ಚಿತ್ರದುರ್ಗ: ಸದಾ ಉತ್ತಮ ಕೆಲಸ ಮಾಡುವವರಿಗೂ ಕೂಡ ಕೆಲವೊಮ್ಮೆ ಕೆಡಕುಂಟಾಗಿವೆ. ಪ್ರತಿಯೊಬ್ಬರ ಜೀವನದಲ್ಲೂ ಒಳಿತು ಕೆಡುಕು ಒಂದರ ನಂತರ ಮತ್ತೊಂದು ಸಂಭವಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಸುಖ ಮತ್ತು ದುಃಖ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಮುರುಘಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ್ ಫೌಂಡೇಷನ್ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಸುಖ ನೀಡಿದ ಅನುಭವಕ್ಕಿಂತ ದುಃಖ ನೀಡುವ ಅನುಭವವೇ ಹೆಚ್ಚು ಪರಿಣಾಮಕಾರಿ. ಬದುಕಿನಲ್ಲಿ ಸುಖ ಮತ್ತು ದುಃಖ ಎರಡೂ ಶಾಶ್ವತವಲ್ಲ. ನಾವು ಮಾಡುವಂಥ ಉತ್ತಮ ಕಾರ್ಯಗಳು ಮಾತ್ರ ಸದಾ ಜನಮಾನಸದಲ್ಲಿ ಉಳಿಯುತ್ತವೆ ಎಂದು ಹೇಳಿದರು.
ಚಿಕ್ಕ ವಯಸ್ಸಿನಲ್ಲಿಯೇ ಅಖಿಲ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಅವರ ಕುಟುಂಬಕ್ಕೆ ಮರೆಯಲಾಗದ ನೋವನ್ನುಂಟು ಮಾಡಿದೆ. ಇನ್ನು ಸ್ನೇಹಿತರ ಬಳಗವಂತೂ ಅಖಿಲ್ ಫೌಂಡೇಷನ್ ಹೆಸರಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ೨೧ ವರ್ಷದೊಳಗಿನವರಿಗೆ ಆರ್ಥಿಕ ನೆರವು ನೀಡಲು ತೀರ್ಮಾನಿಸಿರುವುದು ಅತ್ಯಂತ ಮಾನವೀಯ ಮೌಲ್ಯವುಳ್ಳ ದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಳ್ಳದೆ, ವರ್ಷಕ್ಕೊಮ್ಮೆ ಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಮಾತ್ರ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ ಎಂದು ಸಲಹೆ ನೀಡಿದರು. ಪಿವಿಎಸ್ ಆಸ್ಪತ್ರೆಯ ಡಾ.ಪಿ.ವಿ. ಶ್ರೀಧರಮೂರ್ತಿ, ಡಾ.ರಾಘವೇಂದ್ರ, ಅಖಿಲ್ ಪೋಷಕ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.