ADVERTISEMENT

ಹಿರಿಯೂರು ಸಕ್ಕರೆ ಕಾರ್ಖಾನೆ ಮಾರಾಟ: ವಿರೋಧ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:42 IST
Last Updated 8 ಡಿಸೆಂಬರ್ 2012, 6:42 IST

ಹಿರಿಯೂರು: ರೋಗಗ್ರಸ್ತವಾಗಿರುವ ಹಿರಿಯೂರಿನ ವಾಣಿವಿಲಾಸ ಸಹಕಾರಿ ಕಾರ್ಖಾನೆ ಮಾರಾಟ ಮಾಡುವುದಾಗಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಈಚೆಗೆ ಹೇಳಿರುವುದಕ್ಕೆ ನಗರದ ಪ್ರವಾಸಿಮಂದಿರದಲ್ಲಿ ಈಚೆಗೆ ನಡೆದ ತಾಲ್ಲೂಕು ರೈತ ಸಂಘದ ಮಾಸಿಕ ಸಭೆಯಲ್ಲಿ ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮುಖಂಡ ಆರನಕಟ್ಟೆ ಶಿವಕುಮಾರ್ ಮಾತನಾಡಿ, ಕಾರ್ಖಾನೆ ವತಿಯಿಂದ ಪಾವತಿಸಬೇಕಿರುವ ಸಾಲ ಕೇವಲ ್ಙ 14 ಕೋಟಿ. ಇದಕ್ಕಾಗಿ ್ಙ 300 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಕಾರ್ಖಾನೆ ಮಾರಲು ಹೊರಟಿರುವುದು ಯಾವ ನ್ಯಾಯ? ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮುಗಿದರೆ ವಾಣಿವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಬರುತ್ತದೆ.

ಆಗ ಕಾರ್ಖಾನೆ ವ್ಯಾಪ್ತಿಯ ಹಳ್ಳಿಗಳಲ್ಲಿ ಕಬ್ಬು ಬೆಳೆಯಲು ರೈತರು ಸಿದ್ಧರಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಐದಾರು ಸಕ್ಕರೆ ಕಾರ್ಖಾನೆಗಳಿರುವಂತೆ ಇಲ್ಲಿಯೂ ಹೆಚ್ಚುವರಿಯಾಗಿ ಒಂದೆರಡು ಕಾರ್ಖಾನೆಗಳು ಆರಂಭ ಆಗಬಹುದು. ವಾಸ್ತವ ಹೀಗಿರುವಾಗ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಕಾರ್ಖಾನೆ ಮಾರುವ ಬದಲು ಪುನಶ್ಚೇತನಕ್ಕೆ ಸರ್ಕಾರ ಚಿಂತಿಸಬೇಕು. ರೈತರು, ಕಾರ್ಮಿಕರಿಗೆ ಬಾಕಿ ಹಣ ನೀಡಬೇಕು ಎಂದು ಒತ್ತಾಯಿಸಿದರು.

ಸಂಘದ ಕಾರ್ಯಾಧ್ಯಕ್ಷ ತುಳಸೀದಾಸ್ ಮಾತನಾಡಿ, ಬಿ.ಎಲ್. ಗೌಡ ಅವರಂಥ ಹಿರಿಯ ರಾಜಕೀಯ ಮುತ್ಸದ್ದಿಗಳು, ರೈತರ ಹಿತ ದೃಷ್ಟಿಯಿಂದ ಆರಂಭಿಸಿದ್ದ ಕಾರ್ಖಾನೆ ಮಾರಾಟ ಮಾಡುವ ವಿಚಾರವನ್ನು ಸಚಿವರು ಕೈಬಿಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾರ್ಖಾನೆಗೆ ಬರಬೇಕಿರುವ ಬಾಕಿ ಹಣ ಪಡೆದು ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂದರು.

ಸಂಘದ ಉಪಾಧ್ಯಕ್ಷ ಸಿ. ಸಿದ್ದರಾಮಣ್ಣ ಮಾತನಾಡಿದರು.ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ಕೆ.ಸಿ. ಹೊರಕೇರಪ್ಪ  ಮಾತನಾಡಿದರು.

ಕುಮಾರಸ್ವಾಮಿಗೆ ಮನವಿ:  ಗುರುವಾರ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರೈತರು ಮನವಿ ಸಲ್ಲಿಸಿದರು.

ವಾಣಿವಿಲಾಸ ಸಕ್ಕರೆ ಕಾರ್ಖಾನೆ ಮಾರಾಟ ತಡೆಯಬೇಕು. ಬಾಕಿ ಹಣ ಕೊಡಿಸಬೇಕು. ಚಳ್ಳಕೆರೆಗೆ ವಾಣಿವಿಲಾಸ ಜಲಾಶಯದಿಂದ ನೀರು ಪೂರೈಕೆ ಮಾಡುವುದಕ್ಕೆ ತಡೆ ನೀಡಲು ಪ್ರಯತ್ನಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.