ADVERTISEMENT

ಚಿತ್ರದುರ್ಗ| ಕ್ಷೀಣಿಸಿದೆ ಕ್ಷಯರೋಗಿಗಳ ಸಂಖ್ಯೆ: ದಿವಾಕರ

ವಿಶ್ವ ಕ್ಷಯರೋಗ ದಿನದಲ್ಲಿ ಜಿಪಂ ಸಿಇಒ ದಿವಾಕರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 5:35 IST
Last Updated 2 ಏಪ್ರಿಲ್ 2023, 5:35 IST
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌.ದಿವಾಕರ ಉದ್ಘಾಟಿಸಿದರು.
ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌.ದಿವಾಕರ ಉದ್ಘಾಟಿಸಿದರು.   

ಚಿತ್ರದುರ್ಗ: ಕ್ಷಯರೋಗವು ಒಂದು ಕಾಲದಲ್ಲಿ ಭಯಾನಕ ರೋಗವಾಗಿತ್ತು. ಈ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಹಾದಿಯಲ್ಲಿ ಆರೋಗ್ಯ ಇಲಾಖೆ ಪಾತ್ರ ಹೆಚ್ಚಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್‌. ದಿವಾಕರ ತಿಳಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕ್ಷಯರೋಗ ನಿರ್ಮೂಲನೆಗೆ ಕೈಜೋಡಿಸಬೇಕಿದೆ. ಪ್ರಸ್ತುತ ದಿನದಲ್ಲಿ ಕ್ಷಯರೋಗಿಗಳ ಸಂಖ್ಯೆ ಕ್ಷೀಣಿಸಿದೆ. 1 ಲಕ್ಷ ಜನಸಂಖ್ಯೆಯಲ್ಲಿ 217 ಜನ ಕ್ಷಯರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಯಾರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರಿಗೆ ಸೋಂಕು ತಗಲುತ್ತದೆ. ಒಬ್ಬ ರೋಗಿಗೆ ಚಿಕಿತ್ಸೆ ಮಾಡದಿದ್ದಲ್ಲಿ ವರ್ಷಕ್ಕೆ 10-15 ಜನಕ್ಕೆ ಕ್ಷಯದ ಸೋಂಕು ಹರಡುತ್ತದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿದೆ. ಹಾಗಾಗಿ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಶ್ಲಾಘಿಸಿದರು.

‘1882ರ ಮಾರ್ಚ್‌ 24ರಂದು ಜರ್ಮನ್‌ ದೇಶದ ರಾಬರ್ಟ್‌ ಕಾಕ್‌ ಎಂಬ ವಿಜ್ಞಾನಿ ಕ್ಷಯರೋಗಕ್ಕೆ ಕಾರಣವಾದ ರೋಗಾಣು ಕಂಡುಹಿಡಿದರು. ಇದರ ಸ್ಮರಣಾರ್ಥವಾಗಿ ದೇಶದ ಎಲ್ಲ ಕಡೆ ವಿಶ್ವ ಕ್ಷಯರೋಗ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಶ್ವಾಸಕೋಶದ ಕ್ಷಯವೇ ಸಾಮಾನ್ಯ ಕ್ಷಯರೋಗವಾಗಿದೆ’ ಎಂದು ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸಿ.ಒ.ಸುಧಾ ತಿಳಿಸಿದರು.

‘2022ನೇ ಸಾಲಿನಲ್ಲಿ ಎಸ್‌ಎನ್‌ಸಿ ಸಮೀಕ್ಷೆ ವರದಿ ಪ್ರಕಾರ ಶೇ 20ರಷ್ಟು ಕ್ಷಯರೋಗಿಗಳ ಸಂಖ್ಯೆ ಇಳಿಕೆ ಕಂಡುಬಂದಿದೆ. ಆದ್ದರಿಂದ ಜಿಲ್ಲೆ ಕಂಚಿನ ಪದಕಕ್ಕೆ ಭಾಜನವಾಗಿದೆ’ ಎಂದು ತಿಳಿಸಿದರು.

ಕಡ್ಡಾಯ ಮತದಾನ ಹಾಗೂ ಕ್ಷಯರೋಗ ನಿರ್ಮೂಲನಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌. ರಂಗನಾಥ್‌, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಕಾಶಿ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಎದೆ ಮತ್ತು ಕ್ಷಯರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಸವರಾಜ ಸಂಗೊಳ್ಳಿ, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ರಾಘವೇಂದ್ರ, ಡಾ.ಬಿ.ವಿ.ಗಿರೀಶ್, ವೈದ್ಯಾಧಿಕಾರಿಗಳಾದ ಡಾ.ಮಧುಕುಮಾರ್‌, ಡಾ.ಸತೀಶ್‌, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌.ಮಂಜುನಾಥ ಇದ್ದರು. ‌

ಕಡ್ಡಾಯ ಮತದಾನಕ್ಕೆ ಪ್ರೇರೇಪಿಸಿ

ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರೂ ‌ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಗ್ರಾಮೀಣ ಭಾಗದ ಆಶಾ, ಅಂಗನವಾಡಿ ಕಾರ್ಯಕರ್ತರು, ಬಿಎಲ್‌ಒಗಳು ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಕೈಜೋಡಿಸಬೇಕು ಎಂದು ಎಂ.ಎಸ್‌.ದಿವಾಕರ ಮನವಿ ಮಾಡಿದರು.

ವೈದ್ಯಾಧಿಕಾರಿಗಳು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ಕರ್ತವ್ಯ ಲೋಪ ಎಸಗುವವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ.

–ಎಂ.ಎಸ್‌.ದಿವಾಕರ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.