ADVERTISEMENT

ಶೀಘ್ರವೇ 11 ಗೋಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 9:00 IST
Last Updated 15 ಜುಲೈ 2012, 9:00 IST

 ಚಿತ್ರದುರ್ಗ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ 11 ಗೋಶಾಲೆಗಳನ್ನು ತೆರೆಯಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಎಸ್. ಜಯಣ್ಣ ತಿಳಿಸಿದರು.

ಶನಿವಾರ ನಗರದ ವಾರ್ತಾ ಭವನದಲ್ಲಿ ವಾರ್ತಾ ಇಲಾಖೆ ಹಾಗೂ ಮಾಧ್ಯಮ ಬಳಗದ ವತಿಯಿಂದ ಪಶು ಇಲಾಖೆಯಲ್ಲಿ ಜಾನುವಾರುಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಬರ ಹಿನ್ನೆಲೆಯಲ್ಲಿ 15 ಗೋಶಾಲೆಗಳನ್ನು ಆರಂಭಿಸಿ 16 ಸಾವಿರ ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿತ್ತು. ಇವುಗಳಲ್ಲಿ 4 ಗೋಶಾಲೆಗಳಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿತ್ತು. 4 ಗೋಶಾಲೆಗಳಲ್ಲಿ ಮೂರು ಚಳ್ಳಕೆರೆ ಮತ್ತು ಹಿರಿಯೂರಿನಲ್ಲಿ ಒಂದು ಗೋಶಾಲೆ ಮುಂದುವರಿಸಲಾಗಿದ್ದು, 3,200 ಜಾನುವಾರಗಳಿಗೆ ಆಶ್ರಯ ಕಲ್ಪಿಸಲಾಗಿದೆ ಉಳಿದವುಗಳನ್ನು ಹಂತ ಹಂತವಾಗಿ ಮುಚ್ಚಲಾಗಿತ್ತು. ಆದರೆ, ಈಗ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಸ್ಥಳಗಳಲ್ಲಿಯೇ 11 ಗೋಶಾಲೆಗಳನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.

ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ಗೋಶಾಲೆ ಆರಂಭಿಸಬೇಕು ಎನ್ನುವ ಬೇಡಿಕೆ ಇದೆ. ಆದರೆ, ನೀರು ಮತ್ತು ಜಾಗದ ಸಮಸ್ಯೆ ಇದೆ. ಜತೆಗೆ ಸಿಬ್ಬಂದಿಯ ಕೊರತೆಯೂ ಇದೆ. ನೆರಳು ಮತ್ತು ಮೂಲಸೌಕರ್ಯಗಳನ್ನು ಗೋಶಾಲೆಯಲ್ಲಿ ಕಲ್ಪಿಸಬೇಕಾಗುತ್ತದೆ. ಪರಶುರಾಂಪುರದಂಥ ಹೋಬಳಿಯಲ್ಲಿ 80 ಹಳ್ಳಿಗಳಿವೆ. ಆದರೆ, ಅಲ್ಲಿ ಒಂದೇ ಗೋಶಾಲೆ ಇದೆ. ಆದ್ದರಿಂದ ಖಾಸಗಿಯವರು ಉಚಿತವಾಗಿ ಜಮೀನು ನೀಡಿದರೆ ಪರಿಗಣಿಸುತ್ತೇವೆ. ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಹೋಬಳಿಗೊಂದು ಗೋಶಾಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಈಗ ನಮ್ಮಲ್ಲಿರುವ ಮೇವು ಮುಂದಿನ ಮೂರು ವಾರಗಳಿಗೆ ಸಾಕಾಗಲಿದ್ದು, ಮುಂದಿನ ದಿನಗಳಲ್ಲಿ ಸುತ್ತಮುತ್ತ ಜಿಲ್ಲೆಗಳಿಂದ ಮೇವು ಖರೀದಿಸುವ ಮೂಲಕ ಜಾನುವಾರುಗಳಿಗೆ ಮೇವು ಪೂರೈಸಲಾಗುವುದು. ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳ ಮೇವಿಗಾಗಿಯೇ ಇರುವ ಗೋಮಾಳಗಳನ್ನು ವಿವಿಧ ರೀತಿಯಲ್ಲಿ ಉಪಯೋಗ ಮಾಡುತ್ತಿರುವದರಿಂದ ಈಗ ಮೇವಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. 100 ಜಾನುವಾರುಗಳಿಗೆ 3 ಎಕರೆ ಗೋಮಾಳ ಮೀಸಲಿಡಬೇಕು. ಆದರೆ, ಈ ನಿಯಮವನ್ನು ಪಾಲಿಸದೆ ಆಶ್ರಯ ಮುಂತಾದ ವಸತಿ ಯೋಜನೆಗಳಿಗೆ ಗೋಮಾಳದ ಜಾಗವನ್ನು ನೀಡಲಾಗಿದೆ. ದಿನವೊಂದಕ್ಕೆ 5.34 ಲಕ್ಷ ಜಾನುವಾರುಗಳಿಗೆ ತಲಾ 5 ಕೆ.ಜಿ.ಯಂತೆ 2,670 ಟನ್ ಮೇವು ಅಗತ್ಯವಾಗಿದೆ ಎಂದು ತಿಳಿಸಿದರು.

ಪ್ರತಿ ಐದು ವರ್ಷಕೊಮ್ಮ ಜಾನುವಾರುಗಳ ಗಣತಿ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ 2007ರ ಜಾನುವಾರು ಗಣತಿಯ ಪ್ರಕಾರ 5.34 ಲಕ್ಷ ಜಾನುವಾರುಗಳಿದ್ದು, 9 ಲಕ್ಷ ಕುರಿ ಹಾಗೂ 3 ಲಕ್ಷ ಮೇಕೆಗಳಿವೆ. 2003ರಲ್ಲಿ 4.92 ಲಕ್ಷ ಜಾನುವಾರುಗಳಿದ್ದವು.

ಈ ಮೂಲಕ ಶೇಕಡಾ 10ರಿಂದ 15ರಷ್ಟು ಜಾನುವಾರು ಸಂಖ್ಯೆ ಏರಿಕೆಯಾಗಿತ್ತು. ಜಿಲ್ಲೆಯಲ್ಲಿ 144 ಪಶು ಆಸ್ಪತ್ರೆಗಳಿದ್ದು, ಅದರಲ್ಲಿ ಆರು ಸಂಚಾರಿ, 2 ಹೋಬಳಿ ಹಾಗೂ 138 ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆಯಲ್ಲಿ 511 ಸಿಬ್ಬಂದಿ ಇದ್ದು, ಅದರಲ್ಲಿ ಶೇ 80ರಷ್ಟು ಹುದ್ದೆಗಳು ಭರ್ತಿಯಾಗಿದ್ದು, ಉಳಿದ ಶೇ 20ರಷ್ಟು ಹುದ್ದೆಗಳು ಖಾಲಿಯಾಗಿದ್ದು, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹೆಚ್ಚು ಸಿಬ್ಬಂದಿಯ ಹುದ್ದೆ ಖಾಲಿ ಉಳಿದಿವೆ. ಮೊಳಕಾಲ್ಮುರಿಗೆ ಹೋಗಲು ನೌಕರರು ನಿರಾಸಕ್ತಿ ತೋರುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿ ಸ್ಥಳಿಯ ತಳಿಗಳಾದ ಅಮೃತ್ ಮಹಲ್ ತಳಿಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಉಳಿದೆಡೆ ಹಳ್ಳಕಾರ್ ತಳಿಗಳು ಕಾಣುತ್ತವೆ. ಇಲಾಖೆಯಲ್ಲಿ ಸ್ಥಳೀಯ ತಳಿಗಳನ್ನು ಸಂರಕ್ಷಣೆ ಮಾಡುವ ಹಿನ್ನೆಲೆಯಲ್ಲಿ 2006ರಲ್ಲಿ ಕಾರ್ಯಕ್ರಮವನ್ನು ರೂಪಿಸಿದ್ದು, ಇವುಗಳ ಅಭಿವೃದ್ಧಿ ಕಾರ್ಯವನ್ನು ಕಾತ್ರಾಳ್ ಗೋಶಾಲೆ ವಹಿಸಿಕೊಂಡಿದೆ. ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಕುರಿ ಸಾಕಾಣಿಕೆ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಜಯಣ್ಣ ಹೇಳಿದರು.

5 ಸಾವಿರ ಜಾನುವಾರುಗಳಿರುವ ಪ್ರದೇಶದಲ್ಲಿ ಪಶು ಚಿಕಿತ್ಸಾ ಘಟಕ ಮತ್ತು 10 ಸಾವಿರ ಜಾನುವಾರುಗಳಿರುವ ಪ್ರದೇಶದಲ್ಲಿ ಪಶು ಆಸ್ಪತ್ರೆಯನ್ನು ತೆರೆಯುವ ಜತೆಗೆ ಅಗತ್ಯವಾದ ಸಿಬ್ಬಂದಿ ನೀಡಲಾಗುತ್ತಿದೆ. ಪಶು ಆಸ್ಪತ್ರೆ ಇಲ್ಲದ ಪ್ರದೇಶದಲ್ಲಿ ಸಂಚಾರಿ ಪಶು ಆಸ್ಪತ್ರೆಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಚಳ್ಳಕೆರೆ ತಾಲ್ಲೂಕಿನ ಕುದಾಪುರ ಫಾರ್ಮ್ ಅನ್ನು ಬಾಗಲಕೋಟೆ ಜಿಲ್ಲೆಯ ಹನಗವಾಡಿಗೆ ಸ್ಥಳಾಂತರಿಸಲಾಗಿದೆ. ಸುಮಾರು 250 ಕುರಿಗಳು ಅಲ್ಲಿದ್ದವು. ಜಿಲ್ಲೆ ಕುರಿಗಳಿಗೆ ವಿಮಾ ಯೋಜನೆಯನ್ನು  ಸರ್ಕಾರ ನೀಡಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಂಟುಂಬದವರಲ್ಲಿ 12,500 ಕುರಿಗಳನ್ನು ವಿಮೆಗೆ ಒಳಪಡಿಸಲಾಗಿದೆ. ರೂ 200 ವಿಮೆ ಕಂತಿನಲ್ಲಿ ಕುರಿಗಾರ ರೂ 20 ನೀಡಬೇಕಿದೆ. ಕುರಿ ಮರಣ ಹೊಂದಿದರೆ ರೂ 12,500 ನೀಡಲಾಗುವುದು. ಪ್ರಕೃತಿ ವಿಕೋಪದಡಿಯಲ್ಲಿ ಕುರಿಗಳು ಸಾವನ್ನಪ್ಪಿದ್ದಾಗ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅಲ್ಲಿನ ಆಧಾರದ ಮೇಲೆ  ಕಂದಾಯ ಇಲಾಖೆ ಪರಿಹಾರ ನೀಡಲಿದೆ ಎಂದು ತಿಳಿಸಿದರು.

ಕುರಿಗಳಂತೆಯೇ ಇತರೆ ಎತ್ತು, ಆಕಳುಗಳಿಗೂ ವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಯಾಗಿದ್ದು, ಹಂತಹಂತವಾಗಿ ಉಳಿದ ಜಿಲ್ಲೆಗಳಲ್ಲಿ ಜಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಸಹಾಯಕ ನಿರ್ದೇಶಕ ಕೃಷ್ಣಪ್ಪ, ವಾರ್ತಾಧಿಕಾರಿ ಮಹೇಶ್ವರಯ್ಯ, ಪತ್ರಕರ್ತ ನಾಗಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.