ADVERTISEMENT

ಚಳ್ಳಕೆರೆ: ಶಾಸಕರ ಭವನಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 9:41 IST
Last Updated 12 ಜನವರಿ 2018, 9:41 IST

ಚಳ್ಳಕೆರೆ: ವಿವಿಧ ಬೇಡಿಕೆ ಈಡೇರಿ ಸುವಂತೆ ಆಗ್ರಹಿಸಿ ಗುರುವಾರ ಇಲ್ಲಿ ಅಖಂಡ ಕರ್ನಾಟಕ ರೈತಸಂಘ ಹಾಗೂ ಸಂತೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ನೇತೃತ್ವದಲ್ಲಿ ರೈತರು ಹಾಗೂ ವ್ಯಾಪಾರಸ್ಥರು ಶಾಸಕರ ಭವನ ಮುತ್ತಿಗೆ ಹಾಕಿದರು.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಾಣ ವೇಳೆ ದಾನಿಗಳು ನೀಡಿದ್ದ ವಾರದ ಸಂತೆ ಸ್ಥಳವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿದ್ದ ಭರವಸೆ ನೆರವೇರಿಲ್ಲ. ಇದರಿಂದ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಪ್ರತಿಭಟಕಾರರು ದೂರಿದರು.

ಕೃಷಿ ಇಲಾಖೆ ಮೂಲಕ ಖರೀದಿಸಿ ಬಿತ್ತನೆ ಮಾಡಿದ್ದ ತೊಗರಿ ಬೀಜ ಇಳುವರಿ ನೀಡುವಲ್ಲಿ ವಿಫಲವಾಗಿದೆ. ಕಳಪೆ ಬೀಜ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಫಸಲ್‌ ಬಿಮಾ ಯೋಜನೆಯಡಿ ಪರಿಹಾರ ನೀಡಬೇಕು  ಎಂದು ಒತ್ತಾಯಿಸಿದರು.

ADVERTISEMENT

ಶೇಂಗಾ ಹಾಗೂ ತೊಗರಿಯನ್ನು ಪ್ರತಿ ಕ್ವಿಂಟಲ್‌ಗೆ ₹ 6,500 ರಂತೆ ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು. ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಅನುಕೂಲವಾಗುವಂತೆ ಹಗಲು ಹಾಗೂ ರಾತ್ರಿ ತಲಾ ಆರು ಗಂಟೆ ಕಾಲ ‘ತ್ರೀಫೇಸ್‌’ ವಿದ್ಯುತ್‌ನ್ನು ಪಂಪ್‌ಸೆಟ್‌ಗಳಿಗೆ ನೀಡಬೇಕು. ಸಂತೇ ಮೈದಾನದಲ್ಲಿ ಶಾಸಕರು ಭರವಸೆ ನೀಡಿದ್ದ ಪ್ರಕಾರ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶಾಸಕ ಟಿ. ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಸೋಮಗುದ್ದು ರಂಗಸ್ವಾಮಿ, ಕೆ.ಜಿ. ಭೀಮಾರೆಡ್ಡಿ, ಜಿ.ಎಸ್‌. ಶಿವಣ್ಣ, ಗಿರೀಶ್‌ ರೆಡ್ಡಿ, ಎಚ್.ಎಸ್. ಪರಶುರಾಂ, ಕೃಷ್ಣಮೂರ್ತಿ, ಜಂಪಣ್ಣ, ನರಸಿಂಹಪ್ಪ, ಸಾಧಿಕ್‌, ವಿಜಯಕುಮಾರ್, ಕಣುಮಕ್ಕ, ಗೌತಮಿ, ಪಿ.ಸಿ. ಕರಿಯಣ್ಣ, ಶಿವ ಶಂಕರಮೂರ್ತಿ, ಎಚ್‌.ಎಂ. ಗಿರಿಧರ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.