ADVERTISEMENT

ಸ್ವಸ್ಥ ಕುಟುಂಬಕ್ಕೆ ಅಂಬೇಡ್ಕರ್ ಕಾರ್ಮಿಕರ ಸಹಾಯಹಸ್ತ.!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:08 IST
Last Updated 23 ಅಕ್ಟೋಬರ್ 2017, 6:08 IST

ಚಿತ್ರದುರ್ಗ: ‘ಉದ್ಯೋಗ ಖಾತರಿ ಜತೆ ನಿಮ್ಮ ಜೀವನದ ಭದ್ರತೆಯೂ ಖಾತ್ರಿ’, ‘ಕಾರ್ಮಿಕ ಸಹಾಯ ಹಸ್ತದೊಂದಿಗೆ ಪಯಣ – ನಿಮ್ಮ ಮಕ್ಕಳಿಗೆ ಸಿಗುವುದು ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ’, ‘ಕಾರ್ಮಿಕ ಸಹಾಯ ಹಸ್ತದೊಂದಿಗೆ  ನೋಂದಣಿಯಾದರೆ – ಸಿಗುವುದು 60 ರ ನಂತರ ಪಿಂಚಣಿ’...

ಇಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕಾರ್ಮಿಕ ಇಲಾಖೆ ಹಾಗೂ ಬೆಂಗಳೂರಿನ ಐಕ್ಯ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಕಾರ್ಮಿಕರು ಹಿಡಿದ ನಾಮಫಲಕಗಳಿವು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರನ್ನು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸುವ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಪ್ರಮುಖ ರಸ್ತೆಗಳಲ್ಲಿ ಈ ಜಾಥಾ ಸಂಚರಿಸಿತು.

ADVERTISEMENT

ಜಾಥಾ ನಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಈ ಯೋಜನೆಯ ಲಾಭ ಎಲ್ಲಾ ಶ್ರಮಿಕ ವರ್ಗದವರಿಗೂ ತಲುಪಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆಯಿಂದ ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಎಲ್ಲಾ ಕಾರ್ಮಿಕರನ್ನು ಈ ಯೋಜನೆಯಡಿ ನೋಂದಾಯಿಸಿ, ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು  ಸೂಚನೆ ನೀಡಿದರು.

ದೊಡ್ಡ ಕಾಯಿಲೆಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಕಷ್ಟಪಡಬೇಕಾಗುತ್ತದೆ.  ₹  2 ಲಕ್ಷದವರೆಗೂ ಸಹಾಯಧನ ನೀಡಿ  ಪ್ರಾಣ ರಕ್ಷಣೆ ಮಾಡುವ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದರು.

ಅಸಂಘಟಿತ ಕಾರ್ಮಿಕರ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ನೆರವು ಮತ್ತು ಭದ್ರತೆ ಒದಗಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇಂಥ ಯೋಜನೆ ಕಷ್ಟದಲ್ಲಿರುವವರಿಗೆ ಹೊಸ ಬದುಕು ನೀಡುತ್ತದೆ ಎಂದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ   ಮಾತನಾಡಿ, ನೋಂದಣಿ ಕಾರ್ಯವನ್ನು ಆಯಾ ಗ್ರಾಮ ಪಂಚಾಯ್ತಿಯಲ್ಲಿ ನಡೆಯಲಿದೆ ಎಂದರು.

ಸ್ಮಾರ್ಟ್‌ ಕಾರ್ಡ್‌ ವಿತರಣೆ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಅಭಿಯಾನದಡಿ ನೋಂದಣಿ ಮಾಡಿದ ಉದ್ಯೋಗ ಖಾತರಿ ಕಾರ್ಮಿಕರಾದ ಹಿರೇಹಳ್ಳಿ ದೊಡ್ಡಯ್ಯ, ಚಿಕ್ಕಬೆನ್ನೂರು ಮೀನಾಕ್ಷಮ್ಮ, ನಾಗರಾಜು, ಸಾಕಮ್ಮ ಅವರಿಗೆ ಸ್ಮಾರ್ಟ್ ಕಾರ್ಡ್ ಸಾಂಕೇತಿಕವಾಗಿ ವಿತರಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಸಿಇಒ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಶಿ, ಉಪವಿಭಾಗಾಧಿಕಾರಿ ರಾಘವೇಂದ್ರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಸತೀಶ್ ಯೋಜನೆಯ ವಿವರ ನೀಡಿದರು. ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಬಸವರಾಜಪ್ಪ ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕ ಶಫೀವುಲ್ಲಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.