ADVERTISEMENT

ಮುರುಘಾ ಮಠದ ಪೀಠಾಧ್ಯಕ್ಷ–ಆಡಳಿತಾಧಿಕಾರಿ ಮುಸುಕಿನ ಗುದ್ದಾಟ

ಐತಿಹಾಸಿಕ ಮುರುಘಾ ಮಠದಲ್ಲಿ ಅನಿರೀಕ್ಷಿತ ಬೆಳವಣಿಗೆ

ಜಿ.ಬಿ.ನಾಗರಾಜ್
Published 27 ಆಗಸ್ಟ್ 2022, 19:45 IST
Last Updated 27 ಆಗಸ್ಟ್ 2022, 19:45 IST
ಶಿವಮೂರ್ತಿ ಮುರುಘಾ ಶರಣರು
ಶಿವಮೂರ್ತಿ ಮುರುಘಾ ಶರಣರು    

ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ಶೂನ್ಯ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಹಾಗೂ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ನಡುವಿನ ಮುಸುಕಿನ ಗುದ್ದಾಟ ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಪರಸ್ಪರರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಗಳು ದಾಖ ಲಾಗಿದ್ದು, ಭಕ್ತರನ್ನು ಮುಜುಗರಕ್ಕೀಡು ಮಾಡಿದೆ. ಶಿವಮೂರ್ತಿ ಮುರುಘಾ ಶರಣರು ಹಾಗೂ ಎಸ್‌.ಕೆ. ಬಸವರಾಜನ್‌ ಅವರಿಗೆ ಮುರುಘಾ ಮಠದ ನಂಟು ಬಾಲ್ಯದಿಂದ ಇದೆ.

ಶಿಕ್ಷಣಕ್ಕಾಗಿ ಮುರುಘಾ ಮಠಕ್ಕೆ ಬಂದ ಇಬ್ಬರೂ, ಪೀಠಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಅವರ ನೆಚ್ಚಿನ ಶಿಷ್ಯರಾಗಿದ್ದರು. ಶರಣರು ಶೂನ್ಯ ಪೀಠಾರೋಹಣ ಮಾಡಿದರೆ, ಬಸವರಾಜನ್‌ ಆಡಳಿತಾಧಿಕಾರಿಯಾಗಿ ಮಠದ ಚುಕ್ಕಾಣಿ ಹಿಡಿದರು.

ADVERTISEMENT

ಆತ್ಮೀಯರಾಗಿದ್ದ ಇಬ್ಬರು ಮಠವನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದರು. ಸಮಾಜದ ಎಲ್ಲ ಸಮುದಾಯಕ್ಕೆ ಗುರುಪೀಠ ಸ್ಥಾಪಿಸಿ ದೀಕ್ಷೆ ನೀಡುವ ಐತಿಹಾಸಿಕ ತೀರ್ಮಾನದ ಹಿಂದೆ ಇಬ್ಬರ ಆಲೋಚನೆ ಇದೆ ಎಂದು ಕಿರಿಯ ಮಠಾಧೀಶರು ಸ್ಮರಿಸಿಕೊಳ್ಳುತ್ತಾರೆ. ರಾಜಕೀಯ ಒಲವಿದ್ದ ಬಸವರಾಜನ್‌, ಮುರುಘಾ ಶರಣರ ನಡುವಿನ ವೈಮನಸು ಹಲವು ಬೆಳವಣಿಗೆಗೆ ಕಾರಣವಾಗಿದೆ.

ಆರ್ಥಿಕ ವ್ಯವಹಾರ, ಪ್ರಮುಖ ತೀರ್ಮಾನದ ಬಗ್ಗೆ ಇಬ್ಬರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದರಿಂದ 2007ರಲ್ಲಿ ಬಸವರಾಜನ್‌ ಮುರುಘಾ ಮಠದಿಂದ ಹೊರಬಂದರು. ಜೆಡಿಎಸ್‌ ಟಿಕೆಟ್‌ ಪಡೆದು ಚುನಾವಣಾ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಆಯ್ಕೆಯಾದರು. ಮಠದ ಸ್ಥಿರಾಸ್ತಿ ಹಾಗೂ ಬಹಿರಂಗ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪರಸ್ಪರ ದಾವೆ ಹೂಡಿದರು. ಇವು ಇತ್ಯರ್ಥವಾಗುವ ಹಂತ ತಲುಪಿದಾಗ ಮತ್ತೆ ಒಗ್ಗೂಡಿದರು.

14 ವರ್ಷ ಮಠದಿಂದ ದೂರ ಇದ್ದ ಬಸವರಾಜನ್‌ 2022ರ ಮಾರ್ಚ್‌ 9ರಂದು ಆಡಳಿತಾಧಿಕಾರಿಯಾಗಿ ಮರುನೇಮಕ
ಗೊಂಡರು. ಶಿವಮೂರ್ತಿ ಮುರುಘಾ ಶರಣರೇ ಇದನ್ನು ಅಧಿಕೃತವಾಗಿ ಪ್ರಕಟಿಸಿದರು. ಅಲ್ಲದೆ, ಕೋರ್ಟ್‌ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದರು. ಬಸವರಾಜನ್‌ ಅವರಿಗೆ ಮಠ ಹಲವು ಷರತ್ತು ವಿಧಿಸಿತ್ತು.

ಎರಡು ವಾರದ ಬಳಿಕ ಬಾಂಧವ್ಯದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿತು. ಅಧಿಕಾರ, ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ತೀರ್ಮಾನಗಳಲ್ಲಿ ಭಿನ್ನಾಭಿಪ್ರಾಯ ಬಲಗೊಂಡಿತು. ಬಸವಾದಿತ್ಯ ದೇವರು ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವಾಗ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಸಿಟ್ಟನ್ನು ಆಡಳಿತಾಧಿಕಾರಿ ಹೊರಹಾಕಿದ್ದರು. ಹಾಸ್ಟೆಲ್‌ನಿಂದ ತೆರಳಿದ್ದ ಇಬ್ಬರು ಸಂತ್ರಸ್ತ ಬಾಲಕಿಯರನ್ನು ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಿಂದ ಆಡಳಿತಾಧಿಕಾರಿ ಕರೆತಂದ ಬಳಿಕ ಕಂದಕ ಮೂಡಿತ್ತು.

ಜುಲೈ ಅಂತ್ಯಕ್ಕೆ ಆಡಳಿತಾಧಿಕಾರಿ ಕಚೇರಿಗೆ ಬೀಗ ಹಾಕಲಾಯಿತು. ಕುಪಿತಗೊಂಡ ಬಸವರಾಜನ್‌ ಮತ್ತೆ ಮಠಕ್ಕೆ ಮರಳಲಿಲ್ಲ. ಸಲಹಾ ಸಮಿತಿ, ಕಿರಿಯ ಮಠಾಧೀಶರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದರೂ ಒಗ್ಗೂಡಲಿಲ್ಲ. ಆಡಳಿತಾಧಿಕಾರಿ ಹುದ್ದೆಯಿಂದ ಬಸವರಾಜನ್‌ ಪದಚ್ಯುತಿಯಾಗಿದೆ ಎಂದು ಮಠ ಹೇಳುತ್ತಿದ್ದರೂ ಆದೇಶ ಹೊರಬಿದ್ದಿಲ್ಲ ಎನ್ನುತ್ತಾರೆ ಅವರ ಆಪ್ತರು.

ಕಾನೂನುಬದ್ಧ ಕ್ರಮ: ಎಸ್‌ಪಿ

ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಹಾಗೂ ಆಡಳಿತಾಧಿಕಾರಿ ಬಸವರಾಜನ್‌ ವಿರುದ್ಧ ದಾಖಲಾದ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ನಡೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.

‘ಮೈಸೂರಿನಿಂದ ವರ್ಗಾವಣೆಗೊಂಡ ಲೈಂಗಿಕ ಕಿರುಕುಳ ಪ್ರಕರಣ ಸ್ವೀಕರಿಸಲಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಸಂತ್ರಸ್ತ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಸಹಕಾರದೊಂದಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪೋಕ್ಸೊ ಪ್ರಕರಣಕ್ಕೆ ರೂಪಿಸಿದ ನಿಯಮಾವಳಿ ಪ್ರಕಾರವೇ ತನಿಖೆ ನಡೆಯಲಿದೆ. ಡಿವೈಎಸ್‌ಪಿ ಅನಿಲ್‌ಕುಮಾರ್‌ ತನಿಖಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.