ADVERTISEMENT

ಹೊಳಲ್ಕೆರೆ: ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಸಿದ್ದಯ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:10 IST
Last Updated 10 ಫೆಬ್ರುವರಿ 2012, 10:10 IST

ಹೊಳಲ್ಕೆರೆ: ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ದೊಡ್ಡ ದೋಷಗಳಿಲ್ಲ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಸಿದ್ದಯ್ಯ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಬಿ. ಪರಮೇಶ್ವರಪ್ಪ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ `ಇಂದಿನ ಭಾರತೀಯ ಶಿಕ್ಷಣ ವ್ಯವಸ್ಥೆಯ ಸಾಧನೆಗಳು, ಹಿನ್ನೆಲೆ-ಮುನ್ನೆಲೆ~ ಕುರಿತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಮೆರಿಕ, ಇಂಗ್ಲೆಂಡ್, ರಷ್ಯಾ, ಚೀನಾ ಮತ್ತಿತರ ಮುಂದುವರಿದ ದೇಶಗಳ ಶಿಕ್ಷಣ ಪದ್ಧತಿಗಳಿಗೆ ಹೋಲಿಸಿದರೆ, ಭಾರತೀಯ ಶಿಕ್ಷಣ ವ್ಯವಸ್ಥೆ ಅಷ್ಟೇನು ಕಳಪೆಯಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾಭ್ಯಾಸದ ಮಹತ್ವವೇ ಗೊತ್ತಿಲ್ಲದ ನಮ್ಮ ದೇಶ ಈಗ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ವಿದೇಶಗಳೂ ನಮ್ಮ ಶಿಕ್ಷಣ ವ್ಯವಸ್ಥೆ ಅನುಸರಿಸುತ್ತಿರುವ ಉದಾಹರಣೆಗಳೂ ಇವೆ.
 
ಚೀನಾ ಕೂಡ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ದೊಡ್ಡ ಕನಸುಗಳನ್ನು ಹೊಂದಿದವನು ನಿರೀಕ್ಷಿತ ಯಶಸ್ಸು ಸಾಧಿಸುತ್ತಾನೆ ಎಂದರು.

ಶಿಕ್ಷಣ ಕ್ಷೇತ್ರ ಉದ್ಯೋಗಗಳನ್ನು ಒದಗಿಸಿಕೊಡುವ ಮಾರುಕಟ್ಟೆ ಅಲ್ಲ. ಅದು ನಮ್ಮನ್ನು ಉದ್ಯೋಗಿಗಳಾಗಿ ರೂಪುಗೊಳ್ಳಲು ಅಣಿಗೊಳಿಸುವ ಮಾಧ್ಯಮ ಅಷ್ಟೆ. ಭದ್ರ ನೆಲೆಗಟ್ಟು, ಆತ್ಮವಿಶ್ವಾಸ, ಜ್ಞಾನ, ಕೌಶಲಗಳನ್ನು ತುಂಬುವ ಮೂಲಕ ಮನುಷ್ಯನನ್ನು ಪರಿಪೂರ್ಣಗೊಳಿಸುತ್ತದೆ.
 
ಸಮಾಜಕ್ಕೆ ಹೊರೆಯಾಗದಂತೆ ಬದುಕುವ ಮಾರ್ಗ ತೋರಿಸುತ್ತದೆ. ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ಸಿಗುವಂತೆ ಮಾಡುತ್ತದೆ. ದೇಶದ ಪ್ರಗತಿಗೆ ಶಿಕ್ಷಣವೇ ಬುನಾದಿಯಾಗಿದ್ದು, ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಅಗತ್ಯ ಇದೆ ಎಂದು ಸಿದ್ದಪ್ಪ ತಿಳಿಸಿದರು.

ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯೆ ಹಾಗೂ ಪ್ರಾಂಶುಪಾಲರಾದ ಕೆ.ಎಲ್. ಪದ್ಮಿನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವೀಗ ಹೊರಳು ದಾರಿಯಲ್ಲಿ ನಡೆಯುತ್ತಿದ್ದೇವೆ. ನಾವು ನಡೆದು ಬಂದ ಹಾದಿಯನ್ನು ಪುನರಾವಲೋಕನ ಮಾಡಿಕೊಂಡು, ಹೊಸದಾರಿ ಕಟ್ಟಿಕೊಳ್ಳಲು ಇದು ಸುಸಮಯ. ನಮ್ಮ ಸಂವಿಧಾನದ ಆಶಯ, ಹಿರಿಯರ ಕನಸು, ಶಿಕ್ಷಣದ ಧ್ಯೇಯಗಳನ್ನು ಈಡೇರಿಸುವ ಹೊಣೆ ಎಲ್ಲರ ಮೇಲಿದೆ ಎಂದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ.ಕೆ. ಸಿದ್ದಪ್ಪ ಅವರು ಉತ್ತರ ಮತ್ತು ಮಾರ್ಗದರ್ಶನ ನೀಡಿದರು.
ಉಪನ್ಯಾಸಕರಾದ ಕಲ್ಲಪ್ಪ, ಮುರಗೇಂದ್ರಪ್ಪ, ಉಮಾದೇವಿ, ಲಲಿತಾ, ಅನುಷಾ, ಮಂಜುಳಾ, ಉಷಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.