ADVERTISEMENT

₹ 1 ಕೋಟಿ ವಂಚನೆ ಯತ್ನ: ಹತ್ತು ವಂಚಕರ ತಂಡ ಸೆರೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 16:29 IST
Last Updated 24 ಅಕ್ಟೋಬರ್ 2020, 16:29 IST

ಚಿತ್ರದುರ್ಗ: ಎರಡು ಸಾವಿರ ಮುಖಬೆಲೆಯ ನೋಟು ರದ್ದಾಗುತ್ತದೆಂದು ನಂಬಿಸಿ ಉದ್ಯಮಿಯೊಬ್ಬರಿಗೆ ಒಂದು ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ ಹತ್ತು ಆರೋಪಿಗಳ ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಸುಧಾಕರ ರೆಡ್ಡಿ, ಪ್ರಕಾಶ್, ಮಧು, ವೆಂಕಟೇಶ್, ಪದ್ಮ, ವಿಜಯ, ಮಧು, ಕಿರಣ್, ಭಾಸ್ಕರ್‌ ಹಾಗೂ ಪುಳ್ಳಪ್ಪ ಬಂಧಿತರು.

ಚಿತ್ರದುರ್ಗದ ಉದ್ಯಮಿಯೊಬ್ಬರ ಬಳಿ ಎರಡು ಸಾವಿರ ಮುಖಬೆಲೆಯ ₹1 ಕೋಟಿ ಹಣವಿತ್ತು. ನೋಟು ಅಮಾನ್ಯೀಕರಣಗೊಳ್ಳಲಿದೆ ಎಂಬ ಆತಂಕ ಸೃಷ್ಟಿಸಿ ಅದರ ಲಾಭ ಪಡೆಯಲು ವಂಚಕರು ಯತ್ನಿಸಿದ್ದರು. ಇದಕ್ಕೆ ಉದ್ಯಮಿಯೂ ಒಪ್ಪಿಗೆ ಸೂಚಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದ ವಂಚಕರು ಲಾಡ್ಜ್‌ನಲ್ಲಿ ಮೂರು ತಂಡಗಳಾಗಿ ವಾಸ್ತವ್ಯ ಹೂಡಿದ್ದರು. ಎರಡು ಸಾವಿರ ಮುಖಬೆಲೆಯ ನೋಟು ಪಡೆದು ₹ 500 ಮುಖಬೆಲೆಯ ನೋಟು ನೀಡುವುದಾಗಿ ನಂಬಿಸಿದ್ದರು. ಐದು ಕಂತುಗಳಲ್ಲಿ ಹಣ ತಲುಪಿಸುವುದಾಗಿ ನಂಬಿಸಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.

ಅನುಮಾನಗೊಂಡ ಉದ್ಯಮಿ ಹಣ ನೀಡಿರಲಿಲ್ಲ. ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕರ ತಂಡವನ್ನು ಬಂಧಿಸಿದ್ದಾರೆ. ಉದ್ಯಮಿ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.