ADVERTISEMENT

ಪುನರಾವರ್ತನೆಯಾದ ದಶಕದ ಹಿಂದಿನ ಫಲಿತಾಂಶ!

2008 –2018ರ ಚುನಾವಣೆಯ ನಡುವಿರುವ ಒಂದಷ್ಟು ಸಾಮ್ಯತೆ

ಗಾಣಧಾಳು ಶ್ರೀಕಂಠ
Published 17 ಮೇ 2018, 9:09 IST
Last Updated 17 ಮೇ 2018, 9:09 IST
ಪುನರಾವರ್ತನೆಯಾದ ದಶಕದ ಹಿಂದಿನ ಫಲಿತಾಂಶ!
ಪುನರಾವರ್ತನೆಯಾದ ದಶಕದ ಹಿಂದಿನ ಫಲಿತಾಂಶ!   

ಚಿತ್ರದುರ್ಗ: 2008ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಈಗ 2018ರ ಚುನಾವಣೆಯಲ್ಲೂ ಕಾಂಗ್ರೆಸ್ ಪಾಲಿಗೆ ಅದೇ ತರಹದ ಫಲಿತಾಂಶ ಪುನರಾವರ್ತನೆಯಾಗಿದೆ!

ವಿಶೇಷವೆಂದರೆ, ಆ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತವರಲ್ಲಿ ಬಹುತೇಕರು ಈ ಚುನಾವಣೆಯಲ್ಲೂ ಕಣಕ್ಕಿಳಿದಿದ್ದಾರೆ. ಅದರಲ್ಲಿ ಕೆಲವರು ಸೋತಿದ್ದಾರೆ, ಇನ್ನು ಕೆಲವರನ್ನು ಸೋಲಿಸಿದ್ದಾರೆ. ಆ ಚುನಾವಣೆಯಲ್ಲಿ ಹೊಸದುರ್ಗದಿಂದ ಗೂಳಿಹಟ್ಟಿ ಡಿ. ಶೇಖರ್ ಮತ್ತು ಹಿರಿಯೂರಿನಿಂದ ಡಿ.ಸುಧಾಕರ್ ಪಕ್ಷೇತರರಾಗಿ ಜಯಗಳಿಸಿದ್ದರು. ಚಳ್ಳಕೆರೆಯಿಂದ ತಿಪ್ಪೇಸ್ವಾಮಿ, ಹೊಳಲ್ಕೆರೆಯಿಂದ ಎಂ. ಚಂದ್ರಪ್ಪ ಬಿಜೆಪಿಯಿಂದ ಗೆದ್ದಿದ್ದರು. ಚಿತ್ರದುರ್ಗದಲ್ಲಿ ಜೆಡಿಎಸ್‌ನಿಂದ ಎಸ್.ಕೆ.ಬಸವರಾಜನ್ ಆಯ್ಕೆಯಾಗಿದ್ದರು. ಮೊಳಕಾಲ್ಮುರು ಕ್ಷೇತ್ರದಿಂದ ಮಾತ್ರ ಎನ್‌.ವೈ.ಗೋಪಾಲಕೃಷ್ಣ ಜಯಗಳಿಸಿ, ಕಾಂಗ್ರೆಸ್ ಅಸ್ತಿತ್ವ ಉಳಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಚಳ್ಳಕೆರೆಯ ಟಿ. ರಘುಮೂರ್ತಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸುವ ಕೆಲಸ ಮಾಡಿದ್ದಾರೆ.

ಅಲ್ಲಿದ್ದವರು ಇಲ್ಲೂ ಇದ್ದಾರೆ :
2008ರ ಚುನಾವಣೆಯಲ್ಲಿ ಹೊಸುದರ್ಗ ಕ್ಷೇತ್ರದಿಂದ ಗೂಳಿಹಟ್ಟಿ ಡಿ. ಶೇಖರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ವಿರುದ್ಧ 1,168 ಮತಗಳ ಅಂತರದಿಂದ ಗೆದ್ದಿದ್ದರು. ನಂತರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಕ್ರೀಡಾ ಸಚಿವರಾಗಿದ್ದರು. ಇದೇ ಅಭ್ಯರ್ಥಿಗಳು 2018ರ ಚುನಾವಣೆಯಲ್ಲೂ ಮುಖಾಮುಖಿಯಾಗಿದ್ದು, ಬಿಜೆಪಿಯಿಂದ ಕಣಕ್ಕಿಳಿದಿದ್ದ ಗೂಳಿಹಟ್ಟಿ ಶೇಖರ್ 25,992 ಮತಗಳ ಅಂತರದಿಂದ ಕಾಂಗ್ರೆಸ್‍ನ ಬಿ.ಜಿ.ಗೋವಿಂದಪ್ಪ ಅವರನ್ನು ಮಣಿಸಿದ್ದಾರೆ.

ADVERTISEMENT

2008ರಲ್ಲಿ ಹಿರಿಯೂರಿನಲ್ಲಿ ಡಿ. ಸುಧಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಆಗ ಡಿ.ಯಶೋಧರ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತು, ಮೂರನೇ ಸ್ಥಾನ ಪಡೆದಿದ್ದರು. ಅದೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್.ಆರ್. ಲಕ್ಷ್ಮೀಕಾಂತ್ ಎರಡನೇ ಸ್ಥಾನ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸುಧಾಕರ್, ಯಶೋಧರ ಇಬ್ಬರೂ ಸೋತಿದ್ದಾರೆ. ಬಿಜೆಪಿಯಿಂದ ಪೂರ್ಣಿಮಾ ಗೆದ್ದಿದ್ದಾರೆ. ಅದೇ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ, ಕಾಂಗ್ರೆಸ್‌ನ ಎಚ್. ಆಂಜನೇಯ ಅವರನ್ನು 15,312 ಮತಗಳ ಅಂತರದಿಂದ ಸೋಲಿಸಿದ್ದರು. ಈ ಸಾಂಪ್ರದಾಯಿಕ ಎದುರಾಳಿಗಳು ಈ ಚುನಾವಣೆಯಲ್ಲೂ ಮುಖಾಮುಖಿಯಾಗಿದ್ದರು. ಅದೇ ಫಲಿತಾಂಶ ಇಲ್ಲೂ ಪುನರಾವರ್ತನೆಯಾಯಿತು. ಗೆಲುವಿನ ಅಂತರ ಮಾತ್ರ 38,940!

ಚಿತ್ರದುರ್ಗ, ಮೊಳಕಾಲ್ಮುರಿನಲ್ಲೂ ಇದೇ ಆಗಿದ್ದು 2008ರ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಎಸ್.ಕೆ.ಬಸವರಾಜನ್ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು 16,322 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಅದೇ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು 32 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

2008ರ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಟ ಶಶಿಕುಮಾರ್, ಬಿಜೆಪಿಯ ತಿಪ್ಪೇಸ್ವಾಮಿ ಅವರಿಗೆ ತೀವ್ರ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದಿದ್ದರು. ಶಶಿಕುಮಾರ್ ಈ ಬಾರಿ ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು, ಕೇವಲ 1,575 ಮತಗಳನ್ನು ಪಡೆದಿದ್ದಾರೆ. ಅದೇ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಎಸ್.ತಿಪ್ಪೇಸ್ವಾಮಿ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನ ಎನ್‌.ವೈ.ಗೋಪಾಲಕೃಷ್ಣ ವಿರುದ್ಧ 46,326 ಮತಗಳನ್ನು ಪಡೆದು ಸೋತಿದ್ದರು. ತಿಪ್ಪೇಸ್ವಾಮಿ ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, 41,152 ಮತಗಳನ್ನು ಪಡೆದು ಸೋತಿದ್ದಾರೆ. ಅದೇ ಕ್ಷೇತ್ರದಲ್ಲಿ 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ 27,774 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು. ಈ ಚುನಾವಣೆಯಲ್ಲೂ ಅದೇ ಪಕ್ಷದಿಂದ ಸ್ಪರ್ಧಿಸಿ 15,262 ಮತಗಳನ್ನು ಪಡೆದು, ನಾಲ್ಕನೇ ಸ್ಥಾನ ಪಡೆದಿದ್ದಾರೆ.

2008 - 2018ರಲ್ಲಿ ಮುಖಾಮುಖಿಯಾದವರು

ಕ್ಷೇತ್ರ

ಹೊಳಲ್ಕೆರೆ ಎಂ.ಚಂದ್ರಪ್ಪ – ಬಿಜೆಪಿ, ಎಚ್. ಆಂಜನೇಯ ಕಾಂಗ್ರೆಸ್
ಹೊಸದುರ್ಗ: ಗೂಳಿಹಟ್ಟಿ ಶೇಖರ್ – ಪಕ್ಷೇತರ, ಬಿ.ಜಿ.ಗೋವಿಂದಪ್ಪ ಕಾಂಗ್ರೆಸ್
ಹಿರಿಯೂರು: ಡಿ.ಸುಧಾಕರ್- ಕಾಂಗ್ರೆಸ್, ಯಶೋಧರ ಡಿ, ಜೆಡಿಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.