ಹಿರಿಯೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ದಮನಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಅಭಿನಂದನ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕೇಸ್, ಅರುಣ್ ಪುತ್ತಿಲ ಅವರಿಗೆ ಗಡಿಪಾರು ಆದೇಶ ಒಳಗೊಂಡು, ಅಮಾಯಕ ಹಿಂದೂ ಹುಡುಗರ ಮೇಲೆ ಸರ್ಕಾರ ಪೊಲೀಸ್ ಬಲ ಬಳಸಿಕೊಂಡು ನಿರಂತರ ಕಿರುಕುಳ ನೀಡಲು ಆರಂಭಿಸಿದೆ. ವಿವಿಧ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಸರ್ಕಾರ ಮುಂದಾಗಿದೆ ಎಂದು ಪತ್ವಿಕಾ ಹೇಳಿಕೆಯಲ್ಲಿ ನೇರ ಆರೋಪ ಮಾಡಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಯ ಹಿಂದಿನ ಶಕ್ತಿಗಳು ಯಾವುವು? ಎಂಬುದನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುವ ಮೂಲಕ ಪತ್ತೆ ಹಚ್ಚಲು ಸರ್ಕಾರ ಸ್ವಾತಂತ್ರ್ಯ ಕೊಡಬೇಕು. ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಹಿಂದೂಗಳ ಕೊಡುಗೆಯೂ ಸಾಕಷ್ಟಿದೆ ಎಂಬುದನ್ನು ಮರೆಯಬಾರದು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಒಂದು ಸಮುದಾಯವನ್ನು ಬಲಿ ಪಡೆಯುವ ಯತ್ನ ಫಲಿಸದು. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನೂ ಗಟ್ಟಿಯಾಗಿದೆ. ಸರ್ಕಾರ ಇನ್ನಾದರೂ ಪೊಲೀಸ್ ಬಲ ಬಳಸಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ವಿನಾಕಾರಣ ಕ್ರಮಕ್ಕೆ ಮುಂದಾಗುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.