ADVERTISEMENT

ಶಿಕ್ಷಣ, ಕ್ರೀಡೆ ಜತೆಯಾಗಿ ಸಾಗಿದರೆ ಯಶಸ್ಸು: ಸಚಿವ ರುದ್ರಪ್ಪ ಲಮಾಣಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 9:10 IST
Last Updated 31 ಡಿಸೆಂಬರ್ 2017, 9:10 IST

ಸಿರಿಗೆರೆ: ಕ್ರೀಡೆಗಳಿಂದ ಸದೃಢ ದೇಹ, ಮನಸ್ಸು ನಿರ್ಮಾಣಗೊಳ್ಳುತ್ತದೆ. ಗ್ರಾಮೀಣ ಭಾಗದ ಪ್ರತಿಭೆಗಳು ತಮ್ಮಲ್ಲಿರುವ ಪ್ರತಿಭೆ ಹೊರಚೆಲ್ಲಲು ಸಂಘ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸಬೇಕು  ಎಂದು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯಪಟ್ಟರು.

ಇಲ್ಲಿನ ತರಳಬಾಳು ಕ್ರೀಡಾಮೇಳದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಕ್ರೀಡೆಗಳಲ್ಲಿ ಏಳು ಚಿನ್ನದ ಪದಕ ಪಡೆದ ಕೀರ್ತಿ ತರಳಬಾಳು ವಿದ್ಯಾಸಂಸ್ಥೆಗೆ ಸಲ್ಲುತ್ತದೆ. ಹಿರಿಯ ಗುರುಗಳು ಅತಿಹೆಚ್ಚು ಗ್ರಾಮೀಣ ಮಟ್ಟದವರಿಗೆ ವಿದ್ಯಾದಾನ ಮಾಡಿದ್ದಾರೆ ಎಂದರು.

ADVERTISEMENT

ಹಿರಿಯ ಗುರುಗಳ ಕನಸನ್ನು ಇಂದಿನ ಸ್ವಾಮೀಜಿ ನನಸು ಮಾಡುತ್ತಿದ್ದಾರೆ. ಅನ್ನದಾತನ ದೃಷ್ಟಿ ಇಟ್ಟುಕೊಂಡು ಬರಗಾಲ ನೀಗಿಸಲು ಕೆರೆಗಳನ್ನು ತುಂಬಿಸುವ ಯೋಜನೆಗೆ ಒತ್ತು ನೀಡಿರುವ ಸ್ವಾಮೀಜಿ ಅಭಿನಂದನಾರ್ಹರು ಎಂದು ಹೇಳಿದರು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವಿದ್ಯಾ ಸಂಸ್ಥೆ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ಸಿರಿಗೆರೆಯ ಶಾಲೆಯಲ್ಲಿ ಓದಿದ ಮಕ್ಕಳು ಅಂದು ಸೇವಾದಳದಲ್ಲಿ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ. ಇಂದಿನ ಮಕ್ಕಳ ಮಲ್ಲಕಂಬ, ಮಲ್ಲಿಹಗ್ಗವು ಇತಿಹಾಸವನ್ನೇ ಸೃಷ್ಠಿಸಿದೆ. 28 ಸ್ಥಳಗಳಲ್ಲಿ ಪ್ರದರ್ಶನ ನೀಡಿ ದಾಖಲೆ ಬರೆದಿದೆ. ಚೆನ್ನೈ, ಉತ್ತರ ಪ್ರದೇಶದಲ್ಲಿ ನಡೆಯುವ ಕ್ರೀಡೆಗಳಿಗೆ ಹಾಗೂ ರಾಷ್ಟ್ರಮಟ್ಟಕ್ಕೆ ನಮ್ಮ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ ಸಮ್ಮುಖದಲ್ಲಿ ದೈಹಿಕ ಶಿಕ್ಷಕರಾದ ತಿಮ್ಮನಕಟ್ಟೆ ಹಾಲೇಶ್‌ ಕ್ರೀಡಾಮೇಳದ ಪ್ರಮಾಣ ವಚನ ಬೋಧಿಸಿದರು.

ನಂತರ ಎಲ್ಲಾ ಶಾಲಾ ಕಾಲೇಜಿನ ವಿದ್ಯಾರ್ಥಿ– ವಿದ್ಯಾರ್ಥಿನಿಯವರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಪಥಸಂಚಲವನ್ನು ಎನ್‌ಸಿಸಿ ವಿಶೇಷಾಧಿಕಾರಿಗಳು ವೀಕ್ಷಿಸಿ ಪ್ರಥಮ, ದ್ವಿತೀಯ ಭಾಗಕ್ಕೆ ಆಯ್ಕೆ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್ ಸ್ವಾಗತಿಸಿದರು. ಜಿ.ಎಸ್.ಶಿವಕುಮಾರ್‌ ವಂದಿಸಿದರು. ಈ.ದೇವರಾಜು ನಿರೂಪಿಸಿದರು. ರಾಜಶೇಖರಯ್ಯ ಪಥಸಂಚಲನದ ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶೇಷಾಧಿಕಾರಿ ಕೆ.ಜಿ.ಶಿವಮೂರ್ತಿ. ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.