ADVERTISEMENT

ಸಿರಿಗೆರೆ: ಚೆಂಡು ಹೂ ಬೆಳೆದು ಖುಷಿ ಕಂಡ ರೈತ

ಹಸ್ತ ಮಳೆಯಿಂದ ನೆಲಕ್ಕುರುಳಿದ ಗಿಡಗಳಿಗೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 5:23 IST
Last Updated 21 ಅಕ್ಟೋಬರ್ 2020, 5:23 IST
ಸಿರಿಗೆರೆ ಸಮೀಪದ ಹಿರೇಬೆನ್ನೂರು ರೈತ ಸುರೇಶಪ್ಪ ಜಮೀನಿನಲ್ಲಿ ಬೆಳೆದ ಚೆಂಡು ಹೂವು
ಸಿರಿಗೆರೆ ಸಮೀಪದ ಹಿರೇಬೆನ್ನೂರು ರೈತ ಸುರೇಶಪ್ಪ ಜಮೀನಿನಲ್ಲಿ ಬೆಳೆದ ಚೆಂಡು ಹೂವು   

ಸಿರಿಗೆರೆ: ಸಾವಯವ ಗೊಬ್ಬರ ಬಳಸಿ ಸಮೃದ್ಧವಾಗಿ ಬೆಳೆದಿರುವ ಚೆಂಡು ಹೂ ಆಯುಧ ಪೂಜೆ ಸಮಯದಲ್ಲಿ ಕೈಹಿಡಿಯುವ ನಿರೀಕ್ಷೆಯಲ್ಲಿದ್ದಾರೆ ಹಿರೇಬೆನ್ನೂರು ರೈತ ಸುರೇಶಪ್ಪ.

ಹಸ್ತ ಮಳೆ ಸಮಯದಲ್ಲಿ ಗಾಳಿಯಿಂದ ನೆಲಕ್ಕುರುಳಿದ ಗಿಡಗಳನ್ನು ಕಂಡು ನೋವು ಅನುಭವಿಸಿದ್ದ ರೈತ, ಗಿಡಗಳಿಗೆ ಪುನಶ್ಚೇತನ ತುಂಬಿ ಆರೈಕೆ ಮಾಡಿದ್ದಾರೆ. ಈಗ ಭರಪೂರ ಮಳೆ ಬಂದಿದ್ದು, ಲಾಭ ಎದುರು ನೋಡುತ್ತಿದ್ದಾರೆ.

ಯೆಲ್ಲೊ ಗೋಲ್ಡ್‌ ತಳಿಯ ಚೆಂಡು ಹೂವು ಬೆಳೆದಿದ್ದು, ಕೆಂಪು ಮಿಶ್ರಿತ ಮರಳು ಭೂಮಿಯನ್ನು ಹದವಾಗಿ ಉಳುಮೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಕಿದ್ದಾರೆ. ಏಳು ಸಾವಿರ ಸಸಿಯನ್ನು ಒಂದೂವರೆ ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದಾರೆ. ಸಾಲಿನಿಂದ ಸಾಲಿಗೆ 3 ಅಡಿ ಅಂತರ, ಗಿಡದಿಂದ ಗಿಡಕ್ಕೆ 2 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿಯಲ್ಲಿ ಗಿಡಗಳಿಗೆ ನೀರುಣಿಸಿದ್ದಾರೆ.

ADVERTISEMENT

‘ಅದೃಷ್ಟಕ್ಕೆ ಕೊಳವೆಬಾವಿ ನೀರಿನ ಜತೆ ಮಳೆ ಬಂದು ನನ್ನ ಕೃಷಿ ಕಾಯಕಕ್ಕೆ ಧೈರ್ಯ ತಂದಿತ್ತು. ಆದರೆ, ಹಸ್ತ ಮಳೆಯಿಂದ ಕಾಲು ಎಕರೆ ಹೂವಿನ ಗಿಡ ನೆಲಕ್ಕುರುಳಿತ್ತು. ಧೈರ್ಯಗೆಡದೆ ಗಿಡಗಳನ್ನು ಪೋಷಣೆ ಮಾಡಿದೆ. ಈಗ ಒಂದು ಚೆಂಡು ಹೂ ಅಂಗೈ ಅಗಲ ಗಾತ್ರದಲ್ಲಿ ಬೆಳೆದಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಸುರೇಶಪ್ಪ.

ನಾಟಿ ಮಾಡಿದ ಸಸಿ 45 ದಿನಗಳ ನಂತರ ಹೂವು ಬಿಡಲು ಪ್ರಾರಂಭವಾಯಿತು. ಒಳ್ಳೆಯ ಬೆಳೆ ಬಂದರೆ ಸುಮಾರು ಎರಡುವರೆ ತಿಂಗಳವರೆಗೆ ಹೂವನ್ನು ಕಟಾವು ಮಾಡಬಹುದು. 2 ಅಡಿ ಎತ್ತರದ ಒಂದು ಗಿಡಕ್ಕೆ 2 ಕೆ.ಜಿ.ಯಂತೆ ಒಂದು ಎಕರೆಗೆ 4ರಿಂದ 6 ಟನ್ ಚೆಂಡು ಹೂವು ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಅವರು.

***

ಕಾಲಕಾಲಕ್ಕೆ ಸರಿಯಾಗಿ ಮಳೆ ಬರದೆ ಇರುವುದರಿಂದ ಸಾಂಪ್ರದಾಯಿಕ ಬೆಳೆ ಆದಾಯ ತಂದುಕೊಡುತ್ತಿಲ್ಲ. ಇದರಿಂದಾಗಿ ಪರ್ಯಾಯ ಬೆಳೆಯತ್ತ ಮುಖಮಾಡಿದೆ

ಸುರೇಶಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.