ADVERTISEMENT

ಶಾಲೆ ಅಸ್ತಿತ್ವಕ್ಕೆ ಗ್ರಾಮಸ್ಥರ ಮಾರ್ಗೋಪಾಯ

ಹೊಸದುರ್ಗದ ಕಸಬಾ ಹೋಬಳಿ ನಾಗೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜೂನ್ 2015, 6:42 IST
Last Updated 23 ಜೂನ್ 2015, 6:42 IST
ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.   

ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿ ನಾಗೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಪ್ರಾರಂಭಿಸಿರುವು ದರಿಂದ ಪ್ರವೇಶ ಪ್ರಕ್ರಿಯೆ ಬಿರುಸುಗೊಂಡಿದೆ.

1957ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ 180ಕ್ಕೂ ಅಧಿಕ ವಿದ್ಯಾರ್ಥಿ ಗಳು 2005ಕ್ಕಿಂತ ಮೊದಲು ವಿದ್ಯಾಭ್ಯಾಸ ಮಾಡುತ್ತಿದ್ದರು. 250 ಮನೆಗಳಿರುವ ಗ್ರಾಮದ ಈ ಶಾಲೆಯಲ್ಲಿ ಕಲಿತ 150ಕ್ಕೂ ಅಧಿಕ ಮಂದಿ ಸರ್ಕಾರಿ ಉದ್ಯೋಗ ದಲ್ಲಿರುವ ಹಮ್ಮೆ ಗ್ರಾಮಸ್ಥರಿಗಿದೆ.

ಆದರೆ, 2006ದಿಂದ ಈಚೆಗೆ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರಕ್ಕೆ ಪೋಷಕರು ಮಾರುಹೋದರು. ಖಾಸಗಿ ಶಾಲಾ ವಾಹನಗಳು ಗ್ರಾಮದೊಳಗೆ ಬರುತ್ತಿದ್ದುದರಿಂದ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಆರಂಭಿಸಿದರು. ಅಂದಿನಿಂದ ಪ್ರತಿವರ್ಷ ಗ್ರಾಮದ ಸರ್ಕಾರಿ ಶಾಲೆಯ ದಾಖಲಾತಿ ಪ್ರಮಾಣ ಕ್ಷೀಣಿಸುತ್ತಾ ಕೇವಲ 30ಕ್ಕೆ ಕುಸಿಯಿತು ಎನ್ನುತ್ತಾರೆ ಗ್ರಾಮದ ಹಿರಿಯ ನಾಗರಿಕ ಪರಮೇಶ್ವರಪ್ಪ.

‘ಇದೇ ಪರಿಸ್ಥಿತಿ ಮುಂದುವರಿದಲ್ಲಿ ನಮ್ಮ ಹಿರಿಯರು ಓದಿದ ಶಾಲೆ ಮುಚ್ಚಿ ಹೋಗಬಹುದು ಎಂಬ ಆತಂಕ ಕಾಡಿದೆ. ಇದರಿಂದ, ಗ್ರಾಮದ ಹಿರಿಯರೆಲ್ಲರೂ ಸೇರಿ ಶಾಲಾ ಶಿಕ್ಷಕರ ಸಮ್ಮುಖದಲ್ಲಿ ಮೂರ್ನಾಲ್ಕು ಬಾರಿ ಸಭೆ ನಡೆಸಿದೆವು. ಸರ್ಕಾರಿ ಶಾಲೆ ಉಳಿಯಬೇಕಾದರೆ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಗಳನ್ನು ಪ್ರಾರಂಭಿಸಬೇಕು. ಆಂಗ್ಲಭಾಷೆ ಕಲಿಸಬೇಕು ಎಂದು ತೀರ್ಮಾನಿಸಿ, ಅದರಂತೆ ಈ ವರ್ಷ ತರಗತಿಗಳು ಪ್ರಾರಂಭವಾಗಿವೆ’ ಎನ್ನುತ್ತಾರೆ  ಗ್ರಾಮಸ್ಥ ಮಂಜುನಾಥ್‌.

ಹೊರಗುತ್ತಿಗೆ ಶಿಕ್ಷಕರ ನೇಮಕ: ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಹಾಗೂ ಆಂಗ್ಲಭಾಷೆ ಯನ್ನು ಮಕ್ಕಳಿಗೆ ಪಾಠ ಮಾಡಲು ಇಬ್ಬರು ಹೊರಗುತ್ತಿಗೆ ಶಿಕ್ಷಕರನ್ನು ತಲಾ ₨ 6 ಸಾವಿರ ಮಾಸಿಕ ವೇತನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಕಾಯಂ ಶಿಕ್ಷಕರು ಐವರು ಇದ್ದಾರೆ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕುಮಾರ್‌.

ದಾಖಲಾತಿ ಹೆಚ್ಚಳ:  ‘ನಮ್ಮೂರ ಶಾಲೆ ಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿರುವುದರಿಂದ, ಖಾಸಗಿ ಶಾಲೆಗೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ಸೇರಿಸಬಾರದು. ಹಾಗೆಯೇ ಖಾಸಗಿ ಶಾಲಾ ವಾಹನಕ್ಕೆ ಕೊಡುತ್ತಿದ್ದ ಹಣವನ್ನು ಹೊರಗುತ್ತಿಗೆ ಶಿಕ್ಷಕರಿಗೆ ವೇತನ ನೀಡಲು ಕೊಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರಂತೆ ಗ್ರಾಮದ ಸುಮಾರು 50 ಪೋಷಕರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸಿದ್ದಾರೆ. ಇದರಿಂದಾಗಿ 30 ಇದ್ದ ಶಾಲೆಯ ದಾಖಲಾತಿ 84ಕ್ಕೆ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಮಹಾಂತೇಶ್‌, ಗೋವಿಂದಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.