ADVERTISEMENT

ಸದಾ ಬೆಳಗುವ ಬಾಲೇನಹಳ್ಳಿ

ಜಡೇಕುಂಟೆ ಮಂಜುನಾಥ್
Published 4 ಸೆಪ್ಟೆಂಬರ್ 2011, 9:55 IST
Last Updated 4 ಸೆಪ್ಟೆಂಬರ್ 2011, 9:55 IST

ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಎಂದೇ ಹೆಸರಾಗಿರುವ ಬಯಲುಸೀಮೆ ಚಳ್ಳಕೆರೆ ತಾಲ್ಲೂಕು ಪ್ರತೀ ವರ್ಷವೂ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ.

ಮಳೆಗಾಲದಲ್ಲೂ ಮಳೆ ಕಡಿಮೆ ಬೀಳುವ ಪ್ರದೇಶ ಇದಾಗಿರುವುದರಿಂದ ಇಲ್ಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆ ಸೇರಿದಂತೆ ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ.

ಮಳೆಯಾಧಾರಿತ ಬೇಸಾಯ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಇಲ್ಲಿನ ರೈತರ ಮನೆಯಲ್ಲಿ ರಾತ್ರಿ ವೇಳೆ ತಮ್ಮ ಮಕ್ಕಳು ಓದುವುದಕ್ಕೂ ವಿದ್ಯುತ್ ಸಮಸ್ಯೆ   ಕಾಡುತ್ತಿರುವುದನ್ನು ಕಾಣಬಹುದಾಗಿದೆ.

ಇಂತಹ ತಾಲ್ಲೂಕಿನ ಬಾಲೇನಹಳ್ಳಿ ಎಂಬ ಗ್ರಾಮದಲ್ಲಿ ಸೌರಶಕ್ತಿಯಿಂದ ವಿದ್ಯುತ್ ಪಡೆಯುತ್ತಿರುವುದು ಆರೇಳು ವರ್ಷದಿಂದಲೂ ಜಾರಿಯಲ್ಲಿದ್ದರೂ ಯಾರಿಗೂ ತಿಳಿದಿಲ್ಲ. ಇಡೀ ಗ್ರಾಮದಲ್ಲಿ ಇರುವ 300 ಕುಟುಂಬಗಳಿಗೂ ಸೋಲಾರ್ ವಿದ್ಯುತ್ ಉಪಯೋಗ ಕಲ್ಪಿಸಲಾಗಿದೆ.

ಆರೇಳು ವರ್ಷದ ಹಿಂದೆ ಸೌರಶಕ್ತಿ ವಿದ್ಯುತ್ ವ್ಯವಸ್ಥೆ ಈ ಗ್ರಾಮಕ್ಕೆ ಬಂದಿದೆ. ಪ್ರತಿಯೊಂದು ಮನೆಯೂ ಸೇರಿದಂತೆ ದೇವಾಲಯಗಳಲ್ಲಿ ಹಾಗೂ ಬೀದಿಗಳಲ್ಲಿ ಸೌರಶಕ್ತಿ ವಿದ್ಯುತ್ ಬಳಕೆಯಾಗುತ್ತಿದೆ.

ಬೆಂಗಳೂರಿನ `ಪ್ರೋಲೈಟ್~ ಎಂಬ ಸಂಸ್ಥೆಯವರು ಈ ಸೌರಶಕ್ತಿ ಉಪಕರಣಗಳನ್ನು ಅಳವಡಿಸಿದ್ದಾರೆ. ಆದರೆ, ಸರಿಯಾದ ಮಾರ್ಗದರ್ಶನ ಇಲ್ಲದೇ ಕೆಲವು ಮನೆಗಳಲ್ಲಿ ಇದರ ಉಪಯೋಗ ಸದ್ಯಕ್ಕೆ ಕಡಿತವಾಗಿದೆ. ವಿದ್ಯುತ್ ಸಮಸ್ಯೆ ತಲೆದೋರಿದಾಗ ಸೌರಶಕ್ತಿಯಿಂದ ಪಡೆದ ವಿದ್ಯುತ್ ಉಪಯೋಗಿಸಲಾಗುತ್ತಿದೆ.

ಮನೆಯಲ್ಲಿ ಕತ್ತಲು ಆವರಿಸದೇ ಸದಾ ಬೆಳಕು ಕಾಣುವ ಬಾಲೇನಹಳ್ಳಿ ಗ್ರಾಮ ಬೆಳಗುವ ಗ್ರಾಮವಾಗಿ ಪ್ರತಿಯೊಬ್ಬರಿಗೂ ಗೋಚರಿಸುತ್ತಿದೆ. ವಿದ್ಯಾರ್ಥಿಗಳು ಓದಲು ಅನುಕೂಲ ಆಗುವ ಈ ವ್ಯವಸ್ಥೆಗೆ ಇನ್ನಷ್ಟು ಮಾರ್ಗದರ್ಶನ ಬೇಕಾಗಿದೆ. ಮನೆಯ ಮೂಲೆಯಲ್ಲಿ ಸೌರಶಕ್ತಿಯನ್ನು ಶೇಖರಿಸುವ ಬ್ಯಾಟರಿ ಅಳವಡಿಸಿ ವಿದ್ಯುತ್ ಕಡಿತಗೊಳಿಸಿದ ಮರುಕ್ಷಣವೇ ಈ ಸೋಲಾರ್ ಲೈಟ್ ಬೆಳಕನ್ನು ಬೀರುತ್ತದೆ.

ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿ ಚಿತ್ರದುರ್ಗಕ್ಕೆ ಹೋಗುವ ಮಾರ್ಗಮಧ್ಯೆ ಸಿಗುವ ಈ ಗ್ರಾಮಕ್ಕೆ ಗೇಟ್‌ನಿಂದ 3 ಕಿ.ಮೀ ನಡೆದೇ ಹೋಗಬೇಕಾಗಿದೆ. ಪ್ರತಿನಿತ್ಯ ಈ ಗ್ರಾಮದಿಂದ ವಿದ್ಯಾಭ್ಯಾಸ ಮಾಡಲು ಹತ್ತಾರು ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರಕ್ಕೆ ಬರುವುದುಂಟು. ಇಂತಹ ಗ್ರಾಮದಲ್ಲಿ ಸೌರಶಕ್ತಿಯನ್ನು ಅಳವಡಿಸಿಕೊಂಡಿರುವುದು ಮಾತ್ರ ವಿಶೇಷ.

ಈ ಗ್ರಾಮದ ಪ್ರತಿಯೊಬ್ಬರೂ ಸೋಲಾರ್ ವಿದ್ಯುತ್ ಅಳವಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ಆದರೆ, ಇದನ್ನು ಇಲ್ಲಿಗೆ ತರಲು ಪ್ರಯತ್ನಿಸಿದವರ ಬಗ್ಗೆ ಮಾತ್ರ ಗ್ರಾಮಸ್ಥರಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಇಂತಹ ವ್ಯವಸ್ಥೆಯನ್ನು ರಾಜಕೀಯ ಲೆಕ್ಕಾಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕೆಲವರ ಮಾತುಗಳಿಂದ ವ್ಯಕ್ತವಾಗುತ್ತದೆ.

ಆದರೆ, ಈ ಗ್ರಾಮದ ವಿದ್ಯಾರ್ಥಿಗಳು ಸೌರಶಕ್ತಿಯಿಂದ ವಿದ್ಯುತ್ ಪಡೆಯುವ ಗ್ರಾಮ ನಮ್ಮದಾಗಿದೆ ಎಂಬ ಹೆಗ್ಗಳಿಕೆಯಿಂದ ಮಾತನಾಡುತ್ತಾರೆ. ತಾಲ್ಲೂಕಿನ ಬಾಲೇನಹಳ್ಳಿ ಎಂಬುದು ಚಿತ್ರದುರ್ಗ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರ ಇದ್ದರೂ ಸೋಲಾರ್ ವಿದ್ಯುತ್ ಗ್ರಾಮವಾಗಿರುವುದು ಪ್ರತಿಯೊಬ್ಬರಲ್ಲೂ ಖುಷಿ ತಂದಿದೆ.
ಈ ವ್ಯವಸ್ಥೆ ತಂದವರು ಊರಿಗೆ ಉತ್ತಮ ಕೆಲಸ ಮಾಡಿದ್ದಾರೆ ಎಂಬುದು ಕೆಲವರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.