ADVERTISEMENT

ಲಂಬಾಣಿ ಹಟ್ಟಿಗಳಲ್ಲಿ ವಿಶಿಷ್ಟ ದೀಪಾವಳಿ !

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:22 IST
Last Updated 21 ಅಕ್ಟೋಬರ್ 2017, 6:22 IST

ಹೊಳಲ್ಕೆರೆ: ತಾಲ್ಲೂಕಿನ ಬೊಮ್ಮಕಟ್ಟೆಯಲ್ಲಿ ಶುಕ್ರವಾರ ವಿಶಿಷ್ಟವಾಗಿ ದೀಪಾವಳಿ ಆಚರಿಸಲಾಯಿತು. ಲಂಬಾಣಿ ಜನಾಂಗದವರಿಗೆ ದೀಪಾವಳಿ ವಿಶಿಷ್ಟ ಹಬ್ಬವಾಗಿದ್ದು, ತಾಂಡಾಗಳಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ತಂಕಟೆ ಹೂ ತರುವ ಆಚರಣೆ ವಿಶಿಷ್ಟವಾಗಿದ್ದು, ರಂಗು ರಂಗಿನ ಹೊಸಬಟ್ಟೆ ತೊಟ್ಟು, ಅಲಂಕಾರ ಮಾಡಿಕೊಂಡ ಯುವತಿಯರು, ಚಿಕ್ಕ ಹುಡುಗಿಯರು ಕೈಯಲ್ಲಿ ಒಂದೊಂದು ಬಿದಿರಿನ ಬುಟ್ಟಿ ಹಿಡಿದು ಕಾಡಿಗೆ ತೆರಳಿದರು.

ಬುಟ್ಟಿ ತುಂಬ ತುಂಬಿಕೊಂಡ ಸಿಹಿತಿಂಡಿ ತಿನ್ನುತ್ತಾ ದಾರಿಯುದ್ದಕ್ಕೂ ಲಂಬಾಣಿ ಹಾಡುಗಳನ್ನು ಹೇಳುತ್ತಾ, ನೃತ್ಯ ಮಾಡುತ್ತಾ ಕಾಡಿನ ಕಡೆ ಹೆಜ್ಜೆ ಹಾಕಿದರು. ಮದುವೆಯಾಗದ ಯುವತಿಯರು ತಂಕಟೆ ಹೂ ತರಲು ಹೋಗುತ್ತಾರೆ. ಗ್ರಾಮದ ಯುವಕರೂ ಇವರಿಗೆ ಸಾಥ್ ನೀಡುತ್ತಾರೆ. ಬುಟ್ಟಿ ತುಂಬ ಹೂ ಕಿತ್ತುಕೊಂಡು ಸಂಜೆ ವೇಳೆಗೆ ಮನೆಗೆ ಹಿಂದಿರುಗುತ್ತಾರೆ.

ತಂಕಟೆ ಹೂ ಆಚರಣೆ  ಹಿರಿಯರ ಕಾಲದಿಂದಲೂ ನಡೆದು ಬಂದಿದೆ. ದೀಪಾವಳಿ ಹಬ್ಬಕ್ಕೆ ತಂಕಟೆ ಹೂಗಳೇ ಬೇಕಾಗಿದ್ದು, ಪ್ರತೀ ಮನೆಯಿಂದಲೂ ಹುಡುಗಿಯರು ಹೂ ತರಲು ಹೋಗುತ್ತಾರೆ. ಹೂ ಕೀಳುವಾಗ ಎಲ್ಲರೂ ತಮ್ಮ ಕಷ್ಟ–ಸುಖಗಳನ್ನು ಹಂಚಿಕೊಳ್ಳುತ್ತಾರೆ. ಮದುವೆ ನಿಶ್ಚಯವಾದವರು, ವರಾನ್ವೇಷಣೆಯಲ್ಲಿ ತೊಡಗಿದವರು ಗೆಳತಿಯರನ್ನು ತಬ್ಬಿಕೊಂಡು ಅಳುತ್ತಾರೆ. ‘ಈ ವರ್ಷ ಮದುವೆ ಆಗಿ ಗಂಡನ ಮನೆಗೆ ಹೋಗುತ್ತೇನೆ. ಮುಂದಿನ ವರ್ಷ ನಾವು ಮತ್ತೆ ಸೇರುತ್ತೇವೆಯೋ ಇಲ್ಲವೋ. ನಮ್ಮ ಗೆಳೆತನ ಇಲ್ಲಿಗೆ ಮುಗಿಯಿತೇನೋ’ ಎಂದು ದು:ಖಿಸುತ್ತಾರೆ.

ADVERTISEMENT

‘ನಮಗೆ ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಡಗರ. ವಿದ್ಯಾಭ್ಯಾಸ, ಕೆಲಸಕ್ಕಾಗಿ ಹೊರಗೆ ಇದ್ದವರು ಹಬ್ಬಕ್ಕೆ ತಪ್ಪದೇ ಬರುತ್ತಾರೆ. ತಂಕಟೆ ಹೂ ತರುವ ಆಚರಣೆಯಲ್ಲಿ ಗ್ರಾಮದ ಎಲ್ಲಾ ಯುವತಿಯರು ಭಾಗವಹಿಸುತ್ತಾರೆ. ಮೊದಲೆಲ್ಲಾ ಲಂಬಾಣಿ ವಸ್ತ್ರಗಳನ್ನು ಧರಿಸಿ ಸಂಭ್ರಮಿಸುತ್ತಿದ್ದೆವು. ಜಗಳವಾಡಿ ದೂರವಾದ ಗೆಳತಿಯರೂ ಹೂ ಕೀಳುವಾಗ ಒಂದಾಗುತ್ತಾರೆ. ಬೆಟ್ಟದಿಂದ ಬಂದ ಯುವತಿಯರು ಮನೆಯ ಒಳಗೆ, ಹೊರಗೆ ಹೂಗಳನ್ನು ಹರಡುತ್ತಾರೆ’ ಎನ್ನುತ್ತಾರೆ ಬೊಮ್ಮನಕಟ್ಟೆ ಗ್ರಾಮದ ಯುವತಿಯರಾದ ಜಿ.ಕೆ.ರಶ್ಮಿ, ಜಿ.ಟಿ.ಉಷಾ, ಮಧುಮಾಲಾ, ರಮ್ಯಾ, ಹೊನಲು.

ಹಿರಿಯರ ಪೂಜೆ ಆಚರಣೆ: ‘ದೀಪಾವಳಿಯಲ್ಲಿ ಹಿರಿಯರ ಪೂಜೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅಗಲಿದ ಹಿರಿಯರನ್ನು ಸ್ಮರಿಸಿ, ಆಶೀರ್ವಾದ ಪಡೆಯಲಾಗುತ್ತದೆ. ಮನೆಯಲ್ಲಿ ಕೆಂಡ ತಯಾರಿಸಿ ಹಿರಿಯರನ್ನು ನೆನೆದು ಕೆಂಡಕ್ಕೆ ಲೋಬಾನ, ತುಪ್ಪ, ಹಿರಿಯರಿಗೆ ಇಷ್ಟವಾದ ತಿಂಡಿ, ಅಡುಗೆ ಪದಾರ್ಥಗಳನ್ನು ಹಾಕಲಾಗುತ್ತದೆ.

ಇದಕ್ಕೆ ‘ದಬುಕಾರ್‌’ ಎನ್ನಲಾಗುತ್ತದೆ. ಮುತ್ತಾತನಿಂದ ಹಿಡಿದು ಸಾವನ್ನಪ್ಪಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಎಲ್ಲರನ್ನೂ ನೆನೆಯಲಾಗುತ್ತದೆ. ಕೊನೆಯಲ್ಲಿ ಗಾಳಿ, ಬೆಳಕು, ಸೂರ್ಯ, ಚಂದ್ರ, ಪ್ರಕೃತಿಗಳನ್ನು ನೆನೆದು ಹಿರಿಯರಿಗೆ ಪೂಜೆ ಸಲ್ಲಿಸಲಾಗುತ್ತದೆ. ಯುವತಿಯರು ಗ್ರಾಮದ ಪ್ರತಿ ಮನೆಗೂ ತೆರಳಿ ದೀಪ ಬೆಳಗಿ ‘ಬಾಳು ಬೆಳಕಾಗಲಿ ’ಎಂದು ಹರಸುತ್ತಾರೆ. ಇದಕ್ಕೆ ಪ್ರತಿಯಾಗಿ ಎಲ್ಲರೂ ಯುವತಿಯರಿಗೆ ದಕ್ಷಿಣೆ ರೂಪದಲ್ಲಿ ಹಣ ನೀಡಲಾಗುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡರು.

ತಾಲ್ಲೂಕಿನ ತಣಿಗೆಹಳ್ಳಿ, ಕಾಳಘಟ್ಟ, ಐನಹಳ್ಳಿ, ಬಿದರಕೆರೆ, ಕಾಲ್ಕೆರೆ, ಕುಡಿನೀರಕಟ್ಟೆ, ತುಪ್ಪದಹಳ್ಳಿ, ಆರ್‌.ಡಿಕಾವಲು, ನುಲೇನೂರು, ಅಂತಾಪುರ, ನಂದಿಹಳ್ಳಿ ಲಂಬಾಣಿ ತಾಂಡಾಗಳಲ್ಲಿಯೂ ವಿಶೇಷವಾಗಿ ದೀಪಾವಳಿ ಆಚರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.