ADVERTISEMENT

ಬಯಲುಸೀಮೆ ಜಿಲ್ಲೆಯಲ್ಲೂ ಕೆಜೆಪಿ ಗಾಳಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 7:03 IST
Last Updated 3 ಡಿಸೆಂಬರ್ 2012, 7:03 IST

ಚಿತ್ರದುರ್ಗ: ಜಿಲ್ಲೆಯಲ್ಲೂ ಈಗ ಕೆಜೆಪಿ ಗಾಳಿ ಬೀಸುತ್ತಿದ್ದು, ಬಿಜೆಪಿ ವಿಭಜನೆಯ ಹಾದಿಯಲ್ಲಿ ಸಾಗುತ್ತಿದೆ. ಹಾವೇರಿಯಲ್ಲಿ ಡಿ. 9ರಂದು ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಮುನ್ನವೇ ಈ ಚಿತ್ರಣ ಮೂಡುತ್ತಿದೆ.

ಈಗಾಗಲೇ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಹೊಸದುರ್ಗ ಕ್ಷೇತ್ರದ ಮುಖಂಡ ಲಿಂಗಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕೆಜೆಪಿಗೆ ಅಧಿಕೃತವಾಗಿ ಸೇರುವ ತಮ್ಮ ಹಾದಿಯನ್ನು ಸುಗಮಗೊಳಿಸಿಕೊಂಡಿದ್ದಾರೆ.

`ಮಾನಸಿಕವಾಗಿ ಹಿಂದೆಯೇ ಬಿಜೆಪಿ ತೊರೆದಿದ್ದೆ. ಅಧಿಕೃತವಾಗಿ ಡಿ. 9ರಂದು ಯಡಿಯೂರಪ್ಪ ಅವರ ನಾಯಕತ್ವ ಬೆಂಬಲಿಸಿ ಕೆಜೆಪಿ ಸೇರುತ್ತೇನೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದೇನೆ. ಬಿಜೆಪಿ ಜಿಲ್ಲಾ ಘಟಕದಲ್ಲೂ ಆಂತರಿಕ ಸಮಸ್ಯೆಗಳಿವೆ. ಅದಕ್ಕೂ ಒಂದು ರೀತಿಯ ಕ್ಯಾನ್ಸರ್ ಅಂಟಿಕೊಂಡಿದೆ. ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡವರಿಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಒಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ಮಾಡಲು ಬಿಜೆಪಿಯಲ್ಲಿ ಅವಕಾಶ ನೀಡಲಿಲ್ಲ' ಎಂದು ಲಿಂಗಮೂರ್ತಿ `ಪ್ರಜಾವಾಣಿ'ಗೆ ತಿಳಿಸಿದರು.

ಇನ್ನೂ ಹೊಳಲ್ಕೆರೆಯಲ್ಲಿ ಶಾಸಕ ಎಂ. ಚಂದ್ರಪ್ಪ, ಡಿ. 4ರಂದು ಸಾರ್ವಜನಿಕ ಸಮಾವೇಶ  ಏರ್ಪಡಿಸಿರುವುದು ಕುತೂಹಲ ಮೂಡಿಸಿದೆ. ಹೊಳಲ್ಕೆರೆಯಲ್ಲಿನ ವಿವಿಧ ಕಟ್ಟಡಗಳ ಕಾಮಗಾರಿಗಳನ್ನು ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಅವರ ನಿಧನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಆದರೆ, ಶಾಸಕ ಚಂದ್ರಪ್ಪ ಮಾತ್ರ ಸಾರ್ವಜನಿಕ ಸಮಾರಂಭ ಆಯೋಜಿಸಿದ್ದಾರೆ. ಇದು ಬಹುತೇಕ ಅಧಿಕೃತ ಕೆಜೆಪಿ ಸಮಾವೇಶ ಎಂದೇ ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾವೇಶ ಉದ್ಘಾಟಿಸಲಿದ್ದಾರೆ. ಯಡಿಯೂರಪ್ಪ ಬೆಂಬಲಿಗ ಸಚಿವರು, ಶಾಸಕರು, ಮುಖಂಡರು ಮಾತ್ರ ಸಮಾವೇಶದಲ್ಲಿ ಈ ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ.

`ಹೊಳಲ್ಕೆರೆಯಲ್ಲಿನ ಸಮಾವೇಶದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಮ್ಮ ಗಮನಕ್ಕೂ ಬಂದಿಲ್ಲ ಮತ್ತು ಆಹ್ವಾನವೂ ಬಂದಿಲ್ಲ' ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ತಿಳಿಸಿದ್ದಾರೆ.

ಚಂದ್ರಪ್ಪ ಅವರು ಮಾತ್ರ ಡಿ. 4ಕ್ಕೆ ಹೊಳಲ್ಕೆರೆ ಪಟ್ಟಣದ ದೇವರ ಕಣಿವೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಭರದಿಂದ ಸಿದ್ಧತೆಗಳನ್ನು ನಡೆಸಿದ್ದಾರೆ. ಇದೇ ಸಮಾರಂಭದಲ್ಲಿ ಕೆಜೆಪಿಗೆ ಅಧಿಕೃತವಾಗಿ ಜಿಲ್ಲೆಯಲ್ಲಿ ಚಾಲನೆ ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.

`ಇದು ಸಾರ್ವಜನಿಕ ಸಮಾವೇಶ. ಮುಂದೆ ಇದೇ ಕೆಜೆಪಿಯಾಗಿ ಪರಿವರ್ತನೆಯಾಗಬಹುದು. ಸ್ವಲ್ಪ ದಿನ ಕಾಲಾವಕಾಶ ಬೇಕಾಗುತ್ತದೆ. ಕಾಯಿ ಹಣ್ಣಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ರಾಜ್ಯ ಘಟಕದ ಅಧ್ಯಕ್ಷರೂ ಈಶ್ವರಪ್ಪ ನನಗೆ ಅನ್ಯಾಯ ಮಾಡಿದರು. ಹೀಗಾಗಿ, ಯಾವ ಪುರುಷಾರ್ಥಕ್ಕೆ ಬಿಜೆಪಿಯಲ್ಲಿ ಇರಬೇಕು' ಎಂದು ಶಾಸಕ ಚಂದ್ರಪ್ಪ ಪ್ರಶ್ನಿಸಿದ್ದಾರೆ.

ಚಳ್ಳಕೆರೆ ಶಾಸಕ ತಿಪ್ಪೇಸ್ವಾಮಿ ಅವರು ಕೆಜೆಪಿ ಸೇರುವ ಅಥವಾ ಬಿಜೆಪಿಯಲ್ಲಿ ಉಳಿಯುವ ಬಗ್ಗೆ ಇನ್ನೂ ಬಹಿರಂಗವಾಗಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈಗಾಗಲೇ, ಮುಖಂಡರು ಮತ್ತು ಕಾರ್ಯಕರ್ತರು ಜತೆ ಚರ್ಚಿಸಿರುವ ಶಾಸಕರು ತಮ್ಮ ಅಂತರಂಗದ ನಿರ್ಧಾರವನ್ನು ಬಹಿರಂಗವಾಗಿ ಪ್ರಕಟಿಸುವ ಗೋಜಿಗೆ ಹೋಗಿಲ್ಲ.

ಬಿಜೆಪಿಯ ಇನ್ನೊಬ್ಬ ಮುಖಂಡ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಎನ್.ಆರ್. ಲಕ್ಷ್ಮೀಕಾಂತ್ ಅವರು ಡಿ. 6ರಂದು ಹಿರಿಯೂರಿನಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ಸೇರಲಿದ್ದಾರೆ.

ಸ್ಥಳೀಯ ಸಂಸ್ಥೆಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿರಿಯೂರಿನಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಇತ್ತೀಚೆಗೆ ಹೇಳಿದ್ದಾರೆ. ಆದರೆ, ಅವರು ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಖಚಿತವಾಗಿ ಹೇಳದೇ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಹೀಗಾಗಿ, ತಿಪ್ಪಾರೆಡ್ಡಿ ಅವರ ನಡೆ ಎತ್ತ ಸಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಹೀಗಾಗಿ, ಬಿಜೆಪಿಯ ಒಂದೊಂದೇ ಕೊಂಡಿಗಳು ಕಳಚುತ್ತಿರುವ ಸಂದರ್ಭದಲ್ಲೇ ಹೊಸ ಮುಖಗಳಿಗೂ ಅವಕಾಶವೂ ದೊರೆಯಲಿದೆ. ಈ ವಿಘಟನೆಯ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆಯೇ ಎನ್ನುವುದು ಮಾತ್ರ ಯಕ್ಷಪ್ರಶ್ನೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.