ADVERTISEMENT

ಹೊಸದುರ್ಗ: 60 ಮಲೇರಿಯಾ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 7:30 IST
Last Updated 11 ಜೂನ್ 2011, 7:30 IST

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ 60 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, ನಿಯಂತ್ರಣಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೇ ತಿಂಗಳಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿಯೇ ಹೆಚ್ಚು ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಬಲ್ಲಾಳಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 35, ಶ್ರೀರಾಂಪುರ 11, ಬಾಗೂರು 9 ಹಾಗೂ ಮಲ್ಲಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣಗಳು ವರದಿಯಾಗಿದ್ದರೆ, ಜಿಲ್ಲೆಯಾದ್ಯಂತ 19 ಮಲೇರಿಯಾ ಪ್ರಕರಣಗಳು ವರದಿಯಾಗಿವೆ.

ಮಲೇರಿಯಾ ನಿಯಂತ್ರಣಕ್ಕಾಗಿ ಈಗಾಗಲೇ ಆರೋಗ್ಯ ಇಲಾಖೆಯಿಂದ ಸ್ವಚ್ಛತೆ ಬಗ್ಗೆ ಹಾಗೂ ಲಾರ್ವಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನೆ, ಮನೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ನೀಡಿ ಅಗತ್ಯ ಔಷಧೋಪಚಾರ ನೀಡಿ ಮಲೇರಿಯಾ ನಿಯಂತ್ರಣಕ್ಕೆ ತರಲಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗಿ ಮಲೇರಿಯಾ ಹೆಚ್ಚುವ ಸಾಧ್ಯತೆ ಇರುವುದರಿಂದ ಚರಂಡಿಗಳು ಹಾಗೂ ನಿಂತ ನೀರಿಗೆ ಗಪ್ಪೆ ಹಾಗೂ ಕ್ಯಾಂಬೋಜಿಯ ಮೀನಿನ ಮರಿಗಳನ್ನು ಬಿಡಲಾಗುತ್ತದೆ.

ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮತ್ತು ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೆಗೊಳ್ಳಲು ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ವಿವಿಧ ಇಲಾಖೆಗಳು ಸಮನ್ವಯತೆ ಯಿಂದ ಕೆಲಸ ನಿರ್ವಹಿಸಲು ಸೂಚನೆ ನೀಡಿದರು.
ಸಾಂಕ್ರಾಮಿಕ ರೋಗಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಚಿತ್ರದುರ್ಗ ನಗರದಲ್ಲಿಯೂ ಮನೆ ಮನೆ ಸಮೀಕ್ಷೆ ಮಾಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ.

ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ಸಾಂಕ್ರಾಮಿಕ ರೋಗಗಳು ಬರದಂತೆ ನೋಡಿಕೊಳ್ಳಬೇಕು.

ಶಾಲಾ, ಕಾಲೇಜುಗಳಲ್ಲಿನ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸ್ವಚ್ಛತೆಯ ಅರಿವು ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಪೋಸ್ಟರ್‌ಗಳನ್ನು ಶಾಲೆ, ಕಾಲೇಜುಗಳಲ್ಲಿ ಆರೋಗ್ಯ ಇಲಾಖೆಯಿಂದ ಕರಪತ್ರ ಹಾಗೂ ಪೋಸ್ಟರ್ ಹಾಕಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟಶಿವರೆಡ್ಡಿ, ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಅಧಿಕಾರಿ ಡಾ.ರಂಗನಾಥ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿಡಾ. ಶಿವಕುಮಾರ್, ಮಲೇರಿಯ ನಿಯಂತ್ರಣಾಧಿಕಾರಿ ಡಾ. ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.