ADVERTISEMENT

ಬರದಲ್ಲೂ ಭರ್ಜರಿ ಈರುಳ್ಳಿ ಬೀಜೋತ್ಪಾದನೆ!

ಸಾಂತೇನಹಳ್ಳಿ ಕಾಂತರಾಜ್
Published 28 ಏಪ್ರಿಲ್ 2017, 5:23 IST
Last Updated 28 ಏಪ್ರಿಲ್ 2017, 5:23 IST
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ರೈತ ಶಿವಕುಮಾರ್ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದಿರುವ ಈರುಳ್ಳಿ ಬೆಳೆ.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ರೈತ ಶಿವಕುಮಾರ್ ಅವರ ಹೊಲದಲ್ಲಿ ಸಮೃದ್ಧವಾಗಿ ಬೆಳೆದಿರುವ ಈರುಳ್ಳಿ ಬೆಳೆ.   

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯ ಪ್ರಗತಿಪರ ರೈತ ಶಿವಕುಮಾರ ಹೊರಟ್ಟಿ ಬರದಲ್ಲೂ ಭರ್ಜರಿ ಈರುಳ್ಳಿ ಬೀಜೋತ್ಪಾದನೆ ಮಾಡಿದ್ದಾರೆ!

ತಮ್ಮ ಮೂರು ಎಕರೆ ಹೊಲದಲ್ಲಿ ಅರ್ಕ ಕಲ್ಯಾಣ ತಳಿಯ ಈರುಳ್ಳಿ ಬೀಜಗಳನ್ನು ಉತ್ಪಾದಿಸಿದ್ದು, ಬೆಳೆ ಸಮೃದ್ಧವಾಗಿ ಬಂದಿದೆ.

9 ಕ್ವಿಂಟಲ್ ಬೀಜೋತ್ಪಾದನೆ ನಿರೀಕ್ಷೆ: ‘ಪ್ರತಿ ಕೆಜಿಗೆ ₹ 2,000 ದಂತೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೆ. ನಂತರ ಚಿಕ್ಕ ಗೆಡ್ಡೆಗಳನ್ನು ಕಿತ್ತು ನಾಟಿ ಮಾಡಿದೆವು. ಎಕರೆಗೆ 30 ಚೀಲ ಗೆಡ್ಡೆ ಬೇಕಾಗುತ್ತದೆ. ಒಂದು ಎಕರೆಗೆ ಕನಿಷ್ಠ ಮೂರು ಕ್ವಿಂಟಲ್ ಬೀಜ ಉತ್ಪಾದನೆ ಆಗುವ ನಿರೀಕ್ಷೆ ಇದೆ. ಮೂರು ಎಕರೆಗೆ ಒಂಬತ್ತು ಕ್ವಿಂಟಲ್ ಬೀಜ ಸಿಗಲಿದ್ದು, ನಾವು ರೈತರಿಗೆ ಒಂದು ಕೆಜಿಗೆ  ₹ 900 ರಂತೆ ಮಾರಾಟ ಮಾಡುವ ಯೋಚನೆ ಇದೆ. ಅಂದರೆ ಸುಮಾರು ₹ 8 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೇವೆ. ಪ್ರತಿ ಎಕರೆಗೆ ₹ 70 ಸಾವಿರದಿಂದ ₹ 80 ಸಾವಿರ ಖರ್ಚು ಬರಲಿದ್ದು, ಏನಿಲ್ಲ
ವೆಂದರೂ ₹ 5 ಲಕ್ಷ ಉಳಿಯುತ್ತದೆ’ ಎನ್ನುತ್ತಾರೆ ರೈತ ಶಿವಕುಮಾರ್.

ADVERTISEMENT

ಸಾವಯವ ಕೃಷಿ: ಶಿವಕುಮಾರ್ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಎರೆಹುಳು, ಕುರಿ, ಎಮ್ಮೆ, ಹಸುವಿನ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯವ ಕೃಷಿ ಪದ್ಧತಿಯಿಂದ ಬೀಜೋತ್ಪಾದನೆ ಮಾಡಿದ್ದಾರೆ. ಬಿತ್ತನೆಗೂ ಒಂದು ತಿಂಗಳು ಮುಂಚೆ ಬೀಜಕ್ಕೆ ಟ್ರೈಕೋಡರ್ಮ, ಜೀವಾಣುಗಳನ್ನು ಬೆರೆಸಿ ನೆರಳಿನಲ್ಲಿ ಪೋಷಣೆ ಮಾಡಿದ್ದಾರೆ. ಇದರಿಂದ ರೋಗರಹಿತ ಬೀಜ ಉತ್ಪಾದನೆ ಆಗಲಿದ್ದು, ಮುಂದಿನ ತಲೆಮಾರಿನ ಬೀಜವೂ ಆರೋಗ್ಯಕರವಾಗಲಿದೆ.

ಬಬ್ಬೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಓಂಕಾರಪ್ಪ ಅವರ ನಿರ್ದೇಶನದಂತೆ ಅರ್ಕ ಕಲ್ಯಾಣ ತಳಿ ಬೆಳೆದಿದ್ದೇನೆ. ಈ ತಳಿಯ ಈರುಳ್ಳಿ ಉತ್ತಮ ಗಾತ್ರ, ಬಣ್ಣ ಇರಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಸಿಗಲಿದೆ. ಏನಿಲ್ಲವೆಂದರೂ ಒಂದು ಎಕರೆಗೆ 280 ಚೀಲ ಈರುಳ್ಳಿ ಉತ್ಪಾದಿಸಬಹುದು ಎಂಬುದು ಶಿವಕುಮಾರ್ ಅವರ ಲೆಕ್ಕಾಚಾರ.

ನೀರಿನ ಮಿತಬಳಕೆ: ಈರುಳ್ಳಿ ಬೀಜೋತ್ಪಾದನೆಗೆ ಹೆಚ್ಚು ನೀರು ಬೇಕಿಲ್ಲ. ಸಣ್ಣ ಬೆಳೆ ಇದ್ದಾಗ ತುಂತುರು ನೀರಾವರಿ ಪದ್ಧತಿಯಿಂದ ನೀರು ಒದಗಿಸುತ್ತೇವೆ. ನಂತರ ಭೂಮಿ ನೆನೆಯುವಂತೆ ನೀರು ಹರಿಸುತ್ತೇವೆ. ವಾರಕ್ಕೊಮ್ಮೆ ನೀರು ಬಿಟ್ಟರೆ ಸಾಕು. ನಾನು ಬೀಜಕ್ಕಾಗಿ ಬೆಳೆದಿರುವ ಈರುಳ್ಳಿ ಹೊಲದಲ್ಲಿ ಚಿಕ್ಕ ಅಡಿಕೆ ಸಸಿಗಳೂ ಇವೆ. ನಮ್ಮ ಹೊಲದಲ್ಲಿ ಎರಡು ಕೊಳವೆಬಾವಿಗಳಿದ್ದು, ನೀರು ಸಾಕಾಗುತ್ತದೆ ಎಂದು ಅವರು ಹೇಳುತ್ತಾರೆ.

ರೈತರೇ ಬೀಜೋತ್ಪಾದನೆ ಮಾಡಲಿ: ಈರುಳ್ಳಿ ಬೆಳೆಗಾರರು ಬಿತ್ತನೆಯ ಸಮಯದಲ್ಲಿ ಬೀಜಕ್ಕಾಗಿ ಪರದಾಡುತ್ತಾರೆ. ಹೊರ ರಾಜ್ಯಗಳಿಂದ ಕಂಪೆನಿಯ ಹೆಸರೇ ಇಲ್ಲದ ಬೀಜಗಳನ್ನು ತರಿಸುತ್ತಾರೆ. ಅಪರಿಚಿತ ಕಂಪೆನಿಗಳಿಂದ ಬೀಜ ತರಿಸಿ ಮೋಸಹೋದ ಉದಾಹರಣೆಗಳೂ ಇವೆ. ಎಲ್ಲಾ ತಳಿಯ ಈರುಳ್ಳಿ ಬೀಜಗಳೂ ಒಂದೇ ರೀತಿ ಕಾಣಿಸುತ್ತವೆ. ಆದರೆ ಕಷ್ಟಪಟ್ಟು ಬೆಳೆ ಬೆಳೆದ ನಂತರ ಮೋಸಹೋಗುವ ಸಂಭವ ಇರುತ್ತದೆ.

ಇದಕ್ಕೆಲ್ಲ ಉತ್ತಮ ಪರಿಹಾರ ಎಂದರೆ ಎಲ್ಲಾ ರೈತರೂ ತಮಗೆ ಬೇಕಾದಷ್ಟು ಬೀಜಗಳನ್ನು ಬೆಳೆಯಬೇಕು. ಸುಲಭವಾಗಿ ಈರುಳ್ಳಿ ಬೀಜೋತ್ಪಾದನೆ ಮಾಡಬಹುದಾಗಿದ್ದು, ಅನುಭವಿ ರೈತರ ಮಾರ್ಗದರ್ಶನ ಪಡೆಯಬೇಕು ಎನ್ನುತ್ತಾರೆ ಶಿವಕುಮಾರ್.
ಶಿವಕುಮಾರ್ ಅವರ ಮೊಬೈಲ್‌ 99458 03056, 94829 22357.

**

ರೈತರಿಗೆ ತಾಂತ್ರಿಕ ಮಾಹಿತಿ

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಿಂದ ರೈತರಿಗೆ ತಾಂತ್ರಿಕ ಮಾಹಿತಿ ನೀಡುತ್ತಿದ್ದೇವೆ ಎಂದು ಸಸ್ಯ ಸಂರಕ್ಷಣಾ ತಜ್ಞ ಡಾ.ಎಸ್.ಓಂಕಾರಪ್ಪ ತಿಳಿಸಿದ್ದಾರೆ.

‘ಈ ವರ್ಷ ಹೊಸದುರ್ಗ ತಾಲ್ಲೂಕಿನ ಕುಂದೂರು, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಮತ್ತು ಬಬ್ಬೂರಿನ ರೈತರು ಸುಮಾರು 60 ಎಕರೆ ಪ್ರದೇಶದಲ್ಲಿ ಅರ್ಕ ಕಲ್ಯಾಣ ತಳಿಯ ಬೀಜೋತ್ಪಾದನೆ ಮಾಡಿದ್ದಾರೆ.

ಕಳೆದ ಮುಂಗಾರು ಅವಧಿಯಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಅರ್ಕ ಕಲ್ಯಾಣ ತಳಿಯ ಮೂಲ ಬೀಜಗಳನ್ನು ತರಿಸಿ ರೈತರಿಗೆ ವಿತರಿಸಿದ್ದೆವು. ರೈತರು ಉತ್ತಮ ಇಳುವರಿ ಪಡೆದು ಸಣ್ಣ ಗೆಡ್ಡೆಗಳನ್ನು ನಾಟಿ ಮಾಡಿ ಬೀಜೋತ್ಪಾದನೆ ಮಾಡಿದ್ದಾರೆ. ನಾವು ರೈತರಿಂದ ರೈತರಿಗೆ ಸಂಪರ್ಕ ಕಲ್ಪಿಸಿ ಬೀಜ ಮಾರಾಟಕ್ಕೆ ನೆರವಾಗುತ್ತೇವೆ’ ಎನ್ನುತ್ತಾರೆ ಅವರು.

**

ರೈತರು ಅಪರಿಚಿತ ಕಂಪೆನಿಗಳಿಂದ ದುಬಾರಿ ಬೆಲೆ ನೀಡಿ ಈರುಳ್ಳಿ ಬೀಜ ಖರೀದಿಸಿ ಮೋಸ ಹೋಗುತ್ತಾರೆ. ತಾವೇ ಉತ್ಪಾದಿಸಿ ಉತ್ತಮ ಇಳುವರಿ ಪಡೆಯಬಹುದು.
-ಶಿವಕುಮಾರ್, ರಾಮಗಿರಿಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.