ADVERTISEMENT

ಬಸ್‌ನಿಲ್ದಾಣ ಮುಂಭಾಗದ ಗೂಡಂಗಡಿ ನೆಲಸಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 6:35 IST
Last Updated 14 ಅಕ್ಟೋಬರ್ 2012, 6:35 IST

ಹೊಳಲ್ಕೆರೆ: ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಿಂದ  ಮುಖ್ಯವೃತ್ತದವರೆಗೆ ರಸ್ತೆ ಬದಿಯಲ್ಲಿದ್ದ ಗೂಡಂಗಡಿಗಳನ್ನು ಜೆಸಿಬಿ ಯಂತ್ರದಿಂದ ಶನಿವಾರ ಬೆಳಿಗ್ಗೆ ತೆರವುಗೊಳಿಸಲಾಯಿತು.

 ಹಣ್ಣು, ಹೂವು, ತರಕಾರಿ, ಬೀಡಾ, ಸೈಕಲ್, ವಾಚ್ ರಿಪೇರಿ, ಜ್ಯೂಸ್, ಚಪ್ಪಲಿ, ಕೋಳಿಮೊಟ್ಟೆ, ಸಮೋಸಾ, ಜಿಲೇಬಿ, ಎಳನೀರು, ಸಣ್ಣ ಇಡ್ಲಿ ಹೊಟೇಲ್ ಮತ್ತಿತರ ಸುಮಾರು 30ಕ್ಕೂ ಹೆಚ್ಚು ಗೂಡಂಗಡಿಗಳನ್ನು ಕೆಡವಿ ಹಾಕಲಾಯಿತು. ತೆರವು ಕಾರ್ಯಾಚರಣೆಯ ಬಗ್ಗೆ ತಿಳಿದಿದ್ದ ಕೆಲವು ವ್ಯಾಪಾರಿಗಳು ರಾತ್ರಿಯೇ ಸಾಮಾನುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದರು. ಕೆಲವರು ಬಂದಾಗ ನೋಡೋಣ ಎಂದು ಎಲ್ಲಾ ಸಾಮಾನುಗಳನ್ನು ಅಂಗಡಿಯಲ್ಲಿಯೇ ಬಿಟ್ಟಿದ್ದರು. ಇದ್ದಕ್ಕಿದ್ದಂತೆ ಎಲ್ಲಾ ಅಂಗಡಿಗಳನ್ನು ನೆಲಸಮ ಮಾಡಿದಾಗ ಕಬ್ಬಿಣದ ತಗಡುಗಳು, ಮರದ ಹಲಗೆಗಳ ಕೆಳಗೆ ಸಿಕ್ಕಿ ಅಂಗಡಿ ಸಾಮಾನುಗಳು ಪುಡಿ ಪುಡಿಯಾದವು.

ವ್ಯಾಪಾರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ತಗಡುಗಳನ್ನು ಹೊರಹಾಕಿ ಹಣ್ಣು, ಬಿಸ್ಕೆಟ್, ತಂಪು ಪಾನೀಯ ಬಾಟೆಲ್, ಬೀಡಾ ಸಾಮಗ್ರಿಗಳು, ಹೂವಿನ ಹಾರ, ಸ್ಟೌ, ಸೈಕಲ್, ಕುರ್ಚಿ, ಮೇಜುಗಳನ್ನು ಆರಿಸಿಕೊಂಡರು. ಕೆಲವು ಸಾಮಾನುಗಳು ಹಾಳಾಗಿದ್ದವು. ಅಳಿದುಳಿದ ಸಾಮಾನುಗಳನ್ನು ಎತ್ತಿನ ಗಾಡಿ, ಲಾರಿಗಳಲ್ಲಿ ತುಂಬಿಕೊಂಡು ಹೋದರು.

ಮಳಿಗೆ ನಿರ್ಮಾಣ: ಗೂಡಂಗಡಿ ವ್ಯಾಪಾರಿಗಳು ಆತಂಕ ಪಡುವ ಅಗತ್ಯ ಇಲ್ಲ. ಬಸ್‌ನಿಲ್ದಾಣದ ಮುಂದೆ ಅಸಹ್ಯವಾಗಿ ಕಾಣಬಾರದು ಎಂಬ ಉದ್ದೇಶ ನನ್ನದು. ಈಗ ತೆರವುಗೊಳಿಸಿರುವ ಜಾಗದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಮಳಿಗೆ ನಿರ್ಮಿಸಿ, ಹಳೆಯ ವ್ಯಾಪಾರಿಗಳಿಗೆ ನೀಡಲಾಗುವುದು. ಈಗಾಗಲೇ ಎಂಜಿನಿಯರ್ ನಕಾಶೆ ತಯಾರಿಸಿದ್ದು, ನೆಲ ಅಂತಸ್ತಿನಲ್ಲಿ 28 ಮತ್ತು ಮೊದಲ ಮಹಡಿಯಲ್ಲಿ 28 ಮಳಿಗೆ ನಿರ್ಮಿಸಲಾಗುವುದು. ಇದಕ್ಕಾಗಿ ್ಙ 50 ಲಕ್ಷ ಮಂಜೂರು ಮಾಡಲಾಗಿದ್ದು, ಸೋಮವಾರದಿಂದಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಎಚ್ಚರಿಕೆ: ಅಂಗಡಿ ತೆರವುಗೊಳಿಸುವ ಬಗ್ಗೆ ಒಂದು ತಿಂಗಳಿನಿಂದಲೂ ಸೂಚನೆ ನೀಡಲಾಗಿತ್ತು. ನಿನ್ನೆಯೂ ರಾತ್ರಿ ಅಂಗಡಿ ತೆರವು ಮಾಡಲಾಗುವುದು ಎಂದು ವ್ಯಾಪಾರಿಗಳಿಗೆ ತಿಳಿಸಲಾಗಿತ್ತು. ಆದರೂ ಕೆಲವರು ಸಾಮಾನುಗಳನ್ನು ತೆಗೆದುಕೊಂಡಿಲ್ಲ. ಬಸ್‌ನಿಲ್ದಾಣದ ಹಿಂಭಾಗ ಇವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವೀರಯ್ಯ ತಿಳಿಸಿದರು.

ಬಿಗಿ ಭದ್ರತೆ: ಭದ್ರತೆಯ ದೃಷ್ಟಿಯಿಂದ ತೆರವು ಕಾರ್ಯಾಚರಣೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಸಿಪಿಐ ಶ್ರೀಧರ್, ಪಿಎಸ್‌ಐ ಗಿರೀಶ್, ಚಿಕ್ಕಜಾಜೂರು ಪಿಎಸ್‌ಐ ಹಾಜರಿದ್ದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. `ಕಾಲಾವಕಾಶ ಕೊಟ್ಟಿದ್ದರೆ ಸಾಮಾನು ತೆಗೆದುಕೊಳ್ಳುತ್ತಿದ್ದೆವು. ಈಗ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿವೆ~ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.