ಚಿತ್ರದುರ್ಗ: ‘ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಬಗ್ಗೆ ಸಿ.ಟಿ.ರವಿ ಅವರು ಆಡಿರುವ ಮಾತುಗಳ ಆಡಿಯೊ ಬಿಡುಗಡೆ ಮಾಡಿರುವ ವಿಚಾರ ನಮಗೆ ಸಂಬಂಧಿಸಿದ್ದಲ್ಲ. ಸದನದಲ್ಲಿ ನಡೆದ ವಿಚಾರಗಳಿಗೆ ಮಾತ್ರ ನಮ್ಮ ಜವಾಬ್ದಾರಿ ಇರುತ್ತದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಘಟನೆ ಸಂಬಂಧ ನಮಗೆ ಯಾವುದೇ ದಾಖಲೆ ಸಿಗಲಿಲ್ಲ. ಸದನ ಮುಂದೂಡಿದ ಬಳಿಕವಷ್ಟೇ ಘಟನೆ ನಡೆದಿದೆ. ನಾನು ಇಬ್ಬರನ್ನೂ ಕರೆದು ವಿಚಾರಣೆ ಮಾಡಿದ್ದೇನೆ, ಸಂಧಾನಕ್ಕೆ ಯತ್ನಿಸಿದ್ದೇನೆ, ಆದರೆ ಇಬ್ಬರೂ ಸಂಧಾನಕ್ಕೆ ಒಪ್ಪಿಲ್ಲ. ಇದು ಹೊಡೆದಾಟವಲ್ಲ, ಬಡಿದಾಟವಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದ್ದು ಮಾತಿನ ಭರದಲ್ಲಿ ನಡೆದು ಹೋಗಿದೆ’ ಎಂದರು.
‘ಸಭಾಪತಿಯಾಗಿ ನಮ್ಮ ಸದಸ್ಯರಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ. ಸದನದಲ್ಲಿ ನಡೆದ ಘಟನೆ ಬಗ್ಗೆ ಚರ್ಚಿಸಿ ತೀರ್ಪು ನೀಡಿದ್ದೇನೆ. ಆದರೆ ಮುಂದೆ ಏನು ನಡೆಯಿತು ಎಂಬ ಬಗ್ಗೆ ನಾನು ಏನೂ ಹೇಳಲು ಸಾಧ್ಯವಿಲ್ಲ. ಸದನದ ನಂತರ ನಡೆದ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೂ ಸಿ.ಟಿ.ರವಿ ಅವರು ಊರು ತಲುಪುವವರೆಗೂ ರಕ್ಷಣೆ ನೀಡುವಂತೆ ನಾನು ಪೊಲೀಸರಿಗೆ ತಿಳಿಸಿದ್ದೆ. ಈಗ ನಡೆದಿರುವುದು ಸರ್ಕಾರ, ಪೊಲೀಸರು ಹಾಗೂ ಸಿ.ಟಿ.ರವಿ ಅವರಿಗೆ ಸಂಬಂಧಿಸಿದ ವಿಷಯ’ ಎಂದರು.
‘ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದೊಯ್ದ ವಿಚಾರದ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದೆ. ದಾರಿತಪ್ಪಿ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಾನು ಪೊಲೀಸ್ ಕಮೀಷನರ್, ಎಸ್‌ಪಿ ಅವರಿಗೆ ಕರೆ ಮಾಡಿ ರವಿ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.