ADVERTISEMENT

ಮನೆ ಕಟ್ಟಿಕೊಂಡವರಿಗೂ ಹಣ ನೀಡಿಲ್ಲ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜಿ.ಪಂ. ಅಧ್ಯಕ್ಷರ ಆರೋಪ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 6:25 IST
Last Updated 14 ಡಿಸೆಂಬರ್ 2013, 6:25 IST

ಚಿತ್ರದುರ್ಗ: ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳು ಮನೆ ನಿರ್ಮಾಣ ಮಾಡಿದ್ದರೂ ಇದುವರೆಗೂ ಯಾವುದೇ ಕಂತಿನ ಹಣ ಪಾವತಿಯಾಗಿರುವುದಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಗಮನಿಸಬೇಕು ಎಂದು  ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನವೆಂಬರ್ ಅಂತ್ಯದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಆಯ್ಕೆಯಂತೆ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಬಿಲ್ ಪಾವತಿ ಮಾಡದಿರುವುದರಿಂದ ಪೂರ್ಣವಾಗಿ ಮನೆ ನಿರ್ಮಾಣ ಮಾಡಿಕೊಂಡಿಲ್ಲ, ಮಳೆ ಬಂದಲ್ಲಿ ಏನು ಮಾಡಬೇಕು ಎಂದು ಜನ ಕೇಳುತ್ತಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಬಿಲ್ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಪಂಚಾಯ್ತಿಯಲ್ಲಿ ಪ್ರಸಕ್ತ ಸಾಲಿನ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಗೆ ಗ್ರಾಮಸಭೆ ನಡೆಸಲಾಗಿದೆ. ಆದರೆ ಅಧ್ಯಕ್ಷರು ಪಟ್ಟಿಗೆ ಸಹಿ ಹಾಕುತ್ತಿಲ್ಲ, ಅದರಿಂದ ಆಯ್ಕೆ ಪಟ್ಟಿ ಕಳುಹಿಸಲು ವಿಳಂಬವಾಗಿದೆ. ಹಿರಿಯೂರು ತಾಲ್ಲೂಕಿನ ವಿ.ವಿ.ಪುರ ಹಾಗೂ ರಂಗೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸಭೆ ನಡೆಸಲು ಸದಸ್ಯರೇ ಬಿಡುತ್ತಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.

ಪಟ್ಟಿಗೆ ಅಧ್ಯಕ್ಷರು ಸಹಿ ಹಾಕದಿದ್ದಲ್ಲಿ ನೋಟಿಸ್ ನೀಡಿ ಉತ್ತರ ಪಡೆದು ಕಾರ್ಯನಿರ್ವಾಹಕ ಅಧಿಕಾರಿಗಳೇ ಪಟ್ಟಿಗೆ ಅನುಮೋದನೆ ನೀಡಿ ಕಳುಹಿಸಬೇಕು. ರಂಗೇನಹಳ್ಳಿ, ವಿ.ವಿ.ಪುರ ಪಂಚಾಯ್ತಿಯಲ್ಲಿ ಫಲಾಭವಿಗಳ ಆಯ್ಕೆಗೆ ಕಾರ್ಯನಿರ್ವಾಹಕ ಅಧಿಕಾರಿಗಳೇ ಗ್ರಾಮಸಭೆ ನಡೆಸಿ ಯಾರಿಗೆ ಮನೆ ಇಲ್ಲ, ಅಂಥ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿಕೊಡಲು ಅಧ್ಯಕ್ಷರು ಸೂಚಿಸಿದರು.

ಹೊಳಲ್ಕೆರೆ ತಾಲ್ಲೂಕಿನ ತೇಕಲವಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರಿಂದ ಶಾಲೆಯ ಬಿಸಿಯೂಟಕ್ಕೂ ನೀರಿಲ್ಲದಂತಾಗಿದೆ. ತಕ್ಷಣವೇ ಕುಡಿಯುವ ನೀರನ್ನು ಪೂರೈಸಬೇಕು ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಅಧ್ಯಕ್ಷರು ತಿಳಿಸಿದರು. ಈ ಗ್ರಾಮದಲ್ಲಿ ಕಳೆದೆರಡು ವರ್ಷಗಳಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ ನೀರನ್ನು ಕೋಟ್ಟಿಲ್ಲ, ಈ ಬಗ್ಗೆ ಸಾಕಷ್ಟು ಬಾರಿ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಅವರುತರಾಟೆಗೆ ತೆಗೆದುಕೊಂಡರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಆನ್ ಲೈನ್ ಮೂಲಕ ಪ್ರತಿ ಕುಟುಂಬಕ್ಕೆ ೧೦೦ ದಿನಗಳಿಗೆ ಉದ್ಯೋಗ ನೀಡಲು ಹೊಸ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯ್ತಿಯಲ್ಲಿಯೇ ಆನ್ ಲೈನ್ ಮೂಲಕ ಜಾಬ್‌ಕಾರ್ಡ್ ನೀಡಲಾಗುತ್ತದೆ.  ಪ್ರಸಕ್ತ ಸಾಲಿನಲ್ಲಿ ₨ ೧೫೪.೯೭ ಕೋಟಿ ಗಳಿಗೆ ಖಾತ್ರ ಯೋಜನೆಯಡಿ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು ಈವರೆಗೆ ₨ ೧೪೮.೯೧ ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₨ ೨೦.೧೩ ಕೋಟಿಯನ್ನು ಈ ಸಾಲಿನ ಕೆಲಸಗಳಿಗೆ ಖರ್ಚು ಮಾಡಲಾಗಿದೆ.

₨ ೧೦೮.೫೩ ಕೋಟಿಯನ್ನು ೨೦೧೨-–೧೩ ನೇ ಸಾಲಿನ ಕಾಮಗಾರಿಗಳಿಗೆ ಪಾವತಿ ಮಾಡಲಾಗಿದೆ. ಒಟ್ಟು  ೧೨.೫೪,೩೯೪ ಮಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ಉಪ ಕಾರ್ಯದರ್ಶಿ ಸಭೆಗೆ ಮಾಹಿತಿ ನೀಡಿದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಎಸ್.ಪ್ರಕಾಶ್ ‘ನೀವು ಬರೀ ಹಣದ ಮೇಲೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡುತ್ತಿದ್ದೀರಿ. ಅರ್ಹರಿಗೆ ಮನೆ ದೊರೆಯುತ್ತಿಲ್ಲ. ಹೆಚ್ಚು ಮಾತನಾಡುವುದನ್ನು ಕಲಿತ್ತಿದ್ದೀರಿ. ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ’ ಎಂದು ಇಒ ಪ್ರಭುಸ್ವಾಮಿಗೆ ತರಾಟೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ೨೬ ಅಂಗನವಾಡಿ ಕೇಂದ್ರಗಳನ್ನು ನಿವೇಶನದ ಸಮಸ್ಯೆಯಿಂದ ೪ ವರ್ಷದಿಂದ ನಿರ್ಮಾಣ ಮಾಡಲಾಗಿಲ್ಲ. ಅಧಿಕಾರಿಗಳು ಸಭೆಯನ್ನು ನಡೆಸಿ ಎಲ್ಲಿ ತೊಂದರೆ ಇದೆ ಅದನ್ನು ಇತ್ಯರ್ಥ ಮಾಡಿಕೊಂಡು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಅಧ್ಯಕ್ಷರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅನಿಲ್‌ಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ನರಸಮ್ಮ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎಂ.ನಾರಾಯಣಸ್ವಾಮಿ, ಮುಖ್ಯ ಯೋಜನಾಧಿಕಾರಿ ಓಂಕಾರಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.