ADVERTISEMENT

`ಹಿರಿಯರ ವೇದಿಕೆಗೆ ಬಿಜೆಪಿ ಮಾನ್ಯತೆ ಇಲ್ಲ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 8:24 IST
Last Updated 3 ಏಪ್ರಿಲ್ 2013, 8:24 IST

ಚಿತ್ರದುರ್ಗ: ಬಿಜೆಪಿಯಲ್ಲಿ ಹಿರಿಯರ ವೇದಿಕೆ ಎನ್ನುವುದೇ ಇಲ್ಲ. ಪಕ್ಷದಲ್ಲಿ ಅವರು ಪ್ರತಿಪಾದಿಸಿದ ವ್ಯಕ್ತಿ ಅಧ್ಯಕ್ಷನಾಗಲಿಲ್ಲ. ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣದಿಂದ ಪಕ್ಷದ ಹೆಸರಿನಲ್ಲಿ ವೇದಿಕೆ ರಚಿಸಿಕೊಂಡಿದ್ದಾರೆ. ಈ ವೇದಿಕೆಯಲ್ಲಿರುವವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸಹ ಹೊಂದಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿರುವ ಹಿರಿಯರ ವೇದಿಕೆಗೆ ಯಾವುದೇ ಮಾನ್ಯತೆ ಇಲ್ಲ. ಅದು ಕೆಲವರು ರಚಿಸಿಕೊಂಡಿರುವ ಸ್ವಯಂ ವೇದಿಕೆಯಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಗಿರೆಡ್ಡಿಗೆ ನೋಟಿಸ್: ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಾಗಿರೆಡ್ಡಿ ಅವರು ಪಕ್ಷ ವಿರೋಧಿ ಚಟುವಟಿಕೆ ಕೈಗೊಂಡಿದ್ದಾರೆ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕೆಲವು ದಿನ ಕಾದು ಉತ್ತರ ನೀಡದಿದ್ದರೆ ಪಕ್ಷದಿಂದ ಉಚ್ಚಾಟಿಸುವುದಾಗಿ ತಿಳಿಸಿದರು.

8ಕ್ಕೆ ಸಂಕಲ್ಪ ಯಾತ್ರೆ ಸಮಾರೋಪ: ಬಿಜೆಪಿ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆ ಈಗಾಗಲೇ ಜಿಲ್ಲಾವಾರು ಪ್ರವಾಸ ಪೂರ್ಣಗೊಳಿಸಿದೆ. ಏ. 8ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ. ರಾಷ್ಟ್ರ ನಾಯಕರಾದ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೆಟ್ಲಿ, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೇರಿದಂತೆ ಇತರರು ಭಾಗಹಿಸಲಿದ್ದಾರೆ. ಜಿಲ್ಲೆಯಿಂದ ಈ ಸಮಾರಂಭಕ್ಕೆ ಸುಮಾರು 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರಿನಾಥ್,ಮೋಹನ್, ಮುರಳಿ ಉಪಸ್ಥಿತರಿದ್ದರು.

ಹಿರಿಯೂರಿಗೆ ನಾನೇ: ಸಿದ್ದೇಶ್
ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಜಿ.ಎಚ್. ತಿಪ್ಪಾರೆಡ್ಡಿ, ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ತಿಳಿಸಿದರು.

ಟಿಕೆಟ್‌ಗೆ ಯಾವುದೇ ಲಾಬಿ ನಡೆಸಿಲ್ಲ ಮತ್ತು ಅರ್ಜಿ ಸಹ ನೀಡಿಲ್ಲ. ಆದರೆ, ಆಕಾಂಕ್ಷಿ ಎಂದು ಗುರುತಿಸಿಕೊಂಡಿದ್ದೆ. ಇದನ್ನು ನೋಡಿ ಪಕ್ಷ ತಮಗೆ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು, ಪ್ರಚಾರ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸಮಿತಿ ಸೂಚಿಸಿದೆ. ಉಳಿದ ಕ್ಷೇತ್ರಗಳಿಗೆ ಇನ್ನೂ ಎರಡು-ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಸಿದ್ದೇಶ್ ಯಾದವ್ ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿಯಿಂದಾಗಿ ಪಕ್ಷ ಗೆಲುವು ಸಾಧಿಸುವಲ್ಲಿ ಹಿನ್ನಡೆ ಸಾಧಿಸಿದೆ. ಆದರೆ, ಈ ಫಲಿತಾಂಶದ ಪರಿಣಾಮ ವಿಧಾನಸಭಾ ಚುನಾವಣೆ ಮೇಲೆ ಬೀರುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿಯೂ ಮತದಾರರಿದ್ದಾರೆ. ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಪಡೆ ಸಿದ್ಧಗೊಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT