಂದಪ್ಪ ಇತರರು ಹಾಜರಿದ್ದರು. ಜಾನುವಾರು ಸಂರಕ್ಷಣಾಧಿಕಾರಿ ಡಾ.ತಿಪ್ಪೇಸ್ವಾಮಿ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.