ADVERTISEMENT

ರಾಜ್ಯದಲ್ಲಿ 31,857 ಮಂದಿಗೆ ಲ್ಯಾಪ್ ಟಾಪ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 8:38 IST
Last Updated 9 ಜನವರಿ 2018, 8:38 IST

ಚಿತ್ರದುರ್ಗ: ರಾಜ್ಯದಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 31,857 ಮಂದಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉಚಿತ ಲ್ಯಾಪ್‍ ಟಾಪ್ ಸೌಲಭ್ಯ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಸೋಮವಾರ ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 2016 -17 ನೇ ಸಾಲಿನ ಪ್ರಥಮ ಪದವಿ ಮತ್ತು ಡಿಪ್ಲೊಮ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜಗತ್ತಿಗೆ ಪ್ರತಿಯೊಬ್ಬರೂ ತೆರೆದುಕೊಳ್ಳುತ್ತಿರುವ ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಸಾಧ್ಯವಾಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ದೃಷ್ಟಿಕೋನದಿಂದ ಈ ಸೌಲಭ್ಯ ನೀಡಲಾಗುತ್ತಿದೆ ಎಂದರು.

ADVERTISEMENT

ಲ್ಯಾಪ್‍ಟಾಪ್‍ ಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಎಲ್ಲ ರೀತಿಯ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳಿ. ಯಾವ ಕಾರಣಕ್ಕೂ ಓದುವ ವಯಸ್ಸಿನಲ್ಲಿ ಸಮಯ ವ್ಯರ್ಥ ಮಾಡಬೇಡಿ. ಶೈಕ್ಷಣಿಕ ಗುರಿ ತಲುಪಿ, ಉನ್ನತ ಹುದ್ದೆ ಪಡೆಯಿರಿ ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವನಾದ ನಂತರ ವಿವಿಧ ಯೋಜನೆಯಡಿ ₹ 86 ಸಾವಿರ ಕೋಟಿ ಮೊತ್ತದಷ್ಟು ಸೌಲಭ್ಯ ನೀಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

ವಿದ್ಯಾರ್ಥಿಗಳ ಅನಿಸಿಕೆ: ಮೊಳಕಾಲ್ಮುರಿನ ವಿದ್ಯಾರ್ಥಿನಿ ಕಾವ್ಯಾಶ್ರೀ ಮಾತನಾಡಿ, ಅನೇಕ ಬಡ ವಿದ್ಯಾರ್ಥಿಗಳ ಪೋಷಕರು ಲ್ಯಾಪ್‌ಟಾಪ್ ಕೊಡಿಸುವಷ್ಟರ ಮಟ್ಟಿಗೆ ಆರ್ಥಿಕವಾಗಿ ಪ್ರಬಲರಲ್ಲ. ಇದನ್ನು ಮನಗಂಡು ಸರ್ಕಾರ ಉತ್ತಮ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ಪರಶುರಾಂಪುರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸುಮಂತ್‌ ಮಾತನಾಡಿ, ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಬಳಕೆಯ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದಿಂದ ಕೊಟ್ಟಿರುವುದು ನಿಜಕ್ಕೂ ಸಂತೋಷದ ವಿಷಯ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಲೀಡ್ ಪ್ರಾಚಾರ್ಯ ಡಿ.ಸುಧಾಕರ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಸಣ್ಣಮ್ಮ  ಇದ್ದರು.

2 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್: ಪ್ರಥಮ ಪದವಿ ಮತ್ತು ಡಿಪ್ಲೊಮ ಓದುತ್ತಿರುವ ರಾಜ್ಯದಲ್ಲಿರುವ ಎಲ್ಲ ವರ್ಗದ ಸುಮಾರು 2 ಲಕ್ಷ ಬಡ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು. ಆದರೆ, ಸ್ವಲ್ಪ ಲೋಪದೋಷ ಕಂಡು ಬಂದ ಕಾರಣ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ತ್ವರಿತವಾಗಿ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್.ಆಂಜನೇಯ   ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.