ADVERTISEMENT

ವ್ಯಕ್ತಿ ಸಾವು: ಸಾರ್ವಜನಿಕರಿಂದ ಹೆದ್ದಾರಿತಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 6:20 IST
Last Updated 10 ಜುಲೈ 2012, 6:20 IST

ಚಿತ್ರದುರ್ಗ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಅಂಬುಲೆನ್ಸ್‌ನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಮರ್ಪಕ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ಪೋಷಕರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆತಡೆ ಮಾಡಿದ ಘಟನೆ ಸೋಮವಾರ ನಡೆದಿದೆ.

ಘಟನೆಯ ವಿವರ: ನಗರದ ಜೆಎಂಐಟಿ ವೃತ್ತದಲ್ಲಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸೋಮವಾರ ಮಧ್ಯಾಹ್ನ ಮೊಟ್ಟೆ ಸಾಗಿಸುತ್ತಿದ್ದ ಅಪೆ ಆಟೋ ಮತ್ತು ಮೊಪೆಡ್ ನಡುವೆ ಡಿಕ್ಕಿ ಸಂಭವಿಸಿತು. ಅಪೆ ಆಟೋ ಮೊಪೆಡ್ ಮೇಲೆ ಬಿದ್ದ ಪರಿಣಾಮ ಮೊಪೆಡ್ ಸವಾರ ಚಿತ್ರದುರ್ಗದ ಚನ್ನಬಸಪ್ಪ (40) ತೀವ್ರವಾಗಿ ಗಾಯಗೊಂಡರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಿರಾಣಿ ಅಂಗಡಿ ಇಟ್ಟುಕೊಂಡಿರುವ ಚನ್ನಬಸಪ್ಪ ಮೂಲತಃ ಜಗಳೂರ ತಾಲ್ಲೂಕಿನ ಸೂರೆಡ್ಡಿಹಳ್ಳಿಯವರು.  ತೀವ್ರ ಅಸ್ವಸ್ಥಗೊಂಡಿದ್ದ  ಚನ್ನಬಸಪ್ಪ  (48) ಅವರನ್ನು ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರು ಶ್ವಾಸಕೋಶಕ್ಕೆ ಪೆಟ್ಟು ಬಿದ್ದಿರುವುದರಿಂದ ಉಸಿರಾಟದ ತೊಂದರೆಯಾಗಿದೆ. ಆದ್ದರಿಂದ  ದಾವಣಗೆರೆಗೆ ಕರೆದೊಯ್ಯುವಂತೆ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಅಂಬುಲೆನ್ಸ್ ವಾಹನದಲ್ಲಿ ದಾವಣಗೆರೆಗೆ ಸಾಗಿಸುವ ಮಾರ್ಗದಲ್ಲಿ ತಾಲ್ಲೂಕಿನ ಸೀಬಾರ ದಾಟುತ್ತಿದ್ದಂತೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಆಮ್ಲಜನಕ ಅಳವಡಿಸಲು ಮುಂದಾದರು. ಆದರೆ, ಆಮ್ಲಜನಕ ಸಿಲಿಂಡರ್ ಖಾಲಿಯಾಗಿತ್ತು. ತಕ್ಷಣ ನಗರದ ಬಸವೇಶ್ವರ ಆಸ್ಪತ್ರೆಗೆ ಆಮ್ಲಜನಕ ಸಿಲೆಂಡರ್ ಪಡೆಯಲು ಹಿಂತಿರುಗಿ ಬಂದಾಗ ಪರಿಶೀಲನೆ ನಡೆಸಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು ಚನ್ನಬಸಪ್ಪ ಮೃತಟ್ಟಿರುವುದಾಗಿ ತಿಳಿಸಿದ್ದಾರೆ.

ಇದರಿಂದ ತೀವ್ರ ಆಕ್ರೋಶಗೊಂಡ ಮೃತನ ಸಂಬಂಧಿಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬಸವೇಶ್ವರ ಆಸ್ಪತ್ರೆಯ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಅಂಬುಲೆನ್ಸ್ ನಿಲ್ಲಿಸಿ ರಸ್ತೆತಡೆ ನಡೆಸಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಘೋಷಣೆಗಳನ್ನು ಹಾಕಿ ಪ್ರತಿಭಟನೆ ನಡೆಸಿದರು. ಅಂಬುಲೆನ್ಸ್ ಸಿಬ್ಬಂದಿ ಮತ್ತು ಚಾಲಕರು ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದರು.

ರಸ್ತೆತಡೆಯಿಂದಾಗಿ ಸುಮಾರು ಅರ್ಧ ಗಂಟೆಗಳ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ನಿಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.