ADVERTISEMENT

ತಿಂಗಳಲ್ಲಿ 28 ಶಿಶು ಮರಣ

ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಜಿಲ್ಲಾಧಿಕಾರಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:54 IST
Last Updated 21 ಆಗಸ್ಟ್ 2019, 13:54 IST
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.   

ಚಿತ್ರದುರ್ಗ: ಜಿಲ್ಲೆಯಲ್ಲಿ ಈವರೆಗೆ 116 ಶಿಶು ಹಾಗೂ 6 ತಾಯಂದಿರು ಮೃತಪಟ್ಟಿದ್ದಾರೆ. ಜುಲೈ ತಿಂಗಳಲ್ಲಿಯೇ 28 ನವಜಾತ ಶಿಶುಗಳು ಕಣ್ಣುಮುಚ್ಚಿವೆ.

ತಾಯಿ ಮತ್ತು ಶಿಶು ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

2019ರ ಜನವರಿಯಿಂದ ಜುಲೈ ವರೆಗೆ ಮೃತಪಟ್ಟ ತಾಯಿ–ಶಿಶು ಪ್ರಕರಣಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತಾಯಿ–ಶಿಶು ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆ ಇದೆ.

ADVERTISEMENT

ಮೃತ ತಾಯಿ–ಶಿಶು ಪ್ರಕರಣಗಳ ವಿಚಾರಣೆಯನ್ನು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಕುಲಂಕಷವಾಗಿ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದ ವೈದ್ಯಕೀಯ ಅಧಿಕಾರಿ, ಪೋಷಕರು ಹಾಗೂ ಆಶಾ ಕಾರ್ಯಕರ್ತೆಯರ ಸಮ್ಮುಖದಲ್ಲಿಯೇ ವಿಚಾರಣೆ ನಡೆಯಿತು. ವೈದ್ಯಕೀಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳ ಕಾರ್ಯವೈಖರಿಯ ಬಗ್ಗೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ಹೊರಹಾಕಿದರು.

‘ಜನಿಸಿದ ಶಿಶು ಮರಣ ಹೊಂದಬಾರದು ಎಂಬುದು ಸರ್ಕಾರದ ಆಶಯ. ಈ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಪ್ರಯತ್ನಪಡಬೇಕಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂ ಕಲ್ಯಾಣ ಇಲಾಖೆ ಕಾರ್ಯ ಯೋಜನೆಯೊಂದನ್ನು ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

‘ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿಯರನ್ನು ಉತ್ತೇಜಿಸಬೇಕು. ಜನಿಸಿದ ಪ್ರತಿ ಶಿಶುವಿಗೂ ರೊಗ ನಿರೋಧಕ ಲಸಿಕೆ ಹಾಕಿಸಬೇಕು. ಗರ್ಭಿಣಿಯರಿಗೆ ಪೌಷ್ಟಿಕ ಆಹಾರ, ಮಾತ್ರೆ, ಲಸಿಕೆ ನೀಡುವ ವ್ಯವಸ್ಥೆ ಇದ್ದರೂ, ಮರಣ ಪ್ರಮಾಣ ತಗ್ಗದಿರುವುದು ಕಳವಳಕಾರಿ ಸಂಗತಿ’ ಎಂದರು.

‘ಪ್ರತಿ ಗರ್ಭಿಣಿಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅಂಗನಾಡಿ ಹಾಗೂ ಆಶಾ ಕಾರ್ಯಕರ್ತೆಯರ ಬಳಿ ಈ ಮಾಹಿತಿ ಲಭ್ಯವಿದೆ. ಹೆರಿಗೆ ದಿನಾಂಕ ಗೊತ್ತಿದ್ದರೂ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ನಿಗಾವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ತಾಯಿ ಅಥವಾ ಶಿಶು ಆರೋಗ್ಯ ಗಂಭೀರವಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಹೀಗೆ ಶಿಫಾರಸು ಮಾಡಿದ ಶೇ 80ರಷ್ಟು ಜನರಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ ಎಂಬ ಸಂಗತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

‘ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಇದ್ದರೆ ವೈದ್ಯಕೀಯ ಕಾಲೇಜು ಹೇಗೆ ನಡೆಸುತ್ತಿದ್ದೀರಿ’ ಎಂದು ಆಡಳಿತ ಮಂಡಳಿಯನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು.

‘ತುರ್ತು ಸಂದರ್ಭದಲ್ಲಿ ಸರ್ಕಾರಿ ವೈದ್ಯರು ಶಿಫಾರಸು ಮಾಡುವ ಯಾವ ಪ್ರಕರಣವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ತಿರಸ್ಕರಿಸಬಾರದು. ನೆಪ ಹೇಳಿ ದಾವಣಗೆರೆ ಆಸ್ಪತ್ರೆಗೆ ಸಾಗಹಾಕಬಾರದು’ ಎಂಬ ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ, ಉಪವಿಭಾಗಾಧಿಕಾರಿ ವಿಜಯಕುಮಾರ್, ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಡಾ. ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.