ADVERTISEMENT

ಮೊಳಕಾಲ್ಮುರು: ಹೊಸ ತಿರುವು ಪಡೆದ ರಾಜಕೀಯ

ಶ್ರೀರಾಮುಲುಗೆ ಬಿಜೆಪಿ ಟಿಕೆಟ್‌: ಕೆಲ ಮುಖಂಡರಿಂದ ಅಪಸ್ವರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 7:05 IST
Last Updated 10 ಏಪ್ರಿಲ್ 2018, 7:05 IST

ಮೊಳಕಾಲ್ಮುರು: ವಿಚಿತ್ರ ಬೆಳವಣಿಗೆಯಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಹೈಕಮಾಂಡ್‌ ಏಕಾಏಕಿ ಬಳ್ಳಾರಿ ಸಂಸದ ಬಿ. ಶ್ರೀರಾಮುಲು ಅವರಿಗೆ ನೀಡುವುದಾಗಿ ಪ್ರಕಟಿಸಿರುವುದರಿಂದ ಸೋಮವಾರ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದವು.

ಬಿ.ಎಸ್‌. ಯಡಿಯೂರಪ್ಪ ಅವರು ಪರಿವರ್ತನಾ ಯಾತ್ರೆ ವೇಳೆ ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ಅವರಿಗೆ ಪಕ್ಷದ ಟಿಕೆಟ್‌ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ತಿಪ್ಪೇಸ್ವಾಮಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಕಳೆದ ವಾರ ಸಂಘ ಪರಿವಾರದವರು ತಿಪ್ಪೇಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಇದಾದ ನಂತರ ಕೆಲ ಮುಖಂಡರು ತಿಪ್ಪೇಸ್ವಾಮಿ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್‌ ನೀಡುವಂತೆ ಕೋರ್‌ ಕಮಿಟಿ ಸಭೆಯಲ್ಲಿ ಮನವಿ ಮಾಡಿದ್ದರು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕೋರ್‌ ಕಮಿಟಿ ಸಭೆಯ ನಂತರವೂ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ಸಿಗುವ ಭರವಸೆ ಇತ್ತು. ಶ್ರೀರಾಮುಲು ಬಳಿಗೆ ಇಲ್ಲಿನ ಬಿಜೆಪಿ ನಿಯೋಗ ಹೋಗಿದ್ದಾಗ, ತಾವು ಯಾವುದೇ ಕಾರಣಕ್ಕೂ ಮೊಳಕಾಲ್ಮುರಿನಿಂದ ಸ್ಪರ್ಧಿಸುವುದಿಲ್ಲ. ತಿಪ್ಪೇಸ್ವಾಮಿಗೆ ಟಿಕೆಟ್‌ ಖಚಿತ ಎಂದು ಭರವಸೆ ನೀಡಿದ್ದರು. ಆದರೆ, ಈಗ ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಲು ಮುಂದಾಗಿರುವುದು ಅಚ್ಚರಿ ಮೂಡಿಸಿದೆ ಎಂದು
ಮಂಡಲ ಕಾರ್ಯದರ್ಶಿ ಮೊರಾರ್ಜಿ ಹೇಳಿದರು.

ADVERTISEMENT

ತಿಪ್ಪೇಸ್ವಾಮಿ ಅವರು ಬೆಂಬಲಿಗರ ಜತೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ. ಟಿಕೆಟ್‌ ಘೋಷಣೆ ನಂತರವೂ ಶ್ರೀರಾಮುಲು ಮೊಳಕಾಲ್ಮುರಿನಿಂದ ಸ್ಪರ್ಧಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ತಮಗೇ ಟಿಕೆಟ್‌ ನೀಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

‘ಶ್ರೀರಾಮುಲು ನೀಡಿರುವ ಭರವಸೆ ಮೇಲೆ ನಂಬಿಕೆಯಿದೆ. ಟಿಕೆಟ್‌ ಬಿಟ್ಟುಕೊಡುವ ನಿರೀಕ್ಷೆ ಹೊಂದಿದ್ದೇನೆ. ಮುಂದಿನ ನಡೆಯನ್ನು ಕಾರ್ಯಕರ್ತರು ಹಾಗೂ ಮುಖಂಡರ ಜತೆ ಚರ್ಚಿಸಿ ಕೈಗೊಳ್ಳಲಾಗುವುದು’ ಎಂದು ತಿಪ್ಪೇಸ್ವಾಮಿ ತಿಳಿಸಿದರು.

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ ಮಧ್ಯೆ ಪೈಪೋಟಿಯಿದೆ. ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬಂದರೂ ಕಾಂಗ್ರೆಸ್‌ ಟಿಕೆಟ್ ಅಂತಿಮವಾಗಿಲ್ಲ. ಜೆಡಿಎಸ್‌ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಟೇಲ್‌ ಜಿ.ಎಂ. ತಿಪ್ಪೇಸ್ವಾಮಿಗೆ ಟಿಕೆಟ್ ಘೋಷಣೆಯಾಗಿದೆ.

ಕಾಂಗ್ರೆಸ್‌ನಲ್ಲಿ ಗೊಂದಲ ತಾರಕಕ್ಕೇರಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಕಾಂಗ್ರೆಸ್‌ನಲ್ಲಿ
ಶಾಸಕ ಎನ್‌.ವೈ. ಗೋಪಾಲಕೃಷ್ಣ, ಚಿತ್ರನಟ ಶಶಿಕುಮಾರ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಡಾ. ಯೋಗೇಶ್‌ಬಾಬು, ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ರೇಸ್‌ನಲ್ಲಿದ್ದಾರೆ.

‘ಸ್ವಕ್ಷೇತ್ರದವರು’ ಹಾಗೂ ‘ಹೊರಗಿನವರು’ ಎಂಬ ಕೂಗು ಕೇಳಿಬರುತ್ತಿದೆ. ಸ್ವಕ್ಷೇತ್ರದವರು ಎಂಬ ಪಟ್ಟಿಯಲ್ಲಿ ಎನ್‌.ವೈ. ಗೋಪಾಲಕೃಷ್ಣ ಹಾಗೂ ಯೋಗೇಶ್‌ಬಾಬು ಇದ್ದರೆ, ಹೊರಗಿನವರು ಎಂಬ ಪಟ್ಟಿಯಲ್ಲಿ ಶಶಿಕುಮಾರ್ ಮತ್ತು ಉಗ್ರಪ್ಪ ಅವರ ಹೆಸರಿದೆ.

ಸ್ವಕ್ಷೇತ್ರದವರಿಗೆ ಟಿಕೆಟ್‌ ನೀಡದಿದ್ದರೆ ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ.

‘ಗೋಪಾಲಕೃಷ್ಣ ಅವರಿಗೆ ಬಳ್ಳಾರಿ ಗ್ರಾಮೀಣ ಟಿಕೆಟ್‌ ನೀಡುವುದಾಗಿ ಹೈಕಮಾಂಡ್‌ ಹೇಳುತ್ತಿದೆ. ಆದರೆ, ಅವರು ಸ್ವಕ್ಷೇತ್ರವಾದ ಮೊಳಕಾಲ್ಮುರಿನಿಂದಲೇ ಸ್ಪರ್ಧೆ ಮಾಡಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಯಾವುದೇ ಕಾರಣಕ್ಕೂ ಬಳ್ಳಾರಿಯಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಹೈಕಮಾಂಡ್‌ಗೆ ಹೇಳಿದ್ದಾರೆ. ಇದು ಟಿಕೆಟ್‌ ಅಂತಿಮಕ್ಕೆ ಅಡ್ಡಿಯಾಗಿದೆ. ಒಂದೊಮ್ಮೆ ಇಲ್ಲಿ ಟಿಕೆಟ್‌ ನೀಡದಿದ್ದಲ್ಲಿ ಅವರು ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಕ್ಕೆ ನಾವೂ ಬದ್ಧರಾಗಿರುತ್ತೇವೆ’ ಎಂದು ಮುಖಂಡರಾದ ಅಶೋಕ್‌, ಕೆ.ಸಿ. ಮಂಜುನಾಥ್‌, ಭರತ್‌, ಅಶ್ವಥ್ ಹೇಳಿದರು.

ಉಗ್ರಪ್ಪ ಅಂತಿಮ..?

‘ಶ್ರೀರಾಮುಲು ಸ್ಪರ್ಧಿಸಿದರೆ ಮೊಳಕಾಲ್ಮುನಿಂದ ಕಾಂಗ್ರೆಸ್‌ ಉಗ್ರಪ್ಪ ಅವರನ್ನು ಕಣಕ್ಕಿಳಿಸಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸುಕರಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ. ಸ್ವತಃ ಮುಖ್ಯಮಂತ್ರಿ ಅವರೇ ಟಿಕೆಟ್‌ ಭರವಸೆ ನೀಡಿದ್ದಾರೆ’ ಎಂದು ಚಿತ್ರನಟ ಶಶಿಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಉಗ್ರಪ್ಪ ಅವರಿಗೆ ಟಿಕೆಟ್‌ ನೀಡಿದರೆ, ಸ್ಥಳೀಯರಾದ ಎನ್‌.ವೈ.ಜಿ ಹಾಗೂ ಯೋಗೇಶ್‌ ಬಾಬು ನಡೆ ನಿಗೂಢವಾಗಿದೆ. ಉಗ್ರಪ್ಪ ಸ್ಪರ್ಧಿಸಿದರೆ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿಸುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ.

**

ಹಿರೇಹಳ್ಳಿಯಲ್ಲಿ ಮನೆದೇವರಾದ ದಡ್ಡಿಸೂರನಾಯಕ ದೇವರಿಗೆ ಪೂಜೆ ಸಲ್ಲಿಸಿ ಶಾಸಕ ತಿಪ್ಪೇಸ್ವಾಮಿ ಬೆಂಗಳೂರಿಗೆ ತೆರಳಿದರು. ಶ್ರೀರಾಮುಲು ಕಾದು ನೋಡುವಂತೆ ತಿಳಿಸಿದ್ದಾರೆ – ಎಂ.ವೈ.ಟಿ. ಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ.

**

– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.