ADVERTISEMENT

ಲೋಕಸಭಾ ಚುನಾವಣೆ ಮತದಾನ ಹೆಚ್ಚಳಕ್ಕೆ ಕ್ರಮ

ಯುವ ಮತದಾರರಲ್ಲಿ ಜಾಗೃತಿ ಅಗತ್ಯ: ಸಿಇಒ ಮಂಜುಶ್ರೀ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 6:14 IST
Last Updated 21 ಮಾರ್ಚ್ 2014, 6:14 IST
ಚಿತ್ರದುರ್ಗ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಮಂಜುಶ್ರೀ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಮಂಜುಶ್ರೀ ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಮಾಹಿತಿ ನೀಡಿದರು.   

ಚಿತ್ರದುರ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಮಂಜುಶ್ರೀ ಹೇಳಿದರು.

ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಅವರು ಲೋಕಸಭಾ ಚುನಾವಣೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.
ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿದೆ. ಈ ಹಿನ್ನೆಲೆಯಲ್ಲಿ ಮತದಾನ ಹೆಚ್ಚಳಕ್ಕೆ ಬೀದಿ ನಾಟಕ, ಜಾಗೃತಿ ನಡಿಗೆ, ವಿದ್ಯಾರ್ಥಿಗಳಿಂದ ಜಾಥಾ, ಪೋಸ್ಟರ್ ಬಳಕೆ ಮುಂತಾದವುಗಳ ಮೂಲಕ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಸ್ಪರ್ಧಿಸಿರುವ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ ಎಂದು ಸಹ ಮತಯಂತ್ರದಲ್ಲಿ ನಮೂದಿಸಲು ಈ ಬಾರಿ ಅವಕಾಶ ಮಾಡಲಾಗಿದೆ. ಈ ಬಗ್ಗೆಯೂ ಪ್ರಚಾರ ಮಾಡಲಾಗುವುದು. ಒಟ್ಟಿನಲ್ಲಿ ಎಲ್ಲರೂ ಮತಕೇಂದ್ರಕ್ಕೆ ಬರಬೇಕು ಎಂಬುದು ಆಯೋಗದ ಉದ್ದೇಶವಾಗಿದೆ ಎಂದು ಹೇಳಿದರು.

ಈ ಬಾರಿ ಒಟ್ಟು ಮತದಾರರ ಪೈಕಿ 18–19 ವಯೋಮಾನದ 29,864 ಯುವ ಮತದಾರರು ಇದ್ದಾರೆ. ಇವರು ಕಡ್ಡಾಯ ಮತ ಹಾಕುವಂತೆ ಪ್ರೇರಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಸೂಚಿಸಿರುವ ಕಾರಣ ಶಾಲಾ– ಕಾಲೇಜುಗಳಲ್ಲಿ ಭಾಷಣ, ಪ್ರಬಂಧ ಸ್ಪರ್ಧೆ ಕಾರ್ಯಕ್ರಮ  ಹಮ್ಮಿಕೊಳ್ಳಲಾ ಗುವುದು. ಯಾವುದೇ ಒತ್ತಡದಿಂದ ಮತ ಹಾಕಿಸಲು ಆಗುವುದಿಲ್ಲ. ಸ್ವಯಂ ಪ್ರೇರಣೆಯಿಂದ ಇಷ್ಟ ಬಂದವರಿಗೆ ಮತ ಹಾಕುವ ಹಕ್ಕು ಮತದಾರ ಹೊಂದಿದ್ದಾನೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರ ಅಧಿಕಾರಿಗಳ ಕಾರ್ಯ ಮತ್ತು ಕರ್ತವ್ಯವಾಗಿದೆ ಎಂದು ಸಿಇಒ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಯಲ್ಲಿ 1892 ಕೇಂದ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಚಿತ್ರದುರ್ಗ, ಹಿರಿಯೂರು ತಾಲ್ಲೂಕಿನ ಮತಗಟ್ಟೆ ಗಳು ಪ್ರಥಮ ಸ್ಥಾನದಲ್ಲಿವೆ. ಇಂತಹ ಮತಗಟ್ಟೆಗಳಲ್ಲಿ ಈ ಬಾರಿ ಕಡಿಮೆ ಮತದಾನ ಮರುಕಳಿಸದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾ ಗುವುದು. 20–29ನೇ ವಯೋಮಾನ ದ 2,70,735 ಮತ್ತು 30–39 ವಯೋಮಾನದ 3,24,125 ಮತದಾರರು ಇದ್ದಾರೆ ಎಂದು ಸಿಇಒ ಮಾಹಿತಿ ನೀಡಿದರು.

ಡಿಡಿಪಿಐ ಮಂಜುನಾಥ್‌, ಜಿಲ್ಲಾ ಪಂಚಾಯ್ತಿ ಉಪ ವ್ಯವಸ್ಥಾಪಕ ರುದ್ರಪ್ಪ ಉಪಸ್ಥಿತರಿದ್ದರು.

ಗುಳೆ ಹೋಗಿರುವವರ ಮಾಹಿತಿ ಇಲ್ಲ...
ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂಬುದು ಆಯೋಗದ ಇಚ್ಛೆಯಾಗಿದೆ ಎಂದು ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದಾಗ, ಬರ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಜನರು ಗುಳೆ ಹೋಗಿದ್ದಾರೆ. ಎಷ್ಟು ಮಂದಿ ಗುಳೆ ಹೋಗಿರಬಹುದು ಎಂಬ ಬಗ್ಗೆ ಮಾಹಿತಿ ಪಡೆಯಲಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಇಒ ಇಲ್ಲ ಎಂದರು. ಇದು ಜಿಲ್ಲಾಪಂಚಾಯ್ತಿಗೆ ಸಂಬಂಧಪಟ್ಟ ಕೆಲಸವಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.