ADVERTISEMENT

ಪೋಷಕರಿದ್ದರೂ ಇಲ್ಲಿ ಮಕ್ಕಳು ಅನಾಥ!

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 10:50 IST
Last Updated 1 ಫೆಬ್ರುವರಿ 2012, 10:50 IST

ಮೊಳಕಾಲ್ಮುರು: ಆ ಮಕ್ಕಳಿಗೆ ತಂದೆ, ತಾಯಿ ಇದ್ದಾರೆ. ಆದರೆ, ಅನಾಥ ಬದುಕು ಕಟ್ಟಿಟ್ಟ ಬುತ್ತಿಯಾಗಿದೆ. ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳನ್ನು ತೊರೆದು ಗುಳೆ ಹೋಗಿ  ದುಡಿಯಬೇಕಾದ ಅನಿವಾರ್ಯತೆ. ಇಂತಹ ಸಂದಿಗ್ದ ಸ್ಥಿತಿ ತಾಲ್ಲೂಕಿನ ಸುಂಕದಾರಹಟ್ಟಿ ಲಂಬಾಣಿ ತಾಂಡಾದಲ್ಲಿ ಕಂಡುಬರತ್ತಿದೆ.

ತಾಲ್ಲೂಕಿಗೆ ಬಡತನ, ಗುಳೆ ಹೊಸದೇನಲ್ಲ, ಆದರೆ, ಇದಕ್ಕೂ ಒಂದು ಮಿತಿ ಇದೆ. ಸರ್ಕಾರ ಬೇರುಮಟ್ಟದ ಜನತೆಗೆ ಕಲ್ಪಿಸುವ ಸೌಕರ್ಯಗಳು ಯಾವ ರೀತಿ ಅನುಷ್ಠಾನವಾಗುತ್ತಿವೆ ಮತ್ತು ಇದರಿಂದ ಎಷ್ಟರಮಟ್ಟಿಗೆ ಅನುಕೂಲವಾಗಿದೆ ಎಂಬ ಕುರಿತು ಪರಾಮರ್ಶೆ ನಡೆಸಲು ಈ ತಾಂಡಾ ಸೂಕ್ತ ಉದಾಹಣೆಯಾಗಿದೆ.

ಬೆಂಗಳೂರು- ಬಳ್ಳಾರಿ ರಾಜ್ಯ ಹೆದ್ದಾರಿಯ ಹಾನಗಲ್‌ನಿಂದ ಸುಮಾರು ಐದು ಕಿ.ಮೀ. ಸಾಗಿದರೆ ಸಿಗುವ ಪುಟ್ಟ ಗ್ರಾಮವೇ ಸುಂಕದಾರಹಟ್ಟಿ ಲಂಬಾಣಿ ತಾಂಡಾ. ಇಲ್ಲಿ 15 ಮನೆಗಳಿದ್ದು, 210 ಜನಸಂಖ್ಯೆ ಇದೆ. ಇಲ್ಲಿನ ನಿವಾಸಿಗಳಿಗೆ ಕಾಯಂ ಕೂಲಿ ಕೆಲಸವಿಲ್ಲದ ಕಾರಣ ಗುಳೆ ಅನಿವಾರ್ಯವಾಗಿದೆ ಎಂದು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ಗೆ ನಿವಾಸಿ ಗುಂಡ್ಯಾನಾಯ್ಕ ಹೇಳಿದರು.

ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಹಾಸನ, ಚಾಮರಾಜನಗರ, ಮೈಸೂರು ಮುಂತಾದ ಕಡೆಗಳಿಗೆ ಕಬ್ಬುಕಡಿಯಲು ಗುಳೆ ಹೋಗುತ್ತಾರೆ. ಮರಳಿ ಮಾರ್ಚ್ ತಿಂಗಳಿನಲ್ಲಿ ಯುಗಾದಿ ಹಬ್ಬಕ್ಕೆ ಬರುತ್ತಾರೆ. ಈ ಸಾರಿ 11 ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು, ಇಬ್ಬರು ವೃದ್ಧರು ಮತ್ತು ನಾನು ಹಾಗೂ ನನ್ನ ಹೆಂಡತಿ ಮಾತ್ರ ಉಳಿದಿದ್ದೇವೆ. 210 ಮಂದಿ ಪೈಕಿ 198 ಮಂದಿ ಗುಳೆ ಹೋಗಿದ್ದಾರೆ.

ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ನನ್ನ ಹೆಂಡತಿ ಕೆಲಸ ಮಾಡುತ್ತಿದ್ದು, ನಾವೇ ರಾತ್ರಿ ಹೊತ್ತು ಈ 11 ಮಕ್ಕಳಿಗೆ ಊಟ ಬಡಿಸುತ್ತೇವೆ. ಇದಕ್ಕೆ ಪೋಷಕರು ಹಣ ನೀಡುತ್ತಾರೆ, ಈ ಮಕ್ಕಳ ಹಾಗೂ ತಾಂಡಾದ ಎಲ್ಲಾ ಜವಾಬ್ದಾರಿ ಉಳಿದುಕೊಂಡಿರುವ ನಾಲ್ಕು ಜನರ ಮೇಲಿದೆ~ ಎಂದು ಹೇಳಿದರು.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 15 ಮಕ್ಕಳಿದ್ದು, ಈಗ ಇದು 11ಕ್ಕೆ ಕುಸಿತವಾಗಿದೆ. ಶಿಕ್ಷಕರ ಸಂಖ್ಯೆ ಸಹ ಎರಡರಿಂದ ಒಂದಕ್ಕೆ ಮೊಟಕು ಮಾಡಲಾಗಿದೆ. ಪ್ರಸ್ತುತ ಶಿಕ್ಷಕಿಯೊಬ್ಬರು ಐದನೇ ತರಗತಿವರೆಗೆ ಒಟ್ಟು 11 ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ತಾಂಡಾದ ಇಬ್ಬರಿಗೆ ಮಾತ್ರ ಒಟ್ಟು 8 ಎಕರೆ ಜಮೀನು ಇದೆ. ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಮಾಹಿತಿ ಲಭ್ಯವಾಯಿತು.

ಗುಳೆ ತಪ್ಪಿಸಬೇಕಾದ ಉದ್ಯೋಗಖಾತ್ರಿ ಅಡಿ ವರ್ಷ ಪೂರ್ತಿ ಕೆಲಸ ಸಿಗುತ್ತಿಲ್ಲ ಹಾಗೂ ಮಾಡಿದ ಕೆಲಸಕ್ಕೆ ಸರಿಯಾಗಿ ಕೂಲಿ ನೀಡುವುದಿಲ್ಲ, ಸ್ವಉದ್ಯೋಗ ಕಲ್ಪಿಸಿ ಗುಳೆ ತಡೆಯಬೇಕಾದ ಯೋಜನೆಗಳು ಇವರನ್ನು ತಲುಪಿಲ್ಲ.
ಸ್ವಉದ್ಯೋಗ ಯೋಜನೆ ಕಲ್ಪಿಸಿದಲ್ಲಿ ಗುಳೆ ತಡೆಯಲು ಸಾಧ್ಯವಿದೆ ಎಂದು ನಿವಾಸಿಗಳು ಹೇಳುತ್ತಾರೆ. ಬಂಜಾರ ಅಭಿವೃದ್ಧಿ ನಿಗಮ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ ಎಂದು ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ ಕೋರುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.