ADVERTISEMENT

ಬಿಸಿಲಿಗೆ ಬಾಡದೆ ಉಳಿದ ಸಸ್ಯೋದ್ಯಾನ

ಗಾಣಧಾಳು ಶ್ರೀಕಂಠ
Published 12 ಜೂನ್ 2017, 7:48 IST
Last Updated 12 ಜೂನ್ 2017, 7:48 IST
ಚಿತ್ರದುರ್ಗದ ಹಸಿರು ತಾಣ ಸರಸ್ವತಿಪುರ ಉದ್ಯಾನ
ಚಿತ್ರದುರ್ಗದ ಹಸಿರು ತಾಣ ಸರಸ್ವತಿಪುರ ಉದ್ಯಾನ   

ಚಿತ್ರದುರ್ಗ: ದೊಡ್ಡ ಗೇಟು. ಒಳಗೆ ಪ್ರವೇಶಿಸುತ್ತಲೇ ಸಿಮೆಂಟು ಚಪ್ಪಡಿಗಳ ವಾಕಿಂಗ್ ಪಾತ್ ವೇ. ಅದರ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಸುತ್ತಲೂ ಕಾಡು ಮರಗಳ ಸಂಸಾರದ ದರ್ಶನ. ಎರಡು ವರ್ಷಗಳ ಬರಕ್ಕೂ ಜಗ್ಗದ ಆ ಮರ ಗಳು ಇಡೀ ಅಂಗಳಕ್ಕೆ ಹಸಿರು ಚಾದರ ಹೊದೆಸಿವೆ. ಬಣ್ಣ ಬಣ್ಣದ ಹೂವುಗಳು ತಿಲಕವಿಟ್ಟಂತೆ ಕಾಣುತ್ತವೆ! ನಗರದ ಸರಸ್ವತಿ ಪುರದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿ ರುವ ಉದ್ಯಾನದ ಸೌಂದರ್ಯದ ಪರಿಚಯವಿದು.

ಹಲವು ನಾಗರಿಕರ ಪರಿಶ್ರಮ, ಹಲವು ಜಿಲ್ಲಾಧಿಕಾರಿಗಳ, ಅರಣ್ಯ ಇಲಾಖೆ ಅಧಿಕಾರಿಗಳ ಆಸಕ್ತಿಯಿಂದ ಇಂಥದ್ದೊಂದು ಸುಂದರ ಉದ್ಯಾನ ರೂಪುಗೊಂಡಿದೆ. ಸರಸ್ವತಿ ಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಆಸ್ಥೆ ಹಾಗೂ ಸುತ್ತಲಿನ ನಿವಾಸಿಗಳ ಪ್ರೀತಿ, ಕಾಳಜಿಯಿಂದ ಉದ್ಯಾನ ಈಗಲೂ ‘ಹಸಿರುತನ’ ಉಳಿಸಿಕೊಂಡಿದೆ.

ಕಾಡು ಮರಗಳ ಸಂಸಾರ: ಉದ್ಯಾನದ ತುಂಬಾ ಕಾಡು ಮರಗಳನ್ನು ಹೆಚ್ಚಾಗಿ ಬೆಳೆಸಲಾಗಿದೆ. ಹುಣಸೆ, ಹೊಂಗೆ, ಅರಳಿ, ಚೆನ್ನಕೇಸರಿ (ಮೇ ಫ್ಲವರ್), ಬೇವು ಸೇರಿದಂತೆ ಹತ್ತಾರು ವಿವಿಧ ಜಾತಿಯ ಮರಗಳಿವೆ. ಪಾರ್ಕ್ ಸುತ್ತ ಕಬ್ಬಿಣದ ಬೇಲಿ ಇದೆ.

ADVERTISEMENT

ಅದರ ಪಕ್ಕದಲ್ಲೇ ಸಾಲು ಮರಗಳನ್ನು ಬೆಳೆಸಿದ್ದಾರೆ. ಪಾರ್ಕ್ ನಡುವಿರುವ ಮರಗಳಿಗೆ ಸುತ್ತ ಸಿಮೆಂಟ್ ಕಟ್ಟೆ ಕಟ್ಟಿದ್ದಾರೆ. ಇದರ ಜತೆಗೆ ಅಲ್ಲಲ್ಲೇ ಆಸನಗಳನ್ನು ಜೋಡಿಸಲಾ ಗಿದೆ. ಸುತ್ತಲೂ ವಾಕಿಂಗ್ ಪಾತ್ ಇದೆ. ಉದ್ಯಾನದ ನಡುವೆಯೂ ಕಲ್ಲ ಚಪ್ಪಡಿಗಳ ದಾರಿ ಮಾಡಿದ್ದಾರೆ. ಬೆಳಿಗ್ಗೆ ಸಂಜೆ ಹತ್ತಾರು ಮಂದಿ ವಾಕಿಂಗ್ ಮಾಡುತ್ತಾರೆ.

ಜನರೇ ಬೆಳೆಸಿದ ಗಿಡಗಳಿವು: 2000ನೇ ಇಸವಿಯಲ್ಲಿ ಪಾರ್ಕ್ ಆರಂಭವಾಗಿದೆ. ಈ ಪಾರ್ಕ್ ನಿರ್ಮಾಣದ ಹಿಂದೆ ಸ್ಥಳೀಯ ಜನಪ್ರತಿನಿಧಿಗಳು, ನಿವಾಸಿ ಗಳ ಒತ್ತಾಸೆ, ಆಸಕ್ತಿಯ ಜತೆಗೆ, ಜಿಲ್ಲಾಧಿ ಕಾರಿಗಳಾದ ಅಮಿತಾ ಪ್ರಸಾದ್, ಜಿ.ಎಸ್.ಹೆಗಡೆ, ಬಸವರಾಜು, ಬಿಸ್ವಾಸ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎಸ್.ಕರಿಯಪ್ಪ ಅವರಂಥವರ ಪರಿಶ್ರಮ ಕೂಡ ಇದೆ’ ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯನಾಗರಿಕ, ಪಾರ್ಕ್ ನಿರ್ಮಾಣಕ್ಕೆ ಆರಂಭದಲ್ಲಿ ಕೈ ಜೋಡಿಸಿದ್ದ ಜಿ.ಎಸ್.ಉಜ್ಜಿನಪ್ಪ.

ಪಾರ್ಕ್ ನಿರ್ಮಾಣವಾದ ಮೇಲೆ ಅದಕ್ಕೊಂದು ಹೊಸ ರೂಪ ಕೊಟ್ಟಿದ್ದು ಜಿಲ್ಲಾಧಿಕಾರಿ ಬಿಸ್ವಾಸ್ ಎಂದು ಸಂಘದ ಸದಸ್ಯರು ನೆನಪಿಸಿಕೊಳ್ಳುತ್ತಾರೆ. ಪಾರ್ಕ್‌ ನಲ್ಲಿರುವ ಬಹುತೇಕ ಗಿಡಗಳನ್ನೆಲ್ಲ ನಾಗರಿಕರೇ ಆರೈಕೆ ಮಾಡಿದ್ದಾರೆ. ನೀರೆರೆದು ಪೋಷಿಸಿದ್ದಾರೆ. ಪಾರ್ಕ್ ನಿರ್ಮಿಸಿದ್ದು ನಗರಾಭಿವೃದ್ಧಿ ಪ್ರಾಧಿಕಾರವಾದರೂ, ಅದರ ರಕ್ಷಣೆ ಜವಾಬ್ದಾರಿಯನ್ನು ಸಂಘದ ಸದಸ್ಯರೇ ಮಾಡುತ್ತಿದ್ದಾರೆ. ಉದ್ಯಾನ ನಿರ್ವಹಣೆಗಾಗಿ ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾರೆ.

ಕ್ರಿಯಾಶೀಲ ಅಭಿವೃದ್ಧಿ ಸಂಘ: ಕ್ಷೇಮಾಭಿವೃದ್ಧಿ ಸಂಘ ಕ್ರಿಯಾಶೀಲ ವಾಗಿದೆ. ಸಂಘದಲ್ಲಿ 30 ಸದಸ್ಯರಿದ್ದಾರೆ. ಪ್ರತಿ ಸದಸ್ಯರೂ ವರ್ಷಕ್ಕೆ ₹ 1 ಸಾವಿರ ಶುಲ್ಕ ಪಾವತಿಸು­ತ್ತಾರೆ. ಇದೇ ಹಣದಲ್ಲಿ ಪಾರ್ಕ್ ನಿರ್ವಹಣೆ ಮಾಡುವವನಿಗೆ ತಿಂಗಳು ₹ 2,500 ವೇತನ ಕೊಡು ತ್ತಾರೆ. ಗಿಡಗಳಿಗೆ ನೀರುಣಿಸುವುದು, ಅಂಗಳ ಸ್ವಚ್ಛಗೊಳಿಸುವುದು ಆತನ ಕೆಲಸ. ಹೀಗಾಗಿ ಇಡೀ ಉದ್ಯಾನ ಸ್ವಚ್ಛವಾಗಿದೆ.

‘ಪ್ರತಿ ತಿಂಗಳು 10 ರಂದು ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಭೆ ಸೇರುತ್ತೇವೆ. ಪಾರ್ಕ್ ನಿರ್ವಹಣೆ, ಬಡಾವಣೆಯ ಕುಂದುಕೊರತೆ ಬಗ್ಗೆ ಚರ್ಚಿಸುತ್ತೇವೆ. ಇತ್ತೀಚೆಗೆ ಉದ್ಯಾನಕ್ಕೆ ದೀಪದ ಅಗತ್ಯವಿತ್ತು. ಸಂಸದ ಬಿ.ಎನ್.ಚಂದ್ರಪ್ಪ ಅವರಲ್ಲಿ ಮನವಿ ಮಾಡಿದ್ದೆವು. ಸಂಸದರ ಅನುದಾನದಲ್ಲಿ ಹೈಮಾಸ್ಟ್ ದೀಪ ಹಾಕಿಸಿದ್ದಾರೆ’ ಎನ್ನುತ್ತಾ ಉದ್ಯಾನದ ಪ್ರಗತಿಯನ್ನು ಸಂಘದ ಕಾರ್ಯದರ್ಶಿ ಚಿದಾನಂದಪ್ಪ ವಿವರಿಸುತ್ತಾರೆ.

‘ಪಾರ್ಕ್ ಇಷ್ಟು ಹಸಿರಾಗಿರುವುದಕ್ಕೆ ಸದಸ್ಯರ ಮುತುವರ್ಜಿಯೇ ಕಾರಣ. ಕೆಲವರು ಇಲ್ಲಿದ್ದ ಆಟಿಕೆಗಳನ್ನು ಮುರಿದು ಹಾಕಿದ ನಂತರದಲ್ಲಿ ಉದ್ಯಾನಕ್ಕೆ ಸಮಯ ನಿಗದಿ ಪಡಿಸಿದ್ದೇವೆ. ಉಳಿದ ವೇಳೆ ಗೇಟ್‌ಗೆ ಬೀಗ ಹಾಕುತ್ತೇವೆ’ ಎಂದು ಸಂಘದ ಸದಸ್ಯ ಮಹದೇವಪ್ಪ ವಿವರಿಸುತ್ತಾರೆ. ಒಂದು ಬಡಾವಣೆಯ ನಾಗರಿಕರು ಸಂಘಟನಾತ್ಮಕವಾಗಿ ಮುನ್ನಡೆದರೆ ಎಂಥ ಅಭಿವೃದ್ಧಿ ಕಾರ್ಯವನ್ನು ಮಾಡಬಹುದು ಎಂಬುದಕ್ಕೆ ಸರಸ್ವತಿಪುರ ಉದ್ಯಾನ ಒಂದು ಉತ್ತಮ ಉದಾಹರಣೆ.

ಜೀವವೈವಿಧ್ಯ, ಸುಸ್ಥಿರ ಉದ್ಯಾನ
ಕಡಿಮೆ ನೀರು ಆರೈಕೆಗೆ ಹೊಂದಿಕೊಳ್ಳುವ ಕಾಡುಗಿಡಗಳನ್ನೇ ಬೆಳೆಸಿದ್ದಾರೆ. ಹಣ್ಣಿನ ಗಿಡಗಳನ್ನು ಬೆಳೆಸಿದರೆ, ಉದ್ಯಾನಕ್ಕೆ ಬರುವ ಮಕ್ಕಳು ಮರ ಹತ್ತಿ ಕೀಳಲು ಹೋಗಿ ಬೀಳಬಹುದೆಂಬ ಭಯಕ್ಕೆ ಅವುಗಳನ್ನು ಹಾಕಿಲ್ಲ ಎಂಬುದು ಸದಸ್ಯರ ಅಭಿಪ್ರಾಯ.

* * 

ಮಳೆ ಬಂದಾಗ ರಾಜಕಾಲುವೆ ನೀರು ಭರ್ತಿಯಾಗಿ ಉದ್ಯಾನದ ಮೂಲೆಯಲ್ಲಿ ನಿಲ್ಲುತ್ತದೆ. ಅದನ್ನು ಸರಿಪಡಿಸಲು ನಗರಸಭೆಗೆ ಮನವಿ ಮಾಡಿದ್ದೇವೆ.
ಸರಸ್ವತಿ ಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.