ADVERTISEMENT

ಬೆಳೆಗಾರರ ಬಾಳಿಗೆ ಕಹಿಯಾದ ಮಾವು

ಬೂದಿರೋಗದಿಂದ ಇಳುವರಿ ಕುಂಠಿತ, ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 5:52 IST
Last Updated 19 ಮಾರ್ಚ್ 2014, 5:52 IST

ಚಿಕ್ಕಜಾಜೂರು: ಮಾವು ಬೆಳೆಯಲ್ಲಿ ಬಾರಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರ ನಿರೀಕ್ಷೆಗಳು ಹುಸಿಯಾಗಿದ್ದು, ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. 

ತಾಲ್ಲೂಕಿನ ಹಿರೇಎಮ್ಮಿಗನೂರು ಗ್ರಾಮದಲ್ಲಿ ಸುಮಾರು 1800 ಎಕರೆ ಪ್ರದೇಶದಲ್ಲಿ ಬಾದಾಮಿ (ಆಲ್ಫನ್ಸ್‌), ನೀಲಂ, ಕೇಸರ್‌, ತೋತಾಪುರಿ ತಳಿಗಳ ಮಾವಿನ ಗಿಡಗಳನ್ನು ಬೆಳೆಯಲಾಗಿದ್ದು, ಬಹುತೇಕ ಎಲ್ಲಾ ತೋಟಗಳಲ್ಲಿ ಬೂದಿ ರೋಗ ಕಾಣಿಸಿಕೊಂಡಿದ್ದು, ಮರಗಳು ಒಣಗುವ ಸ್ಥಿತಿಯನ್ನು ತಲುಪಿವೆ. ಕೆಲವು ಮರಗಳಲ್ಲಿ ಬಿಟ್ಟಿದ್ದ ಮಾವಿನ ಕಾಯಿಗಳು ಉದುರಿ ಹೋಗಿ ಬರಿ ಮರಗಳು ಒಣಗಿ ನಿಂತಿರುವ ದೃಶ್ಯ ಕಂಡು ಬಂದಿದೆ. ಇದರಿಂದಾಗಿ, ಅಂತಾಪುರ, ಚಿಕ್ಕಎಮ್ಮಿಗನೂರು, ನಂದಿಹಳ್ಳಿ, ಅಜ್ಜಿಕ್ಯಾತನಹಳ್ಳಿ, ಚಿಕ್ಕನಕಟ್ಟೆ, ಕಾಮನಹಳ್ಳಿ, ಕಡೂರು ಮೊದಲಾದ ಗ್ರಾಮಗಳ ಸಾವಿರಾರು ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.

ಕೈ ಬಿಟ್ಟ ಖೇಣಿದಾರರು: ರೈತರ ತೋಟಗಳನ್ನು ಖೇಣಿ ಹಿಡಿದಿದ್ದ ಖೇಣಿದಾರರು, ಮರಗಳಿಗೆ ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಔಷಧಿಯನ್ನು ಸಿಂಪಡಿಸಿದ್ದರು. ಆದರೆ, ರೋಗ ನಿಯಂತ್ರಣಕ್ಕೆ ಬಾರದೆ ಮರಗಳಲ್ಲಿನ ಶೇ 90ಕ್ಕೂ ಹೆಚ್ಚು ಕಾಯಿ ಉದುರಿ ಹೋಗಿದೆ. ಇದರಿಂದ ಖೇಣಿದಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಔಷದೋಪಚಾರಕ್ಕೆ ಸಾಕಷ್ಟು ಖರ್ಚು
ಮಾಡಿದ್ದ ಖೇಣಿದಾರರು ಖೇಣಿ ಜಮೀನಿನಿಂದ ದೂರ ಉಳಿಯುವಂತಾಗಿದೆ. ಮರದಲ್ಲಿರುವ ಕಾಯಿಗಳಿಂದ ರೈತರಿಗೆ ಮುಂಗಡವಾಗಿ ನೀಡಿರುವ ಮೊತ್ತದಷ್ಟು ಹಣವೂ ಬರುವುದಿಲ್ಲ. ಆದ್ದರಿಂದ, ಖೇಣಿ ಮುಂದುವರಿಸಲು ಕಷ್ಟವಾಗುವುದು ಎಂದು ಖೇಣಿದಾರರಾದ ಕೆರೆಬಿಳಚಿ ಇಕ್ಬಾಲ್‌, ಗೌಸ್‌ಪೀರ್‌, ಫಯಾಜ್‌, ಮಜೀಬ್‌, ಅಹಮ್ಮದ್‌ ಷರೀಫ್‌, ಬಸವಾಪಟ್ಟಣದ ಮಹಮದಿ ತಿಳಿಸಿದ್ದಾರೆ.

ಕಂಗಾಲಾದ ರೈತರು: ಗ್ರಾಮದ ಗೌಡ್ರ ತ್ಯಾಗರಾಜ್‌ ಅವರು ತಮ್ಮ 40 ಎಕರೆ ಮಾವಿನ ತೋಟವನ್ನು ₨ 28 ಲಕ್ಷಕ್ಕೆ ಹರಿಹರದ ಖಲೀಲ್‌ ಎಂಬುವರಿಗೆ ಖೇಣಿ ನೀಡಿ, ಮುಂಗಡವಾಗಿ ₨ 2 ಲಕ್ಷ ಪಡೆದಿದ್ದರು. ಖಲೀಲ್‌ ₨ 1 ಲಕ್ಷ ವೆಚ್ಚ ಮಾಡಿ ಮರಗಳಿಗೆ ಔಷಧಿ ಸಿಂಪಡಿಸಿದ್ದರು. ಆದರೆ, ರೋಗ ಬಾಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೇರೆಯವರಿಗೆ ಖೇಣಿ ಕೊಡಿ ಎಂದು ಹೇಳಿ ಹೋಗಿದ್ದಾರೆ ಎನ್ನುತ್ತಾರೆ ರೈತ ತ್ಯಾಗರಾಜ್‌. ಅದೇ ರೀತಿ ಜೆ.ಮಲ್ಲಿಕಾರ್ಜುನ್‌ ತಮ್ಮ ಮೂರು ಎಕರೆ ತೋಟವನ್ನು ₨ 3 ಲಕ್ಷಕ್ಕೆ ಖೇಣಿ ನೀಡಿ, ಮುಂಗಡವಾಗಿ ₨ 50,000 ಪಡೆದಿದ್ದು, ಮರಗಳಲ್ಲಿ ಕಾಯಿ ಇಲ್ಲದಿರುವುದನ್ನು ಕಂಡು ಖೇಣಿದಾರರು ಬರುವ ನಿರೀಕ್ಷೆ ಇಲ್ಲ ಎಂದು ಹೇಳುತ್ತಾರೆ.

ಮಾವಿನ ಖೇಣಿಯನ್ನು ನಂಬಿಕೊಂಡು ಮನೆ ಕಟ್ಟಲು, ಮದುವೆಗೆ ಸಾಲ ಮಾಡಿದ್ದೇವೆ. ಆದರೆ, ರೋಗ ಬಾಧೆಯಿಂದ ಖೇಣಿದಾರರು ಹಿಂದೆ ಸರಿದಿರುವುದರಿಂದ ಮುಂದೇನು ಎಂಬ ಚಿಂತೆ ಕಾಡಲಾರಂಭಿಸಿದೆ ಎಂದು ರೈತರಾದ ಅಂಗಡಿ ಚನ್ನಬಸಪ್ಪ, ಇ.ಪರಮೇಶ್ವರಪ್ಪ, ಮಾಳೆಗೆರ ನಾಗರಾಜ್‌, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜಪ್ಪ, ಎಂ.ವಿಜಯಕುಮಾರ್‌, ಬಸಯ್ಯ  ತಮ್ಮ ಅಳಲನ್ನು ತೋಡಿಕೊಂಡರು.

ಮನವಿ: ಸರ್ಕಾರ ಹಾಗೂ ತೋಟಗಾರಿಕಾ ಇಲಾಖೆ ಹೋಬಳಿಯ ಮಾವು ಬೆಳೆಗಾರರ ರಕ್ಷಣೆಗೆ ಧಾವಿಸಿ, ರೈತರಿಗಾಗಿರುವ ನಷ್ಟ ಪರಿಹಾರಕ್ಕೆ ನೆರವು ನೀಡಿ, ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಂತೆ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ರೈತರಾದ ಮಹದೇವಪ್ಪ, ಚಿಕ್ಕಎಮ್ಮಿಗನೂರಿನ ಈ. ಪಾಲಕ್ಷಪ್ಪ, ಲೋಕೇಶ್‌, ಶೇಖರಪ್ಪ, ರುದ್ರಯ್ಯ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.