ADVERTISEMENT

ನೈಸರ್ಗಿಕ ಕೃಷಿಯತ್ತ ಯುವಕರ ಚಿತ್ತ

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಶೇ 40ಕ್ಕೂ ಹೆಚ್ಚು ಯುವಕರು ಭಾಗಿ

ಗಾಣಧಾಳು ಶ್ರೀಕಂಠ
Published 11 ಜನವರಿ 2017, 5:42 IST
Last Updated 11 ಜನವರಿ 2017, 5:42 IST
ಚಿತ್ರದುರ್ಗದ ಮುರುಘಾಮಠದಲ್ಲಿ ನಡೆಯುತ್ತಿರುವ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಪ್ರದರ್ಶನಕ್ಕಿಟ್ಟಿದ್ದ ನಾಟಿ ತಳಿ ಬೀಜಗಳನ್ನು ವೀಕ್ಷಿಸುತ್ತಿರುವ ರೈತರು.
ಚಿತ್ರದುರ್ಗದ ಮುರುಘಾಮಠದಲ್ಲಿ ನಡೆಯುತ್ತಿರುವ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಪ್ರದರ್ಶನಕ್ಕಿಟ್ಟಿದ್ದ ನಾಟಿ ತಳಿ ಬೀಜಗಳನ್ನು ವೀಕ್ಷಿಸುತ್ತಿರುವ ರೈತರು.   

ಚಿತ್ರದುರ್ಗ: ‘ಚಿಕ್ಕಮಗಳೂರಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ಊರಲ್ಲಿ ಕೃಷಿ ಮಾಡೋದಕ್ಕೆ ಜಮೀನು ತಯಾರಿ ಮಾಡ್ತಿದ್ದೀನಿ. ಇನ್ನೊಂದು ವರ್ಷ ಈ ಕೆಲಸ ಬಿಟ್ಟು ಊರಿಗೆ ವಾಪಸ್ ಹೋಗ್ತೀನಿ... !’

‘ನಾನು ಎರಡು ವರ್ಷಗಳಿಂದ ಕೃಷಿ ಮಾಡುತ್ತಿದ್ದೀನಿ. ಇನ್ನೂ ಲಾಭ ಶುರು ವಾಗಿಲ್ಲ. ₹ 15ರಿಂದ ₹ 20 ಸಾವಿರ ಆದಾಯ ಗ್ಯಾರಂಟಿ. ಆದರೆ, ವಾಪಸ್ ಊರಿಗೆ ಹೋಗ್ತೀನಿ.. ಜಮೀನಿನಲ್ಲೇ ದುಡಿಮೆ ಮಾಡ್ತೀನಿ...!’

ಮುರುಘಾಮಠದಲ್ಲಿ ನಡೆಯು ತ್ತಿರುವ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿ ಸಿರುವ ರಾಣೇಬೆನ್ನೂರು ತಾಲ್ಲೂಕಿನ ಹೊನ್ನಪ್ಪ, ಕೆ.ಆರ್‌.ನಗರದ ನವೀನ್‌ ಅವರಂಥ ಯುವಕರು ಊರಿಗೆ ವಾಪಸ್ ಹೋಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಎರಡು ವರ್ಷಗಳಿಂದ ತಾಲೀಮು ಮಾಡುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವ ನೈಸರ್ಗಿಕ ಕೃಷಿ ವಿಧಾನಗಳ ಕಲಿಕೆಗಾಗಿ ಈ ಕಾರ್ಯಾಗಾರಕ್ಕೆ ಬಂದಿದ್ದಾರೆ.

ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ‘ಕೃಷಿ ಪಾಠ’ ಕೇಳಲು 650 ಮಂದಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಕಾರ್ಯಾಗಾರಕ್ಕೆ ಬಂದಿದ್ದಾರೆ. ಅದರಲ್ಲಿ ಶೇ 40ಕ್ಕೂ ಹೆಚ್ಚು 40 ವರ್ಷದೊಳಗಿನ ಯುವಕ– ಯವತಿಯರಿದ್ದಾರೆ. ಸ್ವಲ್ಪ ಪರಿಸರ ಪ್ರಿಯ ಸಿದ್ಧಾಂತ ಇಟ್ಟುಕೊಂಡು, ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಸಂಕಲ್ಪ ಮಾಡಿಕೊಂಡು ಬಂದವರೇ ಹೆಚ್ಚು. ಇದರಲ್ಲಿ ಐಟಿ–ಬಿಟಿ ಉದ್ಯಮ ದಲ್ಲಿದ್ದವರು, ಬೇರೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರು, ಎಂಜಿನಿಯರಿಂಗ್ ಓದಿದ ಯುವಕರೂ ಇದ್ದಾರೆ. ‘ಕೃಷಿಯಿಂದ ಯುವಕರು ವಿಮುಖ ರಾಗುತ್ತಿದ್ದಾರೆ’ ಎಂಬ ಮಾತುಗಳು ಕೇಳಿಬರುತ್ತಿರುವ ವೇಳೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಣ ಕೊಟ್ಟು ಕೃಷಿಪಾಠ ಕೇಳಲು ಯುವ ಸಮೂಹ ಬಂದಿ ರುವುದು ಅಚ್ಚರಿ ಸಂಗತಿಯಾಗಿದೆ.

ಉದ್ಯೋಗದಲ್ಲಿದ್ದವರಿಗೆ ಕೃಷಿ ಆಸಕ್ತಿ: ‘ನಾನು ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದೆ. ಪುಣೆಯಲ್ಲಿ ಉದ್ಯೋಗ ಮಾಡುತ್ತಿದ್ದೆ. ಊರಲ್ಲಿ 14 ಎಕರೆ ಜಮೀನಿದೆ. ಅಣ್ಣ ವ್ಯವಸಾಯ ಮಾಡುತ್ತಿದ್ದ. ಉದ್ಯೋಗ ಬೇಸರ ವಾಗಿದೆ. ಕೃಷಿಗೆ ಮರಳಬೇಕೆಂಬ ಯೋಚನೆ ಮಾಡಿ, ಕೆಲಸ ಬಿಟ್ಟು ಊರಿಗೆ ಬಂದು ಕೃಷಿ ಮಾಡುತ್ತಿದ್ದೇನೆ. ರಾಸಾ ಯನಿಕ ಪದ್ಧತಿಯಲ್ಲಿ ದ್ರಾಕ್ಷಿ, ದಾಳಿಂಬೆ ಕೃಷಿ ಮಾಡುತ್ತಿದ್ದೇವೆ. ಖರ್ಚು ದುಬಾರಿಯಾಗುತ್ತಿದೆ. ನೈಸರ್ಗಿಕ ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವ ವಿಧಾನ ಪರಿಚಯಿಸುತ್ತಾರೆಂದು ಗೊತ್ತಾಯಿತು. ಹೀಗಾಗಿ ಈ ಕಾರ್ಯಾ ಗಾರಕ್ಕೆ ಬಂದೆ’ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಿಲಾಗಿ ಗ್ರಾಮದ ಯುವಕ ಶಿವಪುತ್ರಮಾಳಿ ತಾವು ಕೃಷಿಗೆ ಮರಳಿದ್ದಕ್ಕೆ ಕಾರಣ ಕೊಡುತ್ತಾರೆ.

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿರುವ ಕೆ.ಆರ್‌. ನಗರದ ನವೀನ್‌ 2 ಎಕರೆ ಜಮೀನು ಖರೀದಿಸಿ, ಎರಡು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಆದರೆ ಆದಾಯ ಬಂದಿಲ್ಲ. ಕೃಷಿ ಪತ್ರಿಕೆ, ಪುಸ್ತಕ ಓದಿಕೊಂಡು ಕೃಷಿಗೆ ಹೆಜ್ಜೆ ಇಟ್ಟಿರುವ ನವೀನ್‌ಗೆ ಈ ಕಾರ್ಯಾಗಾರ ಕೃಷಿಯ ಮತ್ತೊಂದು ದಿಕ್ಕನ್ನು ಪರಿಚಯಿಸಿದೆ. ‘ಒಂದಷ್ಟು ಕೃಷಿ ವಿಧಾನಗಳನ್ನು ಓದಿ ತಿಳಿದಿದ್ದೆ. ಈ ಕಾರ್ಯಾಗಾರದಿಂದ ಜೀವಂತ ಉದಾಹರಣೆಗಳು ಪರಿಚಯ ವಾದವು. ಇಂಥ ಪದ್ಧತಿಗಳಿಂದಾಗಿ ಯುವಕರು ಕೃಷಿಯತ್ತ ವಾಪಸ್ ಬರುವ ವಿಶ್ವಾಸವಿದೆ’ ಎನ್ನುತ್ತಾರೆ ನವೀನ್‌.

ಯುವತಿಯರಿಗೂ ಕೃಷಿ ಆಸಕ್ತಿ:  ಹೊಸಪೇಟೆ ಸಮೀಪದ ಹಳ್ಳಿಯೊಂದರ ದುರ್ಗಾ ಭವಾನಿ ಅಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಾ, ಸಖಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಕೃಷಿ ಕುರಿತು ತರಬೇತಿ ಪಡೆಯುತ್ತಿದ್ದಾರೆ. ‘ನಮ್ಮ ಸಂಸ್ಥೆಯಲ್ಲಿ ಐದು ಮಾಡ್ಯೂಲ್‌ನಲ್ಲಿ ಕೃಷಿ ತರಬೇತಿ ಕೊಟ್ಟಿದ್ದಾರೆ. ಈ ಕಾರ್ಯಾಗಾರದಿಂದ ಕೃಷಿಯಲ್ಲಿ ವೆಚ್ಚ ಕಡಿಮೆ ಮಾಡುವ ವಿಧಾನ ತಿಳಿದುಕೊಂಡಿದ್ದೇನೆ. ಮುಂದೆ ಊರಲ್ಲಿ ನಮ್ಮ ಅಪ್ಪ ಒಂದು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ.

ಅವರಿಗೆ ಈ ವಿಧಾನ ಹೇಳಿಕೊಡುತ್ತೇನೆ. ನಮ್ಮ ಹಾಸ್ಟೆಲ್‌ನಲ್ಲಿ ಉಳಿಯುವ ಅಡುಗೆ ತ್ಯಾಜ್ಯ ಬಳಸಿ ಕಾಂಪೋಸ್ಟ್‌ ಮಾಡುವ ಕುರಿತು ತರಬೇತಿ ನೀಡುತ್ತಿದ್ದೇನೆ’ ಎಂದು ಅವರು ಕಾರ್ಯಾಗಾರಕ್ಕೆ ಬಂದ  ವಿವರಿಸಿದರು.

ಸಂಸ್ಥೆಯ ಮತ್ತೊಬ್ಬ ಅಭ್ಯರ್ಥಿ ಕಾವ್ಯ ಕೂಡ, ನೈಸರ್ಗಿಕ ಕೃಷಿ ತರಬೇತಿ ಪಡೆದ ನಂತರ ಊರಲ್ಲಿ ಗುತ್ತಿಗೆ ನೀಡಿರುವ ಎರಡು ಎಕರೆ ಜಮೀ ನನ್ನು ಬಿಡಿಸಿಕೊಂಡು, ಅಪ್ಪನ ಜತೆ ಕೃಷಿ ಮಾಡಲು ಯೋಚನೆ ಮಾಡಿದ್ದಾರಂತೆ.

ವಿದೇಶಿ ಯುವಕರ ಕೃಷಿ ಆಸಕ್ತಿ: ಕಾರ್ಯಾಗಾರದಲ್ಲಿ ವಿದೇಶಿ ಯುವಕರೂ ತರಬೇತಿ ಪಡೆಯಲು ಬಂದಿದ್ದಾರೆ. ಚಾಮರಾಜನಗರದ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಸಂಪರ್ಕದಲ್ಲಿರುವ ವಿದ್ಯಾ ವಂತ ಯುವಕರು ಕೃಷಿ ಆಸಕ್ತಿ ಬೆಳೆಸಿ ಕೊಂಡು ತರಬೇತಿಗೆ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮ ನಡೆಸು ತ್ತಿರುವವರು ಪ್ರಕೃತಿ ಪೂರಕ ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಬಹುರಾಷ್ಟ್ರೀಯ ಕಂಪೆನಿಗಳ ಯುವ ಉದ್ಯೋಗಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ಈ ಐದು ದಿನಗಳ ಕಾರ್ಯಾ ಗಾರದಲ್ಲಿ ಭಾಗವಹಿಸಿರುವ ಯುವಕರು, ಪಾಳೇಕರ್ ಪಾಠ ಕೇಳುತ್ತಾ, ಕೃಷಿ ಪದ್ಧತಿಗಳ ಕುರಿತ ಹೊತ್ತಿಗೆಗಳನ್ನು ಖರೀದಿಸಿ, ನಾಟಿ ಬೀಜಗಳು, ಸಿರಿಧಾನ್ಯಗಳು, ನೈಸರ್ಗಿಕ ಕೃಷಿಯಿಂದ ಬೆಳೆದ ಕಬ್ಬಿನ ಬೆಲ್ಲ ಸೇರಿದಂತೆ ವಿವಿಧ  ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.