ADVERTISEMENT

ಸಣ್ಣ ನೀರಾವರಿ ಇಲಾಖೆಯ ಹಗರಣ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 5:35 IST
Last Updated 17 ಜುಲೈ 2012, 5:35 IST
ಸಣ್ಣ ನೀರಾವರಿ ಇಲಾಖೆಯ ಹಗರಣ
ಸಣ್ಣ ನೀರಾವರಿ ಇಲಾಖೆಯ ಹಗರಣ   

ಚಿತ್ರದುರ್ಗ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕೈಗೊಂಡಿರುವ ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆ, ಕಾಮಗಾರಿಗಳು, ಅನುದಾನದ ಬಳಕೆಯ ಸಮಗ್ರ ಪರಿಶೀಲನೆಗೆ ವಿಶೇಷ ತಂಡ ರಚಿಸಿ ಕಳುಹಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸೋಮವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕಾಮಗಾರಿಗಳು ನಡೆಯದಿದ್ದರೂ ಹಾಗೂ ರೈತರೇ ಹೂಳೆತ್ತಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ. ನೂರಾರು ಕೋಟಿ ರೂಪಾಯಿ ಅನುದಾನ ಬಂದಿದ್ದರೂ, ಅಂತರ್ಜಲ ಹೆಚ್ಚಿಸುವ ಯಾವುದೇ ಯೋಜನೆಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೋಟ್ಯಂತರ ರೂಪಾಯಿ ದುಡ್ಡು ಬಂದಿದ್ದರೂ ಸಣ್ಣ ನೀರಾವರಿ ಇಲಾಖೆ ಸಾಧನೆ ಶೂನ್ಯ. ಈ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ.  ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಕೆರೆಯಿಂದ ರೈತರೇ ಸ್ವಯಂ ಇಚ್ಛೆಯಿಂದ ಹೂಳೂ ತೆಗೆಯುತ್ತಿರುವುದನ್ನು ತಾವು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರು ಪ್ರತಿನಿತ್ಯ ನೋಡಿದ್ದಾರೆ. ಆದರೆ, ಯಾವುದೇ ರೀತಿ ಕೆಲಸ ಮಾಡದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ. ಅದೇ ರೀತಿ ಚಳ್ಳಕೆರೆ ತಾಲ್ಲೂಕಿನ ರಾಣಿಕೆರೆ ಕಾಲುವೆಯ ಶೇ 25ರಷ್ಟು ಕೆಲಸ ಮಾಡಿಲ್ಲ. ಆದರೆ, ಬಿಲ್ ಪಾವತಿಸಲಾಗಿದೆ ಎಂದು ದೂರಿದರು.

`ಅಭಿವೃದ್ಧಿ ತೋರಿಸಿ~

ವರ್ಷಕ್ಕೆ ನಬಾರ್ಡ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸುಮಾರು ರೂ 80 ಕೋಟಿ ಅನುದಾನ ಇಲಾಖೆಗೆ ದೊರೆತಿದೆ. ಇಷ್ಟೊಂದು ಮೊತ್ತ ಬಂದಿದ್ದರೂ ಏನಾದರೂ ಅಭಿವೃದ್ಧಿಯಾಗಿದೆಯೇ? ಮಳೆ ಬಂದರೆ ಕೆರೆ ಹೂಳು ತೆಗೆದಿರುವ ಕಾಮಗಾರಿಗಳು ಕೊಚ್ಚಿ ಹೋಗಿವೆ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತೀರಿ. ಆಗ ಎಲ್ಲರೂ ಅದನ್ನು ನಂಬುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಅಕ್ರಮಗಳಿಗೆ ಸುಲಭವಾಗಿ ಅವಕಾಶ ನೀಡಿದಂತಾಗುತ್ತದೆ ಎಂದು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ಇಲಾಖೆಯ ಎಲ್ಲ ರೀತಿಯ ಅನುದಾನಗಳ ಬಳಕೆ ಬಗ್ಗೆ ಪರಿಶೀಲನೆ ಅಗತ್ಯ ಇರುವುದರಿಂದ ಪರಿಶೀಲನೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಡೆಂಗೆ ಮುಂತಾದ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿವೆ. ಈ ಸಂದರ್ಭದಲ್ಲಿ ನಿಯೋಜನೆ ಮೇಲೆ ನೌಕರರನ್ನು ಬೇರೆ ಸ್ಥಳಕ್ಕೆ ಕಳುಹಿಸಬಾರದು. ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜನೆ ನೆಪದಲ್ಲಿ ತಮಗೆ ಬೇಕಾದ ಸ್ಥಳಗಳಿಗೆ ಮತ್ತು ನಗರದ ಹತ್ತಿರದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.

ಆದ್ದರಿಂದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಯಾವುದೇ ರೀತಿ ಶಿಫಾರಸ್ಸಿಗೆ ಮಣೆ ಹಾಕಬಾರದು ಎಂದು ಸೂಚಿಸಿದರು.ಜಿಲ್ಲೆಗೆ ಈ ಬಾರಿ ಸರ್ವ ಶಿಕ್ಷಾ ಅಭಿಯಾನದಲ್ಲಿ ಸುಮಾರು 200 ಕೊಠಡಿಗಳು ಮಂಜೂರಾಗಿವೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ತಿಳಿಸಿದರು.ಜಿಲ್ಲೆಯಲ್ಲಿ ಸಂಪೂರ್ಣ ಶಿಥಿಲವಾಗಿರುವ ಕಟ್ಟಡಗಳ ಪಟ್ಟಿ ಮಾಡಿ. ಆದ್ಯತೆ ಮೇರೆಗೆ ನೂತನವಾಗಿ ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಸೂಚಿಸಿದರು.

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಅಗತ್ಯವಾಗಿ ಬೇಕಾದಂತಹ ಶಿಕ್ಷಕರನ್ನು ಆಯ್ಕೆ ಮಾಡುವಾಗ ಪಾರದರ್ಶಕವಿರಲಿ. ಆಯ್ಕೆ ಸಮಯದಲ್ಲಿ ಶಾಲಾಭಿವೃದ್ಧಿ ಸಮಿತಿಯ ಜತೆಯಲ್ಲಿ ಅಧಿಕಾರಿಗಳನ್ನು  ಸೇರಿಸಿಕೊಂಡು ಅತ್ಯುತ್ತಮ ಅರ್ಹ ಶಿಕ್ಷಕರನ್ನು ನೇಮಕ ಮಾಡುವಂತೆ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎ. ಗೋಪಾಲ್ ಸೂಚನೆ ನೀಡಿದರು.

ರೂ 20 ಲಕ್ಷ ವಸೂಲಿ
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಮಾಡುತ್ತಿರುವವರಿಂದ ರೂ 20 ಲಕ್ಷ ವಸೂಲಿ ಮಾಡಲಾಗಿದ್ದು, 300 ಪ್ರಕರಣಗಳನ್ನು ದಾಖಲಿಸಲಾಗಿದೆ. ನದಿಯಲ್ಲಿ 3 ಅಡಿ ಮೇಲೆ ಗುಂಡಿ ತೋಡಲು ಅವಕಾಶ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗೋವಿಂದಪ್ಪ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.

ಹಿರಿಯೂರು ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಈ ಬಗ್ಗೆ ವರದಿ ನೀಡಲು ಸೂಚಿಸಲಾಗಿತ್ತು. ಆದರೆ, ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಕಳಪೆ
ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ರೂ 40 ಲಕ್ಷ ವೆಚ್ಚದಲ್ಲಿ ಕೆರೆ ಕಾಮಗಾರಿ ಕೈಗೊಂಡಿದ್ದು, ಕಳಪೆಯಾಗಿದೆ. ಅದೇ ರೀತಿ ಯರದಕಟ್ಟೆಯಲ್ಲಿ ಕೆರೆ ಗೋಡೆಗೆ ಕೇವಲ ಮಣ್ಣು ಹಾಕಲಾಗಿದೆ. ಆದರೆ, ಬಿಲ್ ಮಾಡಲಾಗಿದೆ ಎಂದು ಅಧ್ಯಕ್ಷರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT