ADVERTISEMENT

ಬೇಸಿಗೆ ಆರಂಭಕ್ಕೆ ಮುನ್ನವೇ ಕುಡಿಯುವ ನೀರಿಗಾಗಿ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 9:15 IST
Last Updated 21 ಜನವರಿ 2018, 9:15 IST

ಚಿಕ್ಕಜಾಜೂರು: ಬೇಸಿಗೆ ಇನ್ನೂ ಮೂರು ತಿಂಗಳು ಇರುವಂತೆಯೇ ಬಿ.ದುರ್ಗ ಹೋಬಳಿಯ ಅನೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಸಮೀಪದ ಗ್ಯಾರೆಹಳ್ಳಿ, ಗಂಜಿಗಟ್ಟೆ, ಉಡುಗೊರೆ ಮೊದಲಾದ ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ವಿದ್ಯುತ್‌ ಬರುವುದನ್ನೇ ಕಾದು ಕುಳಿತುಕೊಳ್ಳುವಂತಾಗಿದೆ.

ವಿದ್ಯುತ್‌ ಬರುತ್ತಿದ್ದಂತೆ ಬಿಂದಿಗೆಗಳನ್ನು ಹಾಗೂ ಬಿಂದಿಗೆಗಳನ್ನು ಇಟ್ಟ ತಳ್ಳುವ ಗಾಡಿಗಳನ್ನು ತಳ್ಳಿಕೊಂಡು ಕೊಳವೆ ಬಾವಿ ಬಳಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಕೊಳವೆ ಬಾವಿಯಲ್ಲಿ ಒಂದು ಇಂಚು ನೀರು ಬರುತ್ತದೆ, ಅದು ಕೇವಲ 30–45 ನಿಮಿಷಗಳು ಮಾತ್ರ. ಮತ್ತೆ ಅರ್ಧ ಗಂಟೆಗೂ ಹೆಚ್ಚು ಕಾಲ ನೀರಿಗಾಗಿ ಕಾಯುವಂತಾಗಿದೆ. ಬೆಳಿಗ್ಗೆ ಅಡುಗೆ ಮುಗಿಸಿ, ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸಿದ ನಂತರ ನಾವು ನೀರಿಗೆ ಬರಬೇಕು.

ಗಂಡಸರು ತೋಟ, ಜಮೀನುಗಳಿಗೆ ಹೋಗುತ್ತಾರೆ. ಬಟ್ಟೆ ತೊಳೆಯಲು, ಮನೆಯವರಿಗೆ ಮತ್ತು ದನಕರುಗಳಿಗೆ ನೀರನ್ನು ಸಂಗ್ರಹಿಸಲು ಸಂಜೆವರೆಗೂ ಸರತಿ ಸಾಲಲ್ಲಿ ನಿಂತು ನೀರು ಹಿಡಿಯುವ ಸ್ಥಿತಿ ಎದುರಾಗಿದೆ. ಜನವರಿಗೆ ಈ ಸ್ಥಿತಿ ನಿರ್ಮಾಣವಾದರೆ, ಬೇಸಿಗೆ ಬಂತೆಂದರೆ, ನೀರಿಗೆ ಎಲ್ಲಿಗೆ ಹೋಗುವುದು ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ನಿವಾಸಿಗಳಾದ ಸರ್ವಮಂಗಳಮ್ಮ, ನಿರ್ಮಲ, ರೂಪಾ, ರೇಖಾ, ಶಕುಂತಲಾ, ಇಂದ್ರಮ್ಮ ಮೊದಲಾದವರು.

ADVERTISEMENT

ಗ್ರಾಮ ಪಂಚಾಯ್ತಿ ವತಿಯಿಂದ ಕೊಳವೆ ಬಾವಿಯನ್ನು ಕೊರೆಸಿದ್ದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಗ್ರಾಮದಲ್ಲಿ ಸುಮಾರು 120ಕ್ಕೂ ಹೆಚ್ಚು ಮನೆಗಳಿವೆ, 1200ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. 700ಕ್ಕೂ ಹೆಚ್ಚು ಜಾನುವಾರುಗಳಿವೆ. ಗ್ರಾಮದಲ್ಲಿ ಮೂರು ಕಡೆ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ, ನೀರು ಮಾತ್ರ ಸಾಕಾಗುತ್ತಿಲ್ಲ. ಜಿಲ್ಲಾಡಳಿತ ತಕ್ಷಣವೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾ ಮೃತ್ಯುಂಜಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.