ಚಿತ್ರದುರ್ಗ: ಹೊರಗೆ ಸುಣ್ಣಬಣ್ಣಗಳಿಂದ ಅಲಂಕೃತ. ಒಳಗೆ ಮಾತ್ರ ಅದೇ ಸ್ಥಿತಿ. ಮುರಿದು ಬಿದ್ದಿರುವ, ಕಿತ್ತು ಹೋಗಿರುವ ಜಾರುಬಂಡೆ, ಜೋಕಾಲಿಗಳ ಅವಶೇಷಗಳು ಹಾಗೂ ಒಣಭೂಮಿ ದೃಶ್ಯ...
ಇದು ನಗರದ ಹೃದಯ ಭಾಗದಲ್ಲಿರುವ ಉದ್ಯಾನಗಳ ಸ್ಥಿತಿ.
ನಗರದ ಜಿಲ್ಲಾಧಿಕಾರಿ ಕಚೇರಿ ಮತ್ತು ನಗರಸಭೆಯ ಸಮೀಪದಲ್ಲಿರುವ ಉದ್ಯಾನಗಳು ಕಾಯಕಲ್ಪಕ್ಕೆ ಕಾಯುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ.
ರೋಟರಿ ಕ್ಲಬ್ ಪಕ್ಕ ಮತ್ತು ಎದುರು ಇರುವ ಉದ್ಯಾನವನಗಳು ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸುಂದರ ಮತ್ತು ಪ್ರಶಾಂತ ತಾಣವಾಗಬೇಕಾಗಿದ್ದ ಈ ಎರಡು ಉದ್ಯಾನಗಳು ಬಣಗುಡುತ್ತಿದ್ದು, ಪಾಳುಬಿದ್ದ ಜಮೀನಿನಿಂತಾಗಿವೆ.
ರೋಟರಿ ಕ್ಲಬ್ ಎದುರಿರುವ ಉದ್ಯಾನದ ಗೇಟುಗಳಿಗೆ ಈಗ ಬೀಗ ಬಿದ್ದಿದೆ. ಹೊರಗೆ ಸುಣ್ಣ-ಬಣ್ಣದ ಲೇಪನ. ಒಳಗೆ ಮಾತ್ರ ಅದೇ ಸ್ಥಿತಿ. ತೋರಿಕೆಗಾಗಿ ಒಂದಿಷ್ಟು ಕಾಮಗಾರಿ ನಡೆದರೂ ಯಾವುದಕ್ಕೂ ಪ್ರಯೋಜನವಾಗಿಲ್ಲ.
ಬಿಡಾಡಿ ದನಗಳಿಗೆ, ಮಲ ಮೂತ್ರ ವಿಸರ್ಜನೆಯ ತಾಣವಾಗಿದ್ದ ಈ ಉದ್ಯಾನಕ್ಕೆ ಕಾಟಾಚಾರಕ್ಕೆ ಎನ್ನುವಂತೆ ಕಾಯಕಲ್ಪ ನೀಡಲಾಯಿತು. ಆದರೆ, ಇದು ಕೇವಲ ತೋರಿಕೆ ಕ್ರಮವಾಯಿತೇ ಹೊರತು ಶಾಶ್ವತ ಕಾಯಕಲ್ಪ ನೀಡಲಿಲ್ಲ. ಕಾಮಗಾರಿಗಳನ್ನು ಅಪೂರ್ಣಗೊಳಿಸಲಾಯಿತು.
ಉದ್ಯಾನವನಕ್ಕೆ ಕೇವಲ `ಮೇಕಪ್ ಟಚ್~ ನೀಡಲಾಗಿದೆ ಎನ್ನುವುದು ಸಾರ್ವಜನಿಕರ ದೂರು.
ಇಲ್ಲಿ ಮಕ್ಕಳ ಆಟಕ್ಕೆ ವ್ಯವಸ್ಥೆಯೂ ಇಲ್ಲ. ಈ ಹಿಂದೆ ಇದ್ದ ಜಾರುಬಂಡಿ ಮತ್ತಿತರ ಸಾಮಗ್ರಿಗಳು ತುಕ್ಕು ಹಿಡಿದಿದ್ದರೆ, ಇನ್ನೂ ಕೆಲವು ಮಾಯವಾಗಿದೆ. ಈಗಾಗಲೇ ಉದ್ಯಾನದ ಜಾಗದಲ್ಲೇ ಶೌಚಾಲಯ ನಿರ್ಮಿಸಲಾಗಿದೆ. ಕೆಲವು ಗಿಡ-ಮರಗಳು ನಾಪತ್ತೆಯಾಗಿವೆ.
ಈ ಜಾಗವನ್ನು ಉಳಿಸಿ, ರಕ್ಷಿಸಿ ಉದ್ಯಾನಕ್ಕೆ ಕಾಯಕಲ್ಪ ನೀಡಬೇಕು. ಮಕ್ಕಳ ಮನೋರಂಜನೆಗೆ ಅನುಕೂಲಕರ ಆಗಿರುವ ಈ ಜಾಗದಲ್ಲಿ ಒಂದಿಷ್ಟು ಗಿಡ-ಮರಗಳು ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಬೇಕು ಮತ್ತು ಆಸನಗಳ ವ್ಯವಸ್ಥೆಯನ್ನೂ ಮಾಡಬೇಕು. ನಗರೀಕರಣದ ವಾತಾವರಣದಲ್ಲಿ ಹಸಿರು ಬೆಳೆಸಲಿ ಎನ್ನುವುದು ನಾಗರಿಕರ ಆಶಯವಾಗಿದೆ.
ರೋಟರಿ ಕ್ಲಬ್ ಪಕ್ಕ ಇರುವ ಉದ್ಯಾನ ಮಕ್ಕಳ ಮನೋರಂಜನೆಗೆ ಪ್ರಶಸ್ತ ಸ್ಥಳವಾಗಿದೆ. ಸುತ್ತಮುತ್ತ ಬೆಳೆದಿರುವ ಸಣ್ಣಪುಟ್ಟ ಮರಗಳು, ಬಿಸಿಲಿನಲ್ಲೂ ತಣ್ಣನೆಗೆ ಬೀಸುವ ಗಾಳಿಯಿಂದಾಗಿ ಆಹ್ಲಾದಕರ ವಾತಾವರಣವಿದೆ. ಅಲ್ಲಿಗೆ ನಾಗರಿಕರಿಂದ ಹಿಡಿದು ಮಕ್ಕಳೂ ಕೆಲ ಕಾಲ ವಿಶ್ರಾಂತಿಗೆ ಬರಬಹುದು. ಆದರೆ, ಅಲ್ಲಿ ಬರುವವರಿಗೆ ಆಸನದ ವ್ಯವಸ್ಥೆಯೇ ಇಲ್ಲ.
ಈ ಉದ್ಯಾನವನ ಪಕ್ಕದಲ್ಲಿರುವ ರೋಟರಿ ಕ್ಲಬ್ ಶಾಲೆಯ ಮಕ್ಕಳಿಗೆ ಮಾತ್ರ ಮೀಸಲಾಗಿದೆ. ಉದ್ಯಾನದಲ್ಲಿ ಗಿಡಮರಗಳನ್ನು ಬೆಳೆಸಲು ಸಾಕಷ್ಟು ಜಾಗವಿದ್ದರೂ ನಗರಸಭೆ ನಿರ್ಲಕ್ಷ್ಯ ವಹಿಸಿದೆ.
ಈ ಎರಡೂ ಉದ್ಯಾನಗಳು ನಗರದ ಕೇಂದ್ರ ಭಾಗದಲ್ಲಿವೆ. ತುಸು ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಬೆಸ್ಕಾಂ, ಲೋಕೋಪಯೋಗಿ ಇಲಾಖೆ ಮತ್ತಿತರ ಸರ್ಕಾರಿ ಕಚೇರಿಗಳಿವೆ.
ಪ್ರತಿಭಟನೆ, ಕೆಲಸ ಅಂತ ನಿತ್ಯ ನೂರಾರು ಜನರು ಈ ಕಚೇರಿಗಳಿಗೆ ಎಡತಾಕುತ್ತಿರುತ್ತಾರೆ. ಆದರೆ, ಅವರಿಗೆ ಒಂದೈದು ನಿಮಿಷ ಕುಳಿತುಕೊಳ್ಳುವುದಕ್ಕೆ ಅಲ್ಲಿ ಸ್ಥಳ ಇಲ್ಲವಾಗಿದೆ. ಈ ಎರಡು ಉದ್ಯಾನವನಗಳಿಗೆ ಕಾಯಕಲ್ಪ ನೀಡಲು ನಗರಸಭೆ ಇಚ್ಛಾಶಕ್ತಿ ಪ್ರದರ್ಶಿಸಬೇಕು.
ಸಂಬಂಧಿಸಿದವರು ಇನ್ನಾದರೂ ಉದ್ಯಾನಗಳಿಗೆ `ಹಸಿರು ಸ್ಪರ್ಶ~ ನೀಡಬೇಕು. ಉತ್ತಮ ಪರಿಸರ ಸವಿಯಲು ಅನುಕೂಲ ಕಲ್ಪಿಸಬೇಕು ಎನ್ನುವುದು ನಾಗರಿಕರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.